ನಿತ್ಯ ಕನ್ನಡ ಬಳಸುವ ಗ್ರಾಮೀಣ ಮಹಿಳೆಯರು ಹಾಗೂ ಮಕ್ಕಳಿಂದ ಕನ್ನಡ ಭಾಷೆ ಉಳಿದಿದೆ : ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ
ತುರುವೇಕೆರೆ : ನಿತ್ಯ ಕನ್ನಡಭಾಷೆಯನ್ನು ಬಳಸುವ ಗ್ರಾಮೀಣ ಮಹಿಳೆಯರು ಹಾಗೂ ಮಕ್ಕಳಿಂದ ಕನ್ನಡ ಭಾಷೆ ಜೀವಂತವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಮಯೂರ ಶಾಲೆಯಲ್ಲಿ ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಹಿಳಾ ಘಟಕ ಉದ್ಘಾಟನೆ,ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು .ಕನ್ನಡ ಭಾಷೆಯೆಂಬುದು ಬತ್ತದ ಚಿಲುಮೆಯಂತಿದ್ದು ಸದಾ ಹರಿಯುವ ಪ್ರವಾಹವೆನಿಸಿದೆ. ಹತ್ತು ಹಲವು ತೊಡರುಗಳ ನಡುವೆಯೂ ಸಹ ಕನ್ನಡ ಭಾಷೆ ತನ್ನ ವ್ಯಾಫ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿರುವುದು ಅಭಿವೃದ್ದಿಯ ಸಂಕೇತವಾಗಿದೆ ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ ಮಕ್ಕಳ ಪ್ರತಿಭೆಯನ್ನು ಪುರಸ್ಕರಿಸುವ ಮೂಲಕ ಕನ್ನಡದ ಅಸ್ಮಿತೆಗೆ ಮುಂದಾಗಿರುವ ತಾಲೂಕು ಕಸಾಪ ಕಾರ್ಯ ಅನನ್ಯವಾದುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ತಹಶೀಲ್ದಾರ್ ರೇಣುಕುಮಾರ್ ಮಾತನಾಡಿ ಕನ್ನಡ ಭಾಷೆಯನ್ನು ಸಂರಕ್ಷಿಸಬೇಕಾದ ಗುರುತರ ಜವಾಬ್ದಾರಿ ನಾಡಿನ ಎಲ್ಲರ ಕನ್ನಡಿಗರದ್ದಾಗಿದೆ. ಇತ್ತೀಚೆಗೆ ರಾಜಧಾನಿಯಲ್ಲಿರುವ ಕನ್ನಡಿಗರು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಿರುವುದು ನೋವಿನ ಸಂಗತಿ. ನಮ್ಮ ಭಾಷೆ, ನೆಲ, ಜಲದ ,ಬಗ್ಗೆ ಅಭಿಮಾನಪಡುವ ಮೂಲಕ ನಮ್ಮ ಜನ್ಮಭೂಮಿಯನ್ನು ಗೌರವಿಸಬೇಕು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಪದ್ಮನಾಭ ಮಾತನಾಡಿ ಸಂಕಷ್ಟಗಳ ಕಹಿಯುಂಡವನಿಗೆ ಸುಖದ ಸಿಹಿ ರುಚಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ವಂಡರ್ ಲಾ ಪರಿಚಯಿಸುವ ಮುನ್ನ ಕವಿಶೈಲ,ಸಾಧನಕೇರಿಯನ್ನು ಪೋಷಕರು ಪರಿಚಯಿಸಬೇಕಿದೆ. ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಲು ಆದ್ಯತೆ ನೀಡಿದಾಗ ಯಶಸ್ಸು ತಾನಾಗೇ ಅವರನ್ನು ಹಿಂಬಾಲಿಸುತ್ತದೆ. ಎಂದರು.
ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್‌ಪ್ರೇರಣಾ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಘಟಕವನ್ನು ಪ.ಪಂ. ಆದ್ಯಕ್ಷೆ ಆಶಾರಾಜಶೇಖರ್ ಉದ್ಘಾಟಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು , ಕನ್ನಡ ಶಿಕ್ಷಕರುಗಳನ್ನು, ಪ್ರತಿಭಾವಂತ ಮಕ್ಕಳ ಪೋಷಕರನ್ನು ಕಸಾಪ ಅಧ್ಯಕ್ಷ ಡಿ.ಪಿ.ರಾಜು. ಹಾಗೂ ಮತ್ತಿತರ ಗಣ್ಯರುಗಳು ಅಭಿನಂದಿಸಿದರು.
ಜಿಲ್ಲಾ ಕಸಾಪ ಸಂಚಾಲಕ ಯೋಗಾನಂದ್, ತಾಲೂಕು ಕಸಾಪ ಗೌರವಾದ್ಯಕ್ಷ ಟಿ.ಎಸ್.ಬೋರೇಗೌಡ,ಅದ್ಯಕ್ಷ ಡಿ.ಪಿ.ರಾಜು, ಮಹಿಳಾ ಘಟಕದ ರೂಪಶ್ರೀ,ಪದಾದಿಕಾರಿಗಳಾದ ಷಣ್ಮುಖಪ್ಪ, ದಿನೇಶಕುಮಾರ್, ಪರಮೇಶ್ವರಸ್ವಾಮಿ, ಹಿರಿಯ ವಕೀಲ ಧನಪಾಲ್, ಅಮಾನಿಕೆರೆ ಮಂಜುನಾಥ್,ನಂಜೇಗೌಡ, ಸೇರಿದಂತೆ ಸಾಹಿತ್ಯಾಸಕ್ತರುಗಳು, ಪೋಷಕರು ಇದ್ದರು.