ಎಂ.ಎ.ಆರ್. ಬಡಾವಣೆಯಲ್ಲಿ ಉದ್ಯಾನವನ ನಾಶಪಡಿಸಿ ಅಕ್ರಮ ದೇವಾಲಯ ನಿರ್ಮಾಣ : ದೂರು ನೀಡಿದರು ಕ್ರಮ ಜರುಗಿಸದ ಪುರಸಭೆ ಅಧಿಕಾರಿಗಳು : ಡಾ.ನರೇಂದ್ರ ಬಾಬು ಆರೋಪ
ಪಾವಗಡ : ಪಟ್ಟಣದ ಎಂ.ಎ.ಆರ್ ಬಡಾವಣೆಯಲ್ಲಿ ಪುರಸಭೆಯ ಲಕ್ಷಾಂತರ ರೂ. ಉಪಯೋಗಿಸಿ ಅಭಿವೃದ್ದಿಪಡಿಸಿರುವ ನೂತನ ಉದ್ಯಾನವನವನ್ನು ನಾಶಪಡಿಸಿ ಅಕ್ರಮವಾಗಿ ದೇವಾಲಯ ನಿರ್ಮಿಸುತ್ತಿರುವುದಕ್ಕೆ ವಿರೋಧಿಸಿ ದೂರು ನೀಡಿದ್ದರು ಸಹ ಪುರಸಭೆ ಅಧಿಕಾರಿಗಳು ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆಂದು ಡಾ.ನರೇಂದ್ರ ಬಾಬು ಆರೋಪಿಸಿದ್ದಾರೆ.
ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಪಟ್ಟಣದ ಎಂಇಆರ್ ಬಡಾವಣೆಯ ತುಮಕೂರು ರಸ್ತೆಗೆ ಹೊಂದಿಕೊಂಡಿರುವ ಉದ್ಯಾನವನವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಪುರಸಭೆಯ ಲಕ್ಷಾಂತರ ರೂ. ನಿಧಿ ಉಪಯೋಗಿಸಿ ನಿರ್ಮಿಸಲಾಗಿತ್ತು, ಆದರೆ ಸಾರ್ವಜನಿಕರ ಉಪಯೋಗಕ್ಕೂ ಮುನ್ನವೇ ಪ್ರಭಾವಿಗಳು ಪುರಸಭೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಕ್ರಮ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಜಿಲ್ಲಾ ನಗರಾಭಿವೃದ್ದಿ ಕೋಶಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಉದ್ಯಾನವನದಲ್ಲಿ ಅಕ್ರಮ ದೇವಸ್ಥಾನ ನಿರ್ಮಿಸುತ್ತಿರುವವರ ವಿರುದ್ದ ಕ್ರಮ ಜರುಗಿಸಿ ನಷ್ಠಪರಿಹಾರ ವಸೂಲಿಮಾಡುವಂತೆ ಆದೇಶ ನೀಡಲಾಗಿದೆ ಆದರೆ ಪುರಸಭೆ ಅಧಕಾರಿಗಳು ಮಾತ್ರ ನಿರ್ಲಕ್ಷ ತೋರುತ್ತಿದ್ದಾರೆ, ಆದೇಶ ಪಾಲಿಸುವಲ್ಲಿ ವಿಳಂಭ ಮುಂದುವರೆದರೆ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.
ಈ ಕೂಡಲೆ ಪುರಸಭೆ ಮುಖ್ಯಾಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಿ ಪುರಸಭೆಯ ಆಸ್ತಿಗೆ ನಷ್ಟ ಉಂಟುಮಾಡಿದವರ ವಿರುದ್ದ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಷ್ಟದ ಮೊತ್ತವನ್ನು ವಸೂಲಿಮಾಡಿ ಸಾರ್ವಜನಿಕ ಉದ್ಯಾನವನ ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.