ತುಮಕೂರು : ದೇಶದ ಅಭಿವೃದ್ದಿಯಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಮಹತ್ವದ್ದಾಗಿದೆ.ಐದು ನೂರು ವರ್ಷಗಳ ಹಿಂದೆಯೇ ಸ್ಮಾರ್ಟ್ಸಿಟಿಯ ಪರಿಕಲ್ಪನೆ ಕೊಟ್ಟವರು ನಾಡುಪ್ರಭು ಕೆಂಪೇಗೌಡರು.ಹಾಗಾಗಿ ನಾವು ಒಕ್ಕಲಿಗರು ಎಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ,ಎಲ್ಲರೂ ಒಗ್ಗೂಡಿ ನಮ್ಮ ಶಕ್ತಿ ಏನು ಎಂದು ದೇಶಕ್ಕೆ ಪರಿಚಯಿಸಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ಕುಂಚಿಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘ ವತಿಯಿಂದ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವದ ಬೃಹೃತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಡೀ ಪ್ರಪಂಚಕ್ಕೆ ವಿಶ್ವ ಮಾನವ ಪರಿಕಲ್ಪನೆಯನ್ನು ಕೊಟ್ಟವರು ರಾಷ್ಟ್ರಕವಿ ಕುವೆಂಪು.ವಿಶ್ವದೆಲ್ಲೆಡೆ ಇಂದು ಕುಂಚಟಿಗ ಸಮುದಾಯದ ಜನರನ್ನು ಕಾಣಬಹುದಾಗಿದೆ. ಇದು ಹೆಮ್ಮೆ ಪಡುವಂತಹ ವಿಚಾರ.ಇಂತಹ ಸಮುದಾಯವನ್ನು ಕೇಂದ್ರ ಓಬಿಸಿ ಜಾತಿ ಪಟ್ಟಿಗೆ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕುಂಚಿಟಿಗ ಸಮುದಾಯ ಉಪಕಾರ ಸ್ಮರಣೆ ಇರುವ ಜನಾಂಗ ಎಂಬುದು ಈ ಕಾರ್ಯಕ್ರಮದ ಮೂಲಕ ಸಾಭೀತಾಗಿದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಸಣ್ಣ ಸಹಾಯವನ್ನೇ ನೆನಪು ಮಾಡಿಕೊಂಡು ಇಂದು ನನ್ನನ್ನು ಕರೆಯಿಸಿ, ಆ ಕಟ್ಟಡ ಉದ್ಘಾಟಿಸಿರುವುದು ಮನ ತುಂಬಿ ಬಂದಿದೆ.ಅನೇಕ ಪರಕೀಯರ ಆಕ್ರಣದ ನಡುವೆಯೂ ಭಾರತ ವಿವಿಧೆತೆಯಲ್ಲಿ ಏಕತೆಯನ್ನು ಉಳಿಸಿಕೊಂಡು ಬಂದಿದೆ ಎಂದರೆ,ಆದಕ್ಕೆ ಇಂತಹ ಸಮುದಾಯಗಳೇ ಕಾರಣ.ಕೇವಲ ಭಾಷಣದಿಂದ ಏನು ಸಾಧ್ಯವಿಲ್ಲ. ಅನುಷ್ಠಾನದಿಂದ ಮಾತ್ರ ಏನಾದರೂ ಅಭಿವೃದ್ದಿ ಸಾಧ್ಯ. ಅದನ್ನು ಈ ಸಮಾಜ ಅಕ್ಷರಸಃ ಮಾಡಿ ತೋರಿಸಿದೆ ಎಂದು ಸಂಘದ ಬೆಳವಣಿಗೆಗಳ ಕುರಿತು ಡಿ.ವಿ.ಸದಾನಂದಗೌಡ ಹರ್ಷ ವ್ಯಕ್ತಪಡಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ,ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಜಾಗೃತಿ ಅಗತ್ಯ.ಈ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳ ಹಿಂದೆಯೇ ಬಿ.ರಂಗಣ್ಣನವರಂತಹ ಹಿರಿಯರ ದೂರದೃಷ್ಟಿಯಿಂದ ವಿದ್ಯಾರ್ಥಿ ನಿಲಯಗಳು ಪ್ರಾರಂಭಗೊಂಡು, ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆದಿದೆ.ಇಡೀ ಪ್ರಪಂಚವೇ ಭಾರತವನ್ನು ವಿಶ್ವಗುರು ಎಂದು ಪರಿಗಣಿಸಿರುವ ಸಂದರ್ಭದಲ್ಲಿ ಯುವಜನತೆ ವಿದ್ಯಾವಂತರಾಗಿ ರಾಷ್ಟçದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕೆಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ,ಕುಂಚಿಟಿಗ ಒಕ್ಕಲಿಗ ಸಮುದಾಯ ಕೇಂದ್ರ ಒಬಿಸಿ ಜಾತಿಪಟ್ಟಿಯಲ್ಲಿ ಇಲ್ಲದ ಕಾರಣ.ಇಂದು ನಮ್ಮ ಮಕ್ಕಳು ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ.ಒಕ್ಕಲಿಗ ಸಮುದಾಯದ ಆರು ಗುಂಪುಗಳಲ್ಲಿ ಐದು ಗುಂಪುಗಳು ಓಬಿಸಿ ಪಟ್ಟಿಯಲ್ಲಿದ್ದು,ಕುಂಚಟಿಗ ಗುಂಪನ್ನು ಹೊರಗಿಡ ಲಾಗಿದೆ.ಸಮಾಜದ ಸ್ವಾಮೀಜಿಗಳು, ರಾಜಕೀಯ ಮುಖಂಡರುಗಳು ಈಗಾಗಲೇ ಕೇಂದ್ರದಲ್ಲಿರುವ ರಾಜ್ಯದ ಶಿಫಾರಸ್ಸನ್ನು ಅಂಗೀಕರಿಸಲ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.
ಕುಂಚಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮೀಜಿ, 75 ವರ್ಷಗಳ ಆಡಳಿತದಲ್ಲಿ ಮೀಸಲಾತಿ ಗೊಂದಲಗಳು ಇವೆ.ಆರ್ಥಿಕ,ಸಾಮಾಜಿಕ, ರಾಜಕೀಯ ಮೀಸಲಾತಿಯಿಂದ ಅನೇಕ ಸಮುದಾಯಗಳು ವಂಚಿತವಾಗಿವೆ,ಸ್ಪಷ್ಟ ಆದೇಶವನ್ನು ಹೊರಡಿಸಿಲ್ಲ,ಕೇಂದ್ರವಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದರು,ಬದಲಾಗಲಿಲ್ಲ, ರಾಜ್ಯದಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ವಿಧಾನಸಭೆ,ಪಾರ್ಲಿಮೆಂಟಿನಲ್ಲಿ ಏನು ಮಾತನಾಡದ ಜನಪ್ರತಿನಿಧಿಗಳಿಂದ ಯಾವುದೇ ಸಮುದಾಯದ ಸಮಸ್ಯೆ ಬಗೆಹರಿಯು ವುದಿಲ್ಲ, ಕುಲಶಾಸ್ತ್ರೀಯ ಅಧ್ಯಯನ ಮಂಡನೆಯಾಗದ ಬಗ್ಗೆ ಯಾವ ಮುಖಂಡರು ಮಾತನಾಡಲಿಲ್ಲ, ಹಿಂದುಳಿದ ವರ್ಗಕ್ಕೆ ಸೇರಿಸಲಾಗುವುದಿಲ್ಲ,ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ವರದಿಯಲ್ಲಿ ಇಲ್ಲ.ಕೇಂದ್ರ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೆ ಚರ್ಚಿಸಿ,ಕುಂಚಿಟಿಗ ಸಮುದಾಯವನ್ನು ಒಬಿಸಿಗೆ ಸೇರಿಸಲು ಚರ್ಚಿಸುತ್ತೇನೆ,ಕುಂಚಿಟಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಶ್ರಮಿಸುವುದಾಗಿ ತಿಳಿಸಿದರು.
ಕುಂಚಶ್ರೀ ಪ್ಯಾಲೇಸ್ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,ಕುಂಚಟಿಗ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದನ್ನು ಕೇಂದ್ರ ಒಪ್ಪಿಲ್ಲ.ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ, ರಾಜ್ಯ ಸರಕಾರಗಳಿಗೆ ಓಬಿಸಿ ಪಟ್ಟಿಗೆ ಸೇರಿಸುವ ಎಲ್ಲ ಅಧಿಕಾರ ಇದೆ.ಹಾಗಾಗಿ ರಾಜ್ಯದಲ್ಲಿಯೇ ಕುಂಚಟಿಗರನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿಸಲು ಎಲ್ಲಾ ರೀತಿಯ ಕ್ರಮ ವಹಿಸಬಹುದಾಗಿದೆ. ಮಳೆ ನೀರನ್ನು ನಂಬಿ ಬದುಕುತ್ತಿರುವ ರೈತರ ಬದುಕು ಕಂಡಿದ್ದೇನೆ, ಭದ್ರ ಮೇಲ್ದಂಡೆ ಯೋಜನೆ ನೆನೆಗುಂದಿಗೆ ಬಿದ್ದಿತ್ತು, ಅದಕ್ಕೆ ಮತ್ತೆ ನಾನು ಚಾಲನೆ ನೀಡಿದೆ, ಇದರಿಂದ ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುಕೂಲವಾಗಲಿದೆ ಎಂದರು.
ರೈತರು ಸಂದರ್ಭಕ್ಕೆ ತಕ್ಕಂತೆ ಬೆಳೆಯಬೇಕು,ಇಸ್ರೇಲ್‌ಗೆ ಹೋಗಿ ಕಲಿಯಬೇಕಾಗಿರುವುದು ಏನು ಇಲ್ಲ.ಈ ಬಾರಿ ನಾನು ಬೆಳೆದಿರುವ ಬಾಳೆಯಿಂದ ಎಂಭತ್ತರಿಂದ ಒಂದು ಲಕ್ಷರೂ ಆದಾಯ ಬರುತ್ತದೆ.ಯಾವ ರೀತಿ ಮುಖ್ಯಮಂತ್ರಿಯಾಗುತ್ತೇನೋ ಗೊತ್ತಿಲ್ಲ,ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ, ಮೂರನೇ ಬಾರಿ ಜನರು ಆರ್ಶೀವಾದವಿದ್ದರೆ, ಪರಮ ಪೂಜ್ಯರ ಕೃಪೆ ಇದ್ದರೆ ಹಾಗೆ ಆಗುತ್ತೀನಿ ಎಂಬ ವಿಶ್ವಾಸವಿದೆ, ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ನಾನೇ ಸೇರಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಜಿಲ್ಲೆಯ ನೀರಾವರಿ ಯೋಜನೆ ದೇವೇಗೌಡರ ಕೊಡುಗೆ, ದೇವೇಗೌಡರ ಆರೋಗ್ಯ ಕೆಡುತ್ತಿದೆ, ಅವರು ಇಂದು ನೋವಿನಲ್ಲಿದ್ದರೆ ಅದು ಇಲ್ಲಿನ ಕುತಂತ್ರದ ರಾಜಕೀಯವೇ ಕಾರಣ.ವಿರೋಧ ಪಕ್ಷದಲ್ಲಿದ್ದುಕೊಂಡೆ ದೇವೇಗೌಡರು ಅನೇಕ ಕೊಡುಗೆ ನೀಡಿದ್ದಾರೆ, ಅವರ ಹೆಸರು ಉಳಿಸುವ ಕೆಲಸವನ್ನು ಮಾಡುತ್ತೇನೆ, ಕುಂಚಿಟಿಗ ಒಕ್ಕಲಿಗರ ವಿದ್ಯಾಸಂಸ್ಥೆ ಗೆ ಅಗತ್ಯ ಸಹಕಾರ ನೀಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ನಾಥಸ್ವಾಮೀಜಿ ಮಾತನಾಡಿ,ಕೇಂದ್ರದ ಓಬಿಸಿ ಪಟ್ಟಿಗೆ ಕುಂಚಟಿಗ ಸಮುದಾಯವನ್ನು ಸೇರಿಸಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ.ಒಕ್ಕಲಿಗರಿಗೆ ಸಿಗುತ್ತಿರುವ ಈ ಸವಲತ್ತು ಕುಂಚಿಟಿಗರಿಗೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂಬ ವಿಶ್ವಾಸವಿದೆ. ಮೊದಲು ಒಕ್ಕಲಿಗ ಎಂಬ ಪದವನ್ನು ತಮ್ಮ ಜಾತಿ ಪಟ್ಟಿಯಲ್ಲಿ ನಮೂದಿಸಬೇಕು.ಒಕ್ಕಲಿಗ ಎಂಬುದು ಒಂದು ಹಣ್ಣಾದರೆ, ಅದರ ಮೇಲ್ಪದರವೇ ಉಪಪಂಗಡಗಳು, ಹಾಗಾಗಿ ವಿಂಗಡಿಸುವ ಪ್ರಯತ್ನ ಸಲ್ಲದು ಎಂದರು.
ಒಕ್ಕಲಿಗ ಸಮುದಾಯ ಒಂದು ಸಾಮ್ರಾಜ್ಯ ಕಟ್ಟಿ ಆಡಳಿತ ನಡೆಸಿದ ಸಮುದಾಯ. ಆಡಳಿತ ಅವರಿಗೆ ಕರಗತ.ನಾವು ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಒಗ್ಗೂಡಿಸುವ ಕೆಲಸ ಮಾಡಲು ಬಂದವರು.ಒಬಿಸಿ ಪಟ್ಟಿಗೆ ಸೇರಬೇಕಾದರೆ ನಮ್ಮ ಶಕ್ತಿ ಪ್ರದರ್ಶನ ಅನಿವಾಯ.ಅದು ವಿಧಾನಸಭೆಯ ಒಳಗೆ ಮತ್ತು ಹೊರಗೆ ಆಗಬೇಕಿದೆ. ಹೆಚ್.ಡಿ.ಕುಮಾರಸ್ವಾಮಿ ಇನ್ನಾರು ತಿಂಗಳು ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಆ ಕೆಲಸ ಅಂದೆ ಪೂರ್ಣಗೊಳ್ಳತ್ತಿತ್ತು. ಮುಂದೆ ಮಾಡಿಯೇ ತೀರುತ್ತೇವೆ ಎಂಬ ಅಚಲ ನಂಬಿಕೆ ನಮ್ಮದು ಎಂದು ಶ್ರೀಶ್ರೀನಿರ್ಮಲಾನಂದನಾಥಸ್ವಾಮೀಜಿ ನುಡಿದರು.
ಈ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರಲ್ಲಿ ನಮ್ಮ ಸಮುದಾಯದ ನಾಲ್ಕು ಜನರಲ್ಲಿ ಶಿರಾ ತಾಲೂಕಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದು ಸಂತೋಷದ ವಿಚಾರ. ನಮ್ಮಲ್ಲಿಯೂ ಸಾಕಷ್ಟು ದೋಷಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಒಗ್ಗೂಡಿ, ಸಮುದಾಯದ ಬೆಳವಣಿಗೆಗೆ ಹೋರಾಟ ನಡೆಸೋಣ ಎಂದು ಆದಿಚುಂಚನಗಿರಿ ಸ್ವಾಮೀಜಿ ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪಟ್ಟನಾಯಕನಹಳ್ಳಿ ಡಾ.ಶ್ರೀಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ,ಕುಂಚಿಟಿಗ ಒಕ್ಕಲಿಗ ಸಮುದಾಯ ಕೇಂದ್ರ ಓಬಿಸಿ ಜಾತಿ ಪಟ್ಟಿಯಲ್ಲಿ ಇಲ್ಲದಿರುವುದು ನಮ್ಮ ಸ್ವಯಂ ಕೃತ ಅಪರಾಧ.ನಾವೆಲ್ಲರೂ ಹಿಂದು ಕುಂಚಟಿಗ ಎಂದು ನಮ್ಮ ಶಾಲಾ ದಾಖಲಾತಿಗಳಲ್ಲಿ ಬರೆಸದೆ ಒಕ್ಕಲಿಗ ಎಂದು ಬರೆಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸಮುದಾಯದಲ್ಲಿ ಒಂದೆರಡು ಐಎಎಸ್,ಜನಪ್ರತಿನಿಧಿಗಳನ್ನೇ ನೋಡಿ, ಇದು ಮುಂದುವರೆದ ಜಾತಿ ಎಂಬ ತೀರ್ಮಾನಕ್ಕೆ ಆಯೋಗ ಬಂದಂತಿದೆ. ಹಾಗಾಗಿ ನಮ್ಮ ಉಪಪಂಗಡಗಳು ಎಷ್ಟೇ ಇರಲಿ, ನಾವೆಲ್ಲರೂ ಒಕ್ಕಲಿಗ ಎಂಬ ವಿಶಾಲ ತಳಹದಿಯ ಮೇಲೆ ಮುಂದುವರೆದರೆ ಮೀಸಲಾತಿ ಪಡೆಯಲು ಸಾಧ್ಯವಾಗುತ್ತದೆ.ನಾನು ಯಾವುದೇ ಮಠದ ಉತ್ತರಾಧಿಕಾರಿಯಾಗಬೇಕೆಂಬ ಕನಸು ಕಂಡಿಲ್ಲ.ಸಮುದಾಯದ ಒಳಿತಿಗಾಗಿ ದುಡಿಯಲು ಸಿದ್ದ.ರಾಜಕೀಯವಾಗಿಯೂ ಸಮುದಾಯವನ್ನು ಮುಂದೆ ತರಲು ಪ್ರಯತ್ನಿಸೊಣ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು,50ವರ್ಷಗಳಿಂದ ಬಿ.ರಂಗಣ್ಣನವರ ದೂರದೃಷ್ಟಿಯ ಫಲವಾಗಿ ಹುಟ್ಟಿಕೊಂಡು ಈ ಸಂಘದ ಇಂದು ಬೃಹದಾಕಾರವಾಗಿ ಬೆಳೆದಿದೆ.ಶಾಲೆಯ ಜೊತೆಗೆ,ಬಾಲಕರ,ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.211ರಲ್ಲಿ ಮಾಜಿ ಸಿ.ಎಂ.ಸದಾನಂದಗೌಡರು ನೀಡಿದ ಒಂದು ಕೋಟಿರೂ ಹಾಗೂ ಸಿದ್ದರಾಮಯ್ಯನವರು ನೀಡಿದ ಒಂದು ಕೋಟಿ ರೂ ಸೇರಿದಂತೆ 6.50 ಕೋಟಿ ರೂಗಳಲ್ಲಿ ಕುಂಚಟಿಗ ಭವನ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ 1.50 ಕೋಟಿ ರೂಗಳಲ್ಲಿ ಕುಂಚಶ್ರೀ ಪ್ಯಾಲೇಸ್ ಸಹ ಇಂದು ಉದ್ಘಾಟನೆಗೊಂಡಿದೆ.ಅಲ್ಲದೆ ತಲಾ 2.30 ಕೋಟಿ ರೂಗಳಲ್ಲಿ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಹೆಚ್ಚುವರಿ ಕೊಠಡಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ,ಸಿ.ಎಂ.ರಾಜೇಶಗೌಡ,ಚಿದಾನAದ ಎಂ ಗೌಡ ಅವರುಗಳು ಸಮುದಾಯದ ಬೆಳವಣಿಗೆ ಹಾಗೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಪ್ರಾಸ್ತಾಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿ.ಪಂ ಬಳಿ ಇರುವ ಕುಂಚಟಿಗ ಭವನ, ಕುಂಚಶ್ರೀ ಪಾಲ್ಯೇಸ್‌ನ ಉದ್ಘಾಟನೆ ನಂತರ, ಸಂಘ ಸಂಸ್ಥಾಪಕರಾದ ಬಿ.ರಂಗಣ್ಣ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು, ವಿವಿದ ಕಲಾ ತಂಡಗಳ ಪ್ರದರ್ಶನದೊಂದಿಗೆ ಗಾಜಿನಮನೆಯವರೆಗೆ ಮೆರವಣಿಗೆಯಲ್ಲಿ ತರಲಾಯಿತು.
ವೇದಿಕೆಯಲ್ಲಿ ಶಾಸಕರಾದ ಜಿ.ಬಿ.ಜೋತಿಗಣೇಶ್,ರೇಷ್ಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ,ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್,ಮಾಜಿ ಸಚಿವ ಎಸ್.ಶಿವಣ್ಣ,ಸಿ.ಚಿಕ್ಕಣ್ಣ,ಪ್ರೊ.ಕೆ.ಸಿ.ವೀರಣ್ಣ,ಕೆ.ವಿ.ನಾಗಪ್ಪ,ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು, ಉಪಾಧ್ಯಕ್ಷ ವೈ.ಆರ್.ವೇಣುಗೋಪಾಲ್,ಕಾರ್ಯದರ್ಶಿ ಎಂ.ರಾಜಕುಮಾರ್,ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ, ಮುರುಳೀಧರ ಹಾಲಪ್ಪ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಸಕ್ತ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿರಾ ತಾಲೂಕಿನ ಕಲ್ಪಶ್ರೀ ಮತ್ತು ಅರುಣ ಅವರುಗಳನ್ನು ಅಭಿನಂದಿಸಲಾಯಿತು.