ಗುಬ್ಬಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮೂಲಕ ಜೆಡಿಎಸ್ ಪಕ್ಷಕ್ಕೆ ಅನ್ಯಾಯ ಮಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡಲೇ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಗುಬ್ಬಿ ಜೆಡಿಎಸ್ ಕಾರ್ಯಕರ್ತರು ಶಾಸಕರ ವಿರುದ್ಧ ಘೋಷಣೆ ಕೂಗಿ ಪಟ್ಟಣದ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು.
ಪಟ್ಟಣದ ಸುಭಾಷನಗರ ಬಡಾವಣೆಯಲ್ಲಿನ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ಬಸ್ ನಿಲ್ದಾಣ ತಲುಪಿದ ಜೆಡಿಎಸ್ ಕಾರ್ಯಕರ್ತರು ಶಾಸಕರ ವಿರುದ್ದ ಘೋಷಣೆ ಕೂಗಿ ಕೋಮುವಾದದ ಬಿಜೆಪಿ ಪಕ್ಷಕ್ಕೆ ಮತ ನೀಡಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಗುಬ್ಬಿ ಶಾಸಕರು ವಚನ ಭ್ರಷ್ಟರು ಹಾಗೂ ಹಣಕ್ಕೆ ತಮ್ಮ ಮತ ಮಾರಿಕೊಂಡವರು. ಈ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಜೆಡಿಎಸ್ ನಾನು ಬಿಟ್ಟಿಲ್ಲ ಎಂದು ಹೇಳಿಕೆಕೊಂಡೇ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ. ಶಾಸಕರಾಗಿರುವುದು ಜೆಡಿಎಸ್ ಪಕ್ಷದಿಂದ ಮಾತುಕತೆ ಕಾಂಗ್ರೆಸ್ ನಲ್ಲಿ ನಡೆಸಿ ಈಗ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದು ಅವರ ಪಕ್ಷ ನಿಷ್ಠೆ ಇಲ್ಲೇ ಪ್ರದರ್ಶನವಾಗಿದೆ. ಈ ಹಿಂದೆ ಮಾಧ್ಯಮದಲ್ಲೇ ಹೇಳಿಕೆ ನೀಡಿ ಜೆಡಿಎಸ್ ಬಿಡುವ ಮಾತುಗಳಾಡಿದ್ದರು. ನಂತರ ಕುಮಾರಣ್ಣ ವಿರುದ್ಧ ನಾಲಿಗೆ ಹರಿಬಿಟ್ಟು ಕಾಂಗ್ರೆಸ್ ನತ್ತ ಹೋಗುವ ಸುಳಿವು ನೀಡಿದ್ದರು. ನಂತರ ಪಕ್ಷ ಸಂಘಟನೆಗೆ ನನ್ನನು ನೇಮಿಸಿದ ತಕ್ಷಣ ಬಣ್ಣ ಬದಲಿಸಿ ಬೇರೆ ಅಭ್ಯರ್ಥಿ ಘೋಷಣೆ ಮಾಡಿರುವ ಕಾರಣ ಬೇರೆ ದಾರಿ ನೋಡಬೇಕು ಎಂದು ಹೇಳಿದ್ದೀರಿ. ನಂತರ ಕುಮಾರಣ್ಣ ಕರೆ ಮಾಡಿ ಮಾತುಕತೆಗೆ ಬನ್ನಿ ಅಂದಿರಿ. ಹೀಗೆ ದಿನಕ್ಕೊಂದು ಮಾತು ಎಲ್ಲರಿಗೂ ತಿಳಿದಿದೆ. ಗುಬ್ಬಿ ಜನತೆ ಮುಂದಿನ ದಿನ ತಕ್ಕ ಪಾಠ ಕಲಿಸಲಿದ್ದಾರೆ. ನಂಬಿಸಿ ಕುತ್ತಿಗೆ ಕುಯ್ಯುವ ಬಗ್ಗೆ ಸಾಕಷ್ಟು ಬಾರಿ ನೀವೇ ಹೇಳಿ ತಾವು ಮಾಡಿದ್ದೇನೂ ಎಂದು ಪ್ರಶ್ನಿಸಿದರು.
ಮಾಜಿ ಪಪಂ ಅಧ್ಯಕ್ಷ ಜಿ.ಡಿ.ಸುರೇಶಗೌಡ ಮಾತನಾಡಿ ಜೆಡಿಎಸ್ ಪಕ್ಷದಿಂದ ಬಿಫಾರಂ ಪಡೆದು ಶಾಸಕರಾಗಿ ಬೇರೆ ಪಕ್ಷಕ್ಕೆ ಮತ ನೀಡಿದ್ದು ಸರಿಯಲ್ಲ. ನೈತಿಕತೆ ಇದ್ದಲ್ಲಿ ಕೂಡಲೇ ಶಾಸಕ ಸ್ಥಾನಕ್ಕೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಬೇಕು. ಕಳೆದ 20 ವರ್ಷದಿಂದ ಈ ಬಣ್ಣದ ನಾಟಕ ಈಗ ಸಾರ್ವಜನಿಕರ ಮುಂದೆ ಬಯಲಾಗಿದೆ. ಗುಬ್ಬಿ ವೀರಣ್ಣ ಅವರ ತವರೂರಲ್ಲಿ ಈ ನಾಟಕದಷ್ಟೇ ಹೆಸರು ಬಂದೂಗಿದೆ. ಮುಂದಿನ ದಿನದಲ್ಲಿ ಮತದಾರರು ಸೂಕ್ಷ್ಮವಾಗಿ ಆಲೋಚಿಸುತ್ತಾರೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ನಂತರ ಜೆಡಿಎಸ್ ಏಜೆಂಟ್ ಗೆ ಮತಪತ್ರ ತೋರುವ ಸಂದರ್ಭದಲ್ಲಿ ತನ್ನ ಮತವನ್ನು ಹೆಬ್ಬಟ್ಟಿನಲ್ಲಿ ಮುಚ್ಚಿ ತಮ್ಮ ತಪ್ಪು ಮುಚ್ಚಿಕೊಂಡು ನಂತರ ಜೆಡಿಎಸ್ ಗೆ ಮತ ಹಾಕಿರುವುದಾಗಿ ಹೇಳಿಕೆ ನೀಡಿದ್ದು ಅವರ ಕುತಂತ್ರ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಕಿಡಿಕಾರಿದರು.
ಎಪಿಎಂಸಿ ಸದಸ್ಯ ಜಿ.ಎಂ.ಶಿವಲಿಂಗಯ್ಯ ಮಾತನಾಡಿ ನಾಲ್ಕು ಬಾರಿ ಶಾಸಕರಾಗಿ ಅಭಿವೃದ್ಧಿ ಅಂತೂ ಮಾಡಲಿಲ್ಲ. ಪಕ್ಷ ನಿಷ್ಠೆ ಆದರೂ ತೋರಬೇಕಿತ್ತು. ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಮತ ನೀಡಿ ಜೆಡಿಎಸ್ ಗೆ ಹಾಕಿದ್ದೇನೆ ಎಂದು ಹೇಳುವ ಸುಳ್ಳು ಇಡೀ ರಾಜ್ಯವೇ ಅವಲೋಕಿಸಿದೆ. ಇಡೀ ಗುಬ್ಬಿ ಕ್ಷೇತ್ರಕ್ಕೆ ಮಾಡಿದ ಮೋಸ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಶಾಸಕರ ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚಿಕ್ಕೀರಯ್ಯ, ಫಿರ್ದೋಸ್ ಆಲಿ, ಸಂಜಯ್, ನಾಗರಾಜ್, ಡಿ.ರಘು, ಸಂತೋಷ್, ಗೋಪಾಲಗೌಡ, ಮನೋಜ್, ನವೀನ್ ಇತರರು ಇದ್ದರು.