ತುಮಕೂರು : ಸಚಿವರ ಮನೆಮುಂದೆ ಪ್ರತಿಭಟನೆ ನಡೆಸಿದ್ದೇನೆ ನೆಪಮಾಡಿಕೊಂಡು ಗೃಹ ಸಚಿವರ ಆದಿಯಾಗಿ ಬಹುತೇಕ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಆದರೆ ಜಿಲ್ಲೆಯಲ್ಲಿ ಇಬ್ಬರು ದಲಿತ ಯುವಕರ ಕೊಲೆಯಾದಾಗ ನಿಮ್ಮ ಕಾರ್ಯವೈಖರಿ ಏನಾಗಿತ್ತು ಎಂಬದನ್ನು ಬಿಜೆಪಿ ಸರಕಾರ ಜನತೆಗೆ ತಿಳಿಸಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಇಂದು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ,ಬಂಧನದಲ್ಲಿರುವ ಎನ್.ಎಸ್.ಯು.ಐ ಕಾರ್ಯಕರ್ತರಿಗೆ ಧೈರ್ಯ ತುಂಬಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಜಿಲ್ಲೆಯಲ್ಲಿ ಮೂವರು ಮಂತ್ರಿಗಳು,ನಾಲ್ವರು ಶಾಸಕರಿದ್ದರೂ ಯಾರೊಬ್ಬರು ಅತ್ತ ಸುಳಿಯಲಿಲ್ಲ.ಇದು ನಿಮ್ಮ ಆಡಳಿತದ ಕಾರ್ಯವೈಖರಿಯೇ ಎಂದು ಪ್ರಶ್ನಿಸಿದರು.
ಶಿಕ್ಷಣ ಸಚಿವರ ಮನೆಯ ಮುಂದೆ ಪಠ್ಯಪುಸ್ತಕದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಒತ್ತಾಯಿಸಿ ಶಾಂತಿಯುತವಾಗಿ,ಸಾಂಕೇತಿಕವಾಗಿ ಆರ್.ಎಸ್.ಎಸ್.ಚಡ್ಡಿಗೆ ಬೆಂಕಿ ಹಾಕಿ ಪ್ರತಿಭಟನೆ ಮಾಡಿದ್ದಕ್ಕೆ ಐಪಿಸಿ ಕಲಂ 147,143,448,443,511,332 ಮತ್ತು 149 ಸೆಕ್ಷನ್‌ಗಳನ್ನು ಹಾಕಿ ಅವರಿಗೆ ಬೇಲ್ ಸಿಗಬಾರದೆಂಬಂತೆ ವರ್ತಿಸಿದ್ದೀರಿ.ಆದರೆ ದೆಹಲಿ ಮುಖ್ಯಮಂತ್ರಿ ಮನೆಯ ಮೇಲೆ ದಾಳಿ ಮಾಡಿದ ನಿಮ್ಮ ಪಕ್ಷದ ಕಾರ್ಯಕತರು,ರೈತ ನಾಯಕ ರಮೇಶ್ ಟೀಕಾಯತ್ ಮೇಲೆ ಧಾಳಿ ನಡೆಸಿದ ನಿಮ್ಮ ಪಕ್ಷದ ಮುಖಂಡರ ಮೇಲೆ ಹಾಕಿರುವ ಕೇಸುಗಳು ಯಾವು ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಿ,ಪ್ರತಿಭಟನೆ ಮಾಡಲು ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ.ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದೆ.ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುವುದು ಒಳ್ಳೆಯದಲ್ಲ ಎಂದರು.
ಪಠ್ಯಪುಸ್ತಕದಲ್ಲಿ ಆಗಿರುವ ಲೋಪದೋಷಗಳ ಕುರಿತು ಆದಿಚುಂಚನಗಿರಿಯ ಶ್ರೀನಿರ್ಮಲಾನಂದಸ್ವಾಮೀಜಿ, ಸಿದ್ದಗಂಗೆಯ ಶ್ರೀಸಿದ್ದಲಿಂಗಸ್ವಾಮೀಜಿ,ಸಾಣೇನಹಳ್ಳಿಯ ಸ್ವಾಮೀಜಿ,ಸಾಹಿತಿಗಳು,ಪ್ರಗತಿಪರ ಚಿಂತಕರು ಮಾತನಾಡಿದ್ದಾರೆ.ರಾಜ್ಯದಲ್ಲಿ ಪಠ್ಯಪುಸ್ತಕ ಬದಲಾವಣೆಯ ಹೆಸರಿನಲ್ಲಿ ಇತಿಹಾಸ ಬದಲಾಯಿಸಲು ಮುಂದಾಗಿರುವುದನ್ನು ಖಂಡಿಸಿದ್ದಾರೆ.ಅದರ ಭಾಗವಾಗಿಯೇ ಎನ್.ಎಸ್.ಯು.ಐ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆಯ ಮುಂದೆ ಧರಣಿ ನಡೆಸಿದ್ದಾರೆ. ಈಗಾಗಲೇ ಕೆಳ ನ್ಯಾಯಾಲಯದಲ್ಲಿ ಬೆಲ್ ಆರ್ಜಿ ವಜಾ ಆಗಿದೆ. ಮೇಲಿನ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರ ಮೇಲೆ ಕೇಸು ದಾಖಲಿಸಲಾಗಿದೆ.ಆದರೆ ಶಿವಮೊಗ್ಗದಲ್ಲಿ ನಡೆದ ಘಟನೆಯಲ್ಲಿ ಸರಕಾರವೇ ವಿಧಿಸಿದ್ದ 144 ಸೆಕ್ಷನ್ ಉಲ್ಲಂಘಿಸಿ,ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಯಾವ ಕೇಸು ದಾಖಲಿಸಿದ್ದಾರೆ.ಈ ತಾರತಮ್ಯ ಎಷ್ಟು ದಿನ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಡಿ.ಕೆ.ಶಿವ ಕುಮಾರ್, ಇದೊಂದು ರಾಜಕೀಯ ಪ್ರೇರಿತ ಕೇಸು,ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸಹ ಸುಳ್ಳು ಕೇಸು ದಾಖಲಿಸಿದ್ದಾರೆ.ಆದರೆ ಬಿಜೆಪಿ ಗೂಂಡಾಗಳು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ.ದೂರು ನೀಡಿದರೆ ಇದುವರೆಗೂ ಎಫ್.ಐ.ಆರ್.ಆಗಿಲ್ಲ.ಇದು ಅಧಿಕಾರದ ದುರುಪಯೋಗ,ಇದಕ್ಕೆ ತಕ್ಕ ಶಿಕ್ಷೆಯನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಅನುಭವಿಸಲಿದ್ದಾರೆ ಎಂದರು.
ಚಡ್ಡಿ ಸರ್ವೆ ಸಾಮಾನ್ಯವಾಗಿ ಎಲ್ಲರೂ ಬಳಸುವ ವಸ್ತ್ರ.ಹಾಗಾಗಿ ಚಡ್ಡಿ ನಮ್ಮದು ಎಂದು ಹೇಗೆ ಹೇಳುತ್ತಾರೆ. ಆರ್.ಎಸ್.ಎಸ್.ಸಮವಸ್ತ್ರದಲ್ಲಿ ಈಗ ಚಡ್ಡಿ ಬದಲು ಪ್ಯಾಂಟ್ ಬಂದಿದೆ.ಖಾಕಿ ಚಡ್ಡಿ ಏನು ರಾಷ್ಟçದ್ವಜವೇ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್,ನಮ್ಮ ಪಕ್ಷದಲ್ಲಿದ್ದ ಜಿ.ಎಸ್.ಬಸವರಾಜು ಜಿಲ್ಲಾಧ್ಯಕ್ಷರಾಗಿದ್ದರು. ಅವರು ಎಂದು ಚಡ್ಡಿ ಹಾಕಿದ್ದನ್ನು ನಾನು ನೋಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯಸಭಾ ಸದಸ್ಯ ಚುನಾವಣೆಯಲ್ಲಿ ನಾವು ಸೋಲ್ತಿವೋ,ಗೆಲ್ತಿವೋ ಅದು ಜೆಡಿಎಸ್ ಪಕ್ಷದವರಿಗೆ ಏಕೆ,ನಮ್ಮರಾಜಕಾರಣ ನಮ್ಮದು,ನಮ್ಮ ಪಕ್ಷದ ಎಲ್ಲಾ ಮುಖಂಡರು ಕುಳಿತು ಚರ್ಚೆ ನಡೆಸಿ,ಒಮ್ಮತದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮನ್ನು ಯಾರು ಸಂಪರ್ಕ ಮಾಡಿಲ್ಲ.ಖರ್ಗೆ ಸಾಹೇಬರು ನಮ್ಮಿಂದ ಯಾವುದನ್ನು ಮುಚ್ಚಿಟ್ಟಿಲ್ಲ.ನಮಗೂ ಮೂರು ಪಕ್ಷದಲ್ಲಿಯೂ ಆತ್ಮೀಯರಿದ್ದಾರೆ.ಯಾವ ಮದ್ಯಸ್ಥಿಕೆ ನಡೆಸಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಈ ವೇಳೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಶಾಸಕ ಡಾ.ಹೆಚ್.ಡಿ.ರಂಗನಾಥ್,ಮಾಜಿ ಶಾಸಕ ಎಸ್.ಷಪಿಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.