ಜಿಲ್ಲೆತುಮಕೂರು

ಪ.ಜಾತಿ/ಪ.ವರ್ಗದವರ ಜಿಲ್ಲಾ ಮಟ್ಟದ ಹಿತರಕ್ಷಣಾ ಸಮಿತಿ ಸಭೆ: ಪೆದ್ದನಹಳ್ಳಿ, ಮಂಚಲದೊರೆ ದಲಿತ ಯುವಕರ ಕೊಲೆ ಪ್ರಕರಣ: ಪ್ರತಿ ಹಂತದಲ್ಲೂ ಸೂಕ್ಷ್ಮವಾಗಿ ಪರಿಶೀಲಿಸಿ, ತನಿಖೆ : ಎಸ್.ಪಿ.ರಾಹುಲ್‌ಕುಮಾರ್ ಶಹಪೂರ್ ವಾಡ್

ತುಮಕೂರು : ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಹಿತರಕ್ಷಣೆಗೆ ಸಂಬಂಧಿಸಿದ ಅಹವಾಲುಗಳನ್ನು ಆಯಾ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಂತದಲ್ಲಿ, ನಂತರ ಉಪವಿಭಾಗ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಿದ ನಂತರವಷ್ಟೇ ಜಿಲ್ಲಾ ಮಟ್ಟದ ಹಿತರಕ್ಷಣಾ ಸಮಿತಿಗೆ ಆಯಾ ವರದಿಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರಿಂದು ನಗರದ ಬಾಲಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಜಾತಿ/ಪ.ಪಂಗಡದ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು ಮತ್ತು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಈ ಮೇಲಿನಂತೆ ಕರೆ ನೀಡಿದರು.
ಪೆದ್ದನಹಳ್ಳಿ, ಮಂಚಲದೊರೆ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿ ಮತ್ತು ತಳಮಟ್ಟದ ಪೊಲೀಸರನ್ನು ಬದಲಾಯಿಸಬೇಕು. ಕೊಲೆಯಾದವರ ಕುಟುಂಬದವರಿಗೆ ತಲಾ 25ಲಕ್ಷ ಪರಿಹಾರ ನೀಡಬೇಕು. ಸತ್ತಿರುವ ಯುವಕರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರ ಆಗ್ರಹಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ನೊಂದ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರವನ್ನು ನೀಡಲಾಗಿದೆ. 25ಲಕ್ಷ ರೂ. ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಎರಡೂ ನೊಂದ ಕುಟುಂಬಗಳ ತಾಯಂದಿರಿಗೆ ಮಾಸಾಶನ ಕೊಡಿಸುವ ಕೆಲಸ ಆಗುತ್ತಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ನಿಯಮಾನುಸಾರ ಯಾವ ರೀತಿಯ ನೆರವು ಒದಗಬೇಕು ಎಲ್ಲವನ್ನೂ ಸಹ ನೊಂದ ಕುಟುಂಬಗಳಿಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪ.ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿರುವ ಜಮೀನುಗಳಿಗೆ  ಪ್ಲಾಗಿಂಗ್ ಮಾಡದೆ ನಿರ್ಲಕ್ಷö್ಯ ತೋರಲಾಗುತ್ತಿದೆ ಎಂಬ ಆರೋಪಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಬೆಂಗಳೂರಿನ ಭೂಮಿ ಮಾನಿಟರಿಂಗ್ ಸೆಲ್‌ನಲ್ಲಿ ಈ ಕುರಿತು ಪರಿಶೀಲಿಸಿ ಪ್ಲಾಗಿಂಗ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರಿ ಜಮೀನು ಲಭ್ಯವಿರುವ ಜಾಗದಲ್ಲಿ ಮಂಜೂರು ಮಾಡಲಾಗಿದೆ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಾಗ ಖರೀದಿಸಲು ಕ್ರಮವಹಿಸಲು ತಿಳಿಸಲಾಗಿದೆ. ಜಿಲ್ಲೆಯ 8 ಗ್ರಾಮಗಳನ್ನು ಹೊರತುಪಡಿಸಿ ಉಳಿದ 2565 ಹಳ್ಳಿಗಳಲ್ಲಿ ಸ್ಮಶಾನ ಭೂಮಿಯನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು.ಪೆದ್ದನಹಳ್ಳಿ, ಮಂಚಲದೊರೆ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್ ವಾಡ್ ಮಾತನಾಡಿ, ತನಿಖಾಧಿಕಾರಿ ಎಸ್.ಐ., ಅಡಿಷನಲ್ ಎಸ್‌ಪಿ, ಎಸ್.ಪಿ. ಹಂತದಲ್ಲಿ ಪ್ರಕರಣವನ್ನು ಪ್ರತಿ ಹಂತದಲ್ಲಿಯೂ ಸೂಕ್ಷö್ಮವಾಗಿ ಪರಿಶೀಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.1989 ಅಟ್ರಾಸಿಟಿ ಪ್ರಕರಣದ ಸೆಕ್ಷನ್ 4ರಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿಲ್ಲ ಎಂಬ ದೂರಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಎಸ್.ಸಿ/ಎಸ್.ಟಿ. ದೌರ್ಜನ್ಯ ಪ್ರಕರಣಗಳಿಗೆ  ಮೊದಲು ಆಯಾ ಇಲಾಖಾ ಮುಖ್ಯಸ್ಥರು ತನಿಖೆ ನಡೆಸಿ ನಂತರ ಪೊಲೀಸ್ ಠಾಣೆಗೆ ಸೆಕ್ಷನ್ 4ರಡಿ ಪ್ರಕರಣ ದಾಖಲಿಸುವಂತೆ ವರದಿ ನೀಡಿದ ನಂತರ ದಾಖಲು ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಪೆದ್ದನಹಳ್ಳಿ, ಮಂಚಲದೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕುಟುಂಬಗಳಿಗೆ 3 ತಿಂಗಳುಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಅವರು ಈ ಸಂದರ್ಭ ಸಭೆಗೆ ತಿಳಿಸಿದರು.
ಕುಣಿಗಲ್ ತಾಲ್ಲೂಕು ಅಮೃತೂರು ಗ್ರಾಮಪಂಚಾಯತಿಯಲ್ಲಿ 2018 ರಿಂದ 2020ರವರೆಗೆ ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿದ್ದು, ಇದರಿಂದ ದಲಿತರ ಕಲ್ಯಾಣಕ್ಕೆ ಮೀಸಲಿಡುವ ಶೇ.25ರಷ್ಟು ಅನುದಾನದ ಕೊರತೆ ಉಂಟಾಗಿದ್ದು, ಈ ಕುರಿತಂತೆ ಯಾವ ಕ್ರಮ ವಹಿಸಲಾಗಿದೆ ಎಂಬ ಪ್ರಶ್ನೆಗೆ ಮಾತನಾಡಿದ ಜಿ.ಪಂ. ಸಿಇಓ ವಿದ್ಯಾಕುಮಾರಿ ಅವರು, ಆಡಿಟ್ ವರದಿಯನ್ನು ಪರಿಶೀಲಿಸಿ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಗ್ರಾಮಪಂಚಾಯತಿಗಳಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ.ಜಾತಿ/ಪಂಗಡದವರ ಶೇಕಡ 25 ಅನುದಾನವನ್ನು ಇಡಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ದಲಿತ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker