ಪಾವಗಡ
ಪಾವಗಡ ತಾಲ್ಲೂಕಿನಲ್ಲಿ ಭಾರಿ ಮಳೆಗೆ ಅಪಾರ ನಷ್ಟ : ಕೆರೆ,ಕಟ್ಟೆ ದುರಸ್ತಿಗೊಳಿಸಲು ಒತ್ತಾಯ
ಪಾವಗಡ : ತಾಲ್ಲೂಕಿನಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಇಡಿ ತಾಲ್ಲೂಕಿನೆಲ್ಲೆಡೆ ಸಾಕಷ್ಟು ಅವಾಂತರ ಸೃಷ್ಟಿಸಿ ಅಪಾರ ನಷ್ಟ ಉಂಟು ಮಾಡಿದೆ.
ಮಳೆ ಬೆಳೆಯಿಲ್ಲ ಎಂದು ಗೋಳಿಡುತ್ತಿದ್ದ ತಾಲ್ಲೂಕಿನ ಜನತೆಗೆ ಅತಿಯಾದ ಮಳೆಯಾದ ಸಂತಸ ಒಂದೆಡೆಯಾದರೆ ಅತಿವೃಷ್ಟಿಯಿಂದ ಅನೇಕ ಮನೆಗಳು ಕುಸಿದು ಬಿದ್ದಿವೆ,ರಸ್ತೆಗಳು ಕಿತ್ತೋಗಿ ಜನರಿಗೆ ಅನಾನುಕೂಲ ಸೃಷ್ಟಿಸಿದೆ.
ತಾಲ್ಲೂಕಿನ ಕನ್ನಮೇಡಿ ಕೆರೆ, ರಾಜವಂತಿ ಕೆರೆ ಸೇರಿದಂತೆ ಪ್ರತಿಗ್ರಾಮಗಳ ಕೆರೆ ಕಟ್ಟೆ, ಕುಂಟೆಗಳು ತುಂಬಿ ಹರಿಯುತ್ತಿವೆ. ಆದರೆ ಗುಂಡಾರ್ಲಹಳ್ಳಿ ಕೆರೆಗೆ ನೀರು ಬಂದರೂ ಕಟ್ಟೆ ಒಡೆದು ನೀರು ನಿಲ್ಲದೆ ಹೋಗುತ್ತಿರುವುದು ಸ್ಥಳೀಯರಲ್ಲಿ ಆತಂಕದ ಜೊತೆ ಆಡಳಿತ ವರ್ಗದವರ ವಿರುದ್ಧ ಸ್ಥಳೀಯ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಕೆರೆ ಕಟ್ಟೆ ಒಡೆದು ಮೂರ್ಲಾಲ್ಕು ವರ್ಷ ಕಳೆದರೂ ಸಂಬಂಧಿಸಿದ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ತೋರಿದೆ, ಈಗಾಗಲೆ ಹಲವು ಬಾರಿ ಕೆರೆ ಕಟ್ಟೆ ನಿರ್ಮಿಸಿಕೊಡಿ ಎಂದು ಅಲವತ್ತುಕೊಂಡು ಮನವಿ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗದೆ ಹೀಗೆ ನೀರು ನಿಲ್ಲದೆ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು.
ಈ ನೀರಿನಿಂದ ಸುತ್ತ ಮುತ್ತಲ ಗ್ರಾಮಗಳ ರೈತರ ಬೋರ್ ರೀಚಾರ್ಚ್ ಆಗುತ್ತವೆ ಜಾನುವಾರುಗಳಿಗೆ ದಾಹ ತಣಿಸುವ ಕೇಂದ್ರ ವಾಗಿದೆ ಆದರೆ ಈ ರೀತಿ ಕೆರೆ ಕಟ್ಟೆ ಹೊಡೆದು ನೀರು ಪೋಲಾಗುತ್ತಿದ್ದರು ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆಂದು ನಿವೃತ್ತ ಶಿಕ್ಷಕ ನರಸಪ್ಪ ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಲರಾಮರೆಡ್ಡಿ, ಗೋವಿಂದರಾಜು,ನರಸಪ್ಪ, ರಂಗನಾಥ್ ಸೇರಿದಂತೆ ಹಲವರು ಆಡಳಿತ ವರ್ಗಕ್ಕೆ ಕೆರೆ ಕಟ್ಟೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.