ತುಮಕೂರು

ಜಿಲ್ಲೆಯ ಅಭಿವೃದ್ದಿಗೆ ಸಂಸದ ಜಿ.ಎಸ್.ಬಸವರಾಜು ಅವರ ಕೊಡುಗೆ ಅಪಾರ : ಡಾ.ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ

ಜಿ.ಎಸ್.ಬಿ.ಅಭಿಮಾನಿ ಬಳಗದಿಂದ ಸಂಸದರಿಗೆ ಅಭಿನಂದನೆ

ತುಮಕೂರು: ತುಮಕೂರು ಜಿಲ್ಲೆಯ ನೀರಾವರಿ,ಧಾರ್ಮಿಕ, ಶೈಕ್ಷಣಿಕ, ಅಧ್ಯಾತ್ಮಿಕ,ಕೈಗಾರಿಕಾ ಕ್ಷೇತ್ರಕ್ಕೆ ಸಂಸದ ಜಿ.ಎಸ್.ಬಸವರಾಜು ಅವರ ಕೊಡುಗೆ ಅಪಾರವಾಗಿದೆ ಎಂದು ರಾಮಕೃಷ್ಣ, ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಕನ್ನಡಭವನದಲ್ಲಿ ಜಿ.ಎಸ್.ಬಸವರಾಜು ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡುತ್ತಿದ್ದ ಅವರು,ಮುಂದಿನ ದಿನಗಳಲ್ಲಿ ಸಂಸದರಾಗಿ ಬೇರೊಬ್ಬ ವ್ಯಕ್ತಿ ಬರಬಹುದೇ ಹೊರತು,ಜಿಲ್ಲೆಯ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿದ ಮತ್ತೊಬ್ಬ ಜಿ.ಎಸ್.ಬಿ ಅವರನ್ನು ಕಾಣಲು ಸಾಧ್ಯವಿಲ್ಲ ಎಂದರು.
ರಾಜಕೀಯದಲ್ಲಿ ಏನೆಲ್ಲಾ ಸಾಧ್ಯತೆಗಳಿವೆ.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್,ಜನರಲ್ ಕಾರ್ಯಪ್ಪ, ಶಿವರಾಮಕಾರಂತ್, ರಾಮಕೃಷ್ಣ ಹೆಗಡೆ,ಜೆ.ಹೆಚ್.ಪಟೇಲ್ ರಂತಹ ಅನೇಕ ಮೇಧಾವಿಗಳನ್ನು ಮತದಾರರು ಸೋಲಿಸಿದ್ದಾರೆ.ಆದರೆ ತುಮಕೂರು ಜಿಲ್ಲೆಯ ಜನತೆ, ಮಾಜಿ ಪ್ರಧಾನಿಯೊಬ್ಬರ ಎದುರು ಜಿ.ಎಸ್.ಬಸವರಾಜು ಅವರನ್ನು ಗೆಲ್ಲಿಸಿ,ಮುಸ್ಸಂಜೆಯ ಹೊತ್ತಿನಲ್ಲಿ ಬಹಳ ಗೌರವಯುತ ರಾಜಕೀಯ ನಿರ್ಗಮನಕ್ಕೆ ನಾಂದಿ ಹಾಡಿದ್ದಾರೆ. ಇದಕ್ಕಾಗಿ ಜಿಲ್ಲೆಯ ಜನತೆಯನ್ನು ಅಭಿನಂದಿಸುವುದಾಗಿ ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ನುಡಿದರು.

ಸಂಸದ ಜಿ.ಎಸ್.ಬಸವರಾಜು ನೇರ ಮತ್ತು ನಿಷ್ಠೂರ ನುಡಿಗೆ ಹೆಸರಾದವರು,ಅವರ ವ್ಯಕ್ತಿತ್ವ ಎಂತಹದ್ದು ಎಂಬುದಕ್ಕೆ ಇಲ್ಲಿ ಸೇರಿರುವ ಎಲ್ಲಾ ಪಕ್ಷಗಳ, ಜಾತಿಗಳ,ಸಮುದಾಯಗಳ ಜನರೇ ಸಾಕ್ಷಿ.ದೆಹಲಿಯ ಅವರ ಗೆಸ್ಟ್ಹೌಸ್ ಕನ್ನಡಿಗರಿಗೆ ದಾಸೋಹದ ಮನೆಯಿದ್ದಂತೆ,ದೇಶದ ಹಿತದೃಷ್ಟಿಯಿಂದ ಅವರ ರಾಜಕೀಯವಾಗಿ ಕೈಗೊಂಡ ಮಹತ್ವದ ತುಂಬ ಮಹತ್ವದ್ದು,ಇದು ದೇಶದ ಹಿತದೃಷ್ಟಿಯಿಂದ ಬಹಳ ಅವಶ್ಯಕ.ಭಾರತ ಮುಂದಿನ ಐವತ್ತು ವರ್ಷಗಳ ಕಾಲ ಭಾರತವಾಗಿಯೇ ಉಳಿಯಲು ಮೋದಿ ಯಂತಹ ವ್ಯಕ್ತಿಯನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ,ಆಶೀರ್ವಚನ ನೀಡಿದ ಸಿದ್ದರಬೆಟ್ಟದ ಶ್ರೀರಂಭಾಪುರಿ ಶಾಖಾಮಠದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿಗಳು,ತುಮಕೂರು ಜಿಲ್ಲೆಯಲ್ಲಿ ಯಾವುದೇ ನದಿಗಳು ಇಲ್ಲದಿದ್ದರೂ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದರೆ ಅದಕ್ಕೆ ಜಿ.ಎಸ್.ಬಸವರಾಜು ಕಾರಣ.ಇಂದಿನ ಎತ್ತಿನಹೊಳೆ ಯೋಜನೆಯ ಹಿಂದೆ ಜಿ.ಎಸ್.ಬಸವರಾಜು ಅವರ ಪಾತ್ರ ಮಹತ್ವದ್ದಾಗಿದೆ.ಧಾರ್ಮಿಕವಾಗಿ,ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಜಿ.ಎಸ್.ಬಸವರಾಜು ಮಾಡಿದ್ದು,ಇವರ ಈ ಸೇವೆಯನ್ನು ಪರಿಗಣಿಸಿಯೇ ಶ್ರೀರಂಭಾಪುರಿ ಕ್ಷೇತ್ರ ಮಾನ್ಯರಿಗೆ ಶ್ರೀರೇಣುಕಾ ಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ಇಂದು ಅವರಿಗೆ ಅವರ ಅಭಿಮಾನಿಗಳು ಗೌರವ ಸಲ್ಲಿಸುತ್ತಿರುವುದು ನಮ್ಮನ್ನು ನಾವೇ ಗೌರವಿಸಿದಂತೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು,ರಾಜಕೀಯದಲ್ಲಿ ಜಿದ್ದು,ಹೋರಾಟ ಇರಬೇಕು,ಆದರೆ ಅಸೂಯೆ ಇರಬಾರದು.ರಾಜಕಾರಣದಲ್ಲಿ ಸೋಲು, ಗೆಲುವು ಸಹಜ.1960ರಲ್ಲಿ ಪಿ.ಎಲ್.ಡಿ ಬ್ಯಾಂಕ್ ಸದಸ್ಯನಾಗಿ,ಎಪಿಎಂಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ.ಎಂಟು ಬಾರಿ ಸಂಸದನಾಗಿ ಸ್ಪರ್ಧಿಸಿ, ಐದು ಬಾರಿ ಗೆಲುವು ಸಾಧಿಸಿದ್ದೇನೆ.ಪಾರ್ಲಿಮೆಂಟಿನ ಒಳಗೆ ಮತ್ತು ಹೊರಗೆ ಜಿಲ್ಲೆಯ ಅಭಿವೃದ್ದಿ ನಿರಂತರವಾಗಿ ಶ್ರಮಿಸಿದ್ದು,ನೀರಾವರಿ, ವಿದ್ಯುತ್, ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಗೆ ದುಡಿದಿದ್ದೇನೆ.ಕುಮಾರಧಾರಾ ಯೋಜನೆ ಪೂರ್ಣಗೊಂಡರೆ ಜಿಲ್ಲೆಗೆ 100 ಟಿ.ಎಂ.ಸಿಯಷ್ಟು ನೀರು ಬರಲಿದೆ.ನಗರಕ್ಕೆ ಹೆಚ್.ಎ.ಎಲ್,ನಿಮ್ಜ್ ಸೇರಿದಂತೆ ಕೈಗಾರಿಕೆಗಳನ್ನು ತರಲು ಸಾಕಷ್ಟು ಶ್ರಮಿಸಿದ್ದೇನೆ.ಭೂಮಿ ನೀಡಲು ಹಿಂದೇಟು ಹಾಕಿದವರನ್ನು ಮನವೊಲಿಸಿ ಕೆಲಸ ಮಾಡಿದ್ದೇನೆ.ಹಲವಾರು ಬಾರಿ ಕೋರ್ಟು ಮೆಟ್ಟಿಲು ಹತ್ತಿದ್ದೇನೆ.ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಜಿಲ್ಲೆಯ ಜನತೆ ಸಹಕಾರ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ.ಕವಿತಾಕೃಷ್ಣ,ಎಪಿಎಂಸಿ ಸದಸ್ಯರಾಗಿ ವೃತ್ತಿ ಜೀವನ ಆರಂಭಿಸಿದ ಜಿ.ಎಸ್.ಬಸವರಾಜು,ಜಿಲ್ಲೆಯ ಅಭಿವೃದ್ದಿಗೆ ಅವಿರತ ಶ್ರಮಿಸಿದ್ದಾರೆ.ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ದುಡಿಯುತ್ತಿರುವ ಅವರಿಗೆ ನಾವೆಲ್ಲರೂ ಸಲ್ಲಿಸುತ್ತಿರುವ ಗೌರವ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಸಂಶೋಧಕ ಡಾ.ಯೋಗೀಶ್ವರಪ್ಪ,ಶ್ರೀಮತಿ ಶಕುಂತಲಾ ಬಸವರಾಜು,ಕೆ.ಶಿವರುದ್ರಯ್ಯ, ಗುರುಸಿದ್ದಯ್ಯ,ಟಿ.ಬಿ.ಹರೀಶ್,ರಕ್ಷಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker