ತುಮಕೂರು

ವಿದ್ಯುತ್ ಖಾಸಗೀರಣ ಹಾಗೂ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಬೃಹತ್ ಪ್ರತಿಭಟನೆ

ತುಮಕೂರು : ಕಲ್ಯಾಣ ರಾಜ್ಯವಾಗಿರುವ ಭಾರತ 56 ಇಂಚಿನ ಎದೆಯ ಪ್ರಧಾನಿಯಿಂದಾಗಿ ಬಂಡವಾಳಶಾಹಿ ರಾಷ್ಟçವಾಗಿ ಬದಲಾಗುತ್ತಿದ್ದು,ಉಸಿರಾಡಲು ಚಳವಳಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಬೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರು ವಿದ್ಯುತ್ ಖಾಸಗೀರಣ ವಿರೋಧಿಸಿ ಹಾಗೂ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತಿದ್ದ ಅವರು,ವಿಶ್ವಸಂಸ್ಥೆ ಮತ್ತು ದೇಶದ ಅಡಳಿತಶಾಹಿಯ ಆಣತಿಯಂತೆ ನಡೆದುಕೊಳ್ಳುತ್ತಿರುವ ಪ್ರಧಾನಿಗಳು ಸೇವಾ ಕ್ಷೇತ್ರದಲ್ಲಿದ್ದ ಬಹುತೇಕ ಇಲಾಖೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ.ಕೃಷಿಯ ಬದಲಾಗಿ ಕೈಗಾರಿಕೆಯನ್ನು ಅದ್ಯತಾ ವಲಯವಾಗಿ ಪರಿಗಣಿಸಿದ ಪರಿಣಾಮ.ಮುಂದೊಂದು ದಿನ ಆಹಾರಕ್ಕಾಗಿ ದೇಶದ ಬಡವರು ಹಾಹಾಕಾರ ಪಡುವಂತಾಗಲಿದೆ ಎಂದು ಎಚ್ಚರಿಸಿದರು.

ಚಳವಳಿ ಎಂಬುದು ಈ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಇರಬಹುದಾದ ಸಾಮಾನ್ಯ ಅಂಶ. ಆದರೆ ದೇಶದಲ್ಲಿ ನಿರುದ್ಯೋಗ,ಬಡತನ,ಭ್ರಷ್ಟಾಚಾರ,ಸ್ವಜನಪಕ್ಷಪಾತ,ಕೋಮುವಾದ ತಾಂಡವಾಡುತಿದ್ದರೂ,ನಾಲ್ಕು ಗೋಡೆಗಳ ಮಧ್ಯೆ ಇರಬೇ ಕಾದ ಧರ್ಮವನ್ನು ಬೀದಿಗೆ ತಂದು,ಹಿಜಾಬ್,ಹಲಾಲ್,ಆಜ್ಹಾನ್ ಹೆಸರಿನಲ್ಲಿ ಯುವಕರನ್ನು ಎತ್ತಿಕಟ್ಟಿ,ಪ್ರತಿಭಟಿಸುವ ಮನಸ್ಥಿತಿಯೇ ಇಲ್ಲದಂತೆ ಮಾಡಲಾಗಿದೆ.ಒಂದು ಕಾಲದಲ್ಲಿ ರೈತರನ್ನು ವಿರೋಧಿಸುತ್ತಿದ್ದ ವಿದ್ಯುತ್ ಗುತ್ತಿಗೆದಾರರು ತಮ್ಮ ಅಸ್ಥಿತ್ವಕ್ಕಾಗಿ ಇಂದು ರೈತರೊಂದಿಗೆ ಸೇರಿದ್ದಾರೆ.ಖಾಸಗೀಕರಣವಾದರೆ ಒಂದು ಕಂಪನಿಯ ಗುಲಾಮರಾಗುವ ನೌಕರರು ಸಹ ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಸೇರುವುದರಲ್ಲಿ ಅನುಮಾನವಿಲ್ಲ. ನಾವೆಲ್ಲ ಸೇರಿದ ಹೋರಾಟ ರೂಪಿಸಿದರೆ ವಿದ್ಯುತ್ ಖಾಸಗೀಕರಣವನ್ನು ತಡೆಯಬಹುದೆಂದು ಬಡಲಗರಪುರ ನಾಗೇಂದ್ರ ತಿಳಿಸಿದರು.
ಕೇಂದ್ರದ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ 2022ಕ್ಕೆ ರೈತರ ಅದಾಯ ದುಪ್ಪಟ್ಟಾಗಲಿದೆ ಎಂದು ಹೇಳಿಕೆ ನೀಡುತ್ತಾ ಬಂದಿತ್ತು.ರಸಗೊಬ್ಬರ, ಬಿತ್ತನೆ ಬೀಜದ ಬೆಲೆ ದುಪ್ಪಾಟ್ಟಾದರೂ ವ್ಯವಸಾಯ ಮಾಡಿದ ರೈತನಿಗೆ ವೈಜ್ಞಾನಿಕ ಬೆಲೆ ಬೇಡ, ಕನಿಷ್ಠ ಬೆಂಬಲ ಬೆಲೆ ನೀಡದ ಪರಿಣಾಮ,ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.ಸರಕಾರ ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರಾಜ್ಯದಲ್ಲಿ 88 ಎಪಿಎಂಸಿಗಳು ಅದಾಯವಿಲ್ಲದೆ ಮುಚ್ಚುವ ಹಂತ ತಲುಪಿವೆ.ಜಾತಿ, ಮತ, ಪಂಥ ಭೇಧವಿಲ್ಲದೆ ಇರುವ ಕ್ಷೇತ್ರವೆಂದರೆ ವ್ಯವಸಾಯ.ಹಾಗಾಗಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಗ್ಗೂಡಬೇಕಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ಸರಕಾರ ಜಾರಿಗೆ ತಂದಿರುವ ಹಲವು ಯೋಜನೆಗಳು ಜನವಿರೋಧಿ, ರೈತ ವಿರೋಧಿಯಾಗಿದ್ದು,ಮತದಾರರು ಹಣ, ಹೆಂಡ, ಜಾತಿಗೆ ಮಾರು ಹೋಗದೆ ಇಂತಹ ಕೆಟ್ಟ ಸರಕಾರವನ್ನು ಕಿತ್ತೊಗೆಯಲು ಮುಂದಾಗಬೇಕೆಂದರು.
ಜಿಲ್ಲೆಯ ಹೇಮಾವತಿ,ಎತ್ತಿನಹೊಳೆ,ಭದ್ರಮೇಲ್ದಂಡೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ.ಬಿಕ್ಕೆಗುಡ್ಡ, ಹಾಗಲವಾಡಿ ಕುಡಿಯುವ ನೀರಿನ ಯೋಜನೆಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿವೆ.ಸಚಿವ ಮಾಧುಸ್ವಾಮಿ ಅವರು ಚಿಕ್ಕನಾಯನಹಳ್ಳಿಗೆ ಮಾತ್ರ ಮಂತ್ರಿ ಎಂಬಂತೆ ವರ್ತಿಸಿ,ಇಡೀ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದ ಗೋವಿಂದರಾಜು,ಈ ಹಿಂದೆ ಎಸ್.ಎಂ.ಕೃಷ್ಣ ಸರಕಾರ, ಹೆಚ್.ಡಿ.ಕುಮಾರಸ್ವಾಮಿ ಅವರ ಸರಕಾರ ರೈತರ ಪಂಪಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿತ್ತು.ಆದರೆ ರೈತ ಸಂಘದ ವಿರೋಧದಿಂದಾಗಿ ಸಾಧ್ಯವಾಗಿರಲಿಲ್ಲ. ಒಂದು ವೇಳೆ ಈ ಸರಕಾರ ಮೀಟರ್ ಅಳವಡಿಸಲು ಮುಂದಾದರೆ 4.75 ಲಕ್ಷ ಐ.ಪಿ.ಸೆಟ್ ಹೊಂದಿರುವ ರೈತರು ಒಗ್ಗೂಡಿ ಬೀದಿಗೆ ಇಳಿಯಲಿದ್ದೇವೆ. ನಿಮ್ಮ ಸರಕಾರವನ್ನು ಕಿತ್ತೊಗೆಯಲಿದ್ದೇವೆ ಎಂದು ಎಚ್ಚರಿಸಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರೀಯ ಸಮಿತಿ ಅಧ್ಯಕ್ಷ ಮಲ್ಲಯ್ಯ ಮಾತನಾಡಿ,ಬೆಸ್ಕಾಂನಲ್ಲಿ ಭ್ರಷ್ಟಾಚಾರವೆಂಬುದು ತಾಂಡವಾಡುತ್ತಿದೆ.2015ರಲ್ಲಿ ಅಕ್ರಮ,ಸಕ್ರಮದಲ್ಲಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿ,ಹಣಕಟ್ಟಿದವರು ಇನ್ನೂ ಕಾಯುತ್ತಿ ದ್ದಾರೆ.ಆದರೆ ಹಣ ನೀಡಿದರೆ ಉಳಿದವರಿಗೆ ಒಂದೇ ದಿನದಲ್ಲಿ ಸಂಪರ್ಕ ನೀಡಲಾಗುತ್ತಿದೆ.ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಂಬಗಳು ಮುರಿದು ಹೋಗಿವೆ.ಅವುಗಳನ್ನು ಬದಲಾಯಿಸುವ ಕೆಲಸವನ್ನು ಸಹ ಖಾಸಗೀಯವರಿಗೆ ನೀಡಲಾಗಿದೆ.ರೈತರಿದ್ದರೆ ನಾವು ಹಾಗಾಗಿ ಕೃಷಿಕರೊಂದಿಗೆ ಸೇರಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ನಗರದ ಟೌನ್‌ಹಾಲ್ ವೃತ್ತದಿಂದ ಬಿ.ಹೆಚ್.ರಸ್ತೆ ಮೂಲಕ ಬೆಸ್ಕಾಂ ಕಚೇರಿಯವರೆಗೆ ಸಾವಿರಾರು ರೈತರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ,ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ,ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ,ರಾಜ್ಯ ಕಾರ್ಯಾಧ್ಯಕ್ಷ ಜಿ.ಎಂ.ವೀರ ಸಂಗಯ್ಯ,ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ವಿಭಾಗೀಯ ಚೌಕೀಮಠ್,ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ,ರಾಜ್ಯ ಕಾರ್ಯದರ್ಶಿ ಗೋಪಾಲ್,ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದಲಿಂಗಸ್ವಾಮಿ,ಉಪಾಧ್ಯಕ್ಷ ಜಗದೀಶ್,ಪ್ರಧಾನ ಕಾರ್ಯದರ್ಶಿ ದಾದಾಪೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker