ತುಮಕೂರು

ಬುದ್ಧ ಬೋಧಿಸಿದ್ದು ಧರ್ಮವಲ್ಲ: ಪ್ರೊ.ಪ್ರಶಾಂತ್ ನಾಯಕ

ತುಮಕೂರು : ಬುದ್ಧ ದೇವರೂ ಅಲ್ಲ , ಭೋಧಿಸಿದ್ದು ಧರ್ಮವೂ ಅಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಮುಖ್ಯಸ್ಥ ಪ್ರೊ.ಪ್ರಶಾಂತ್ ನಾಯಕ ಅಭಿಪ್ರಾಯಪಟ್ಟರು.

ನಗರದ ತುಮಕೂರು ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ‘ಗೌತಮ ಬುದ್ಧ ಅಧ್ಯಯನ ಪೀಠ’ದಿಂದ ಸೋಮವಾರ ನಡೆದ 2566ನೇ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಬುದ್ಧ ಮತ್ತು ಸಮಕಾಲೀನ ಸಂದರ್ಭ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೌನದ ಮೂಲಕ ಜಗತ್ತನ್ನು ಅರ್ಥೈಸಿಕೊಂಡು ಸಮುದಾಯದ ಸಂಕಟಗಳಿಗೆ ಪರಿಹಾರ ಹುಡುಕಿದ ಬುದ್ಧ, ಎದೆಯ ಕತ್ತಲಿಗೆ ಬೆಳಕಿನ ರೂಪಕ ಕೊಟ್ಟ ದಾರ್ಶನಿಕ. ಭಾರತದ ಎಲ್ಲಾ ವಿಚಾರವಾದಿಗಳು ಬುದ್ಧನ ಬೆಳಕಿನ ಜೊತೆಗೆ ಬಂದವರು. ಚಾರ್ವಾಕರಿಂದ ಕುವೆಂಪುವರೆಗೂ ಕತ್ತಲಿಂದ ಬೆಳಕಿಗೆ ಬರುತವಂತೆ ಮಾತನಾಡಿದ್ದಾರೆ ಎಂದರು.

ಅಗೋಚರ ಶಕ್ತಿಗಳ ಬಗ್ಗೆ ಮಾತನಾಡುವವರಿಂದ ಬದುಕಿನ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ನಮ್ಮನ್ನು ನಾವು ಅರ್ಥೈಸಿಕೊಳ್ಳುವ ಕ್ರಮವನ್ನು ಅಳವಡಿಸಿಕೊಂಡಾಗ ಕಣ್ಣೊಳಗಿನ ಕತ್ತಲೆಗೆ ಬೆಳಕು ಮೂಡುತ್ತದೆ. ಸ್ವಂತಿಕೆ ಕಳೆದುಕೊಂಡಿರುವ ನಮಗೆ ಬುದ್ಧನ ಬೆಳಕು ಬೇಕು ಎಂದು ತಿಳಿಸಿದರು.

ಗೌತಮ ಬುದ್ಧ ಅಧ್ಯಯನ ಪೀಠದ ಸಂಚಾಲಕ ಡಾ.ನಾಗಭೂಷಣ ಬಗ್ಗನಡು ಮಾತನಾಡಿ, ಬುದ್ಧ ಈ ನೆಲದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿ. ಅರಮನೆ ತೊರೆದು ಕಾಡು ಮೇಡು ಅಲೆದು ವಿದ್ವಾಂಸರನ್ನು ಭೇಟಿಯಾಗಿ, ಉಪವಾಸ ಕೈಗೊಳ್ಳುತ್ತಾನೆ. ಆದರೂ, ಜ್ಞಾನ ಲಭಿಸುವುದಿಲ್ಲ. ಜನರ ಸಂಕಟಗಳನ್ನು ಕಂಡಾಗ ತನ್ನಲ್ಲಿ ಮೂಡಿದ ಅರಿವನ್ನು ಅಲ್ಲಲ್ಲಿ ಬೋಧಿಸುತ್ತಾ ಹೋಗುತ್ತಾನೆ. ಬುದ್ಧನು ತನ್ನ ಅನುಭವದ ಮೂಲಕ ಬದುಕಿನ ನಾಲ್ಕು ಅಂಶಗಳನ್ನು ಕಂಡುಕೊಂಡನು ಎಂದು ಅವರು ಹೇಳಿದರು.

ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಟಿ.ಡಿ.ವಿನಯ್ ಮಾತನಾಡಿ, ಬುದ್ಧ ವಿಶ್ವಕ್ಕೆ ಬೆಳಕಾಗಿದ್ದಾನೆ. ನಮ್ಮ ನಡುವೆ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡುವುದರ ಮೂಲಕ ಬುದ್ಧನನ್ನು ಕಾಣಬೇಕಿದೆ. ಬುದ್ಧನೆಂದರೆ ಪ್ರೆಶ್ನೆಗೆ ಬರೆಯುವ ಉತ್ತರವಾಗಬಾರದು, ನಮ್ಮೊಳಗಿನ ಪ್ರಜ್ಞೆಯಾಗಬೇಕು. ಆಲೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಈ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಶಿರಾ ತಹಶೀಲ್ದಾರ್ ಮಮತಾ ಮಾತನಾಡಿ, ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟ ತತ್ವಜ್ಞಾನಿಗಳು ನಮ್ಮ ಮುಂದಿದ್ದಾರೆ. ಅದರಲ್ಲಿ ಬುದ್ಧನೂ ಒಬ್ಬ. ಅವರ ತತ್ವಾದರ್ಶಗಳಲ್ಲಿ ಒಂದಂಶವನ್ನಾದರೂ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ.ಕೇಶವ, ಕುಲಸಚಿವ ಡಾ.ಕೆ.ಶಿವಚಿತ್ತಪ್ಪ, ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker