ಶೈಕ್ಷಣಿಕ ವರ್ಷಾರಂಭದ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರಿಂದ ಭವ್ಯ ಸ್ವಾಗತ
ತುರುವೇಕೆರೆ : 2022-23 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಮೊದಲ ದಿನದಂದು ಶಾಲೆಗಳತ್ತ ವಿದ್ಯಾರ್ಥಿಗಳು ಹರ್ಷದಿಂಧ ಹೆಜ್ಜೆ ಹಾಕಿದರು. ಶಾಲೆಗಳಿಗೆ ಆಗಮಿಸಿದ ತಾಲೂಕಿನ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಶಿಕ್ಷಕರುಗಳ ಆತ್ಮೀಯವಾಗಿ ಬರ ಮಾಡಿಕೊಂಡರು. ಈ ಮೂಲಕ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಲಿಕಾ ಚೇತರಿಕೆ ವರ್ಷಕ್ಕೂ ಸಹ ಚಾಲನೆ ದೊರಕಿತು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭದ ಅಂಗವಾಗಿ ಶಾಲೆಯ ಆವರಣಗಳನ್ನು ಸ್ವಚ್ಚಗೊಳಿಸಲಾಗಿತ್ತು. ಶಾಲೆಯ ಪ್ರವೇಶ ದ್ವಾರಗಳು ಮಾವಿನ ತೋರಣ, ಬಾಳೆಯ ಕಂದಿನಿಂದ ಸಿಂಗಾರಗೊಂಡಿದ್ದವು. ಆವರಣಗಳಲ್ಲಿ ಬಿಡಿಸಲಾಗಿದ್ದ ಚಿತ್ತಾಕರ್ಷಕ ರಂಗೋಲಿಗಳು ವಿಶೇಷ ಗಮನ ಸೆಳೆದವು. ರಜೆಯ ಕಾರಣದಿಂದ ಶಾಲಾ ವಾತಾವರಣದಿಂದ ದೂರವಿದ್ದ ಮಕ್ಕಳು ಮರಳಿ ಶಾಲೆಗೆ ಬಂದ ಹಿನ್ನಲೆಯಲ್ಲಿ ಶಿಕ್ಷಕರುಗಳು ಸಿಹಿ, ಹೂಗಳನ್ನು , ಬಲೂನುಗಳನ್ನು ನೀಡುವ ಮೂಲಕ ಮಕ್ಕಳನ್ನು ನಗು ಮೊಗದಿಂದ ಸ್ವಾಗತಿಸಿದರು. ಶಿಕ್ಷಕರಿಂದ ದೊರೆತ ವಿಶೇಷ ಸ್ವಾಗತ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಬೇಸಿಗೆ ರಜೆಯ ಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಗೆಳೆಯರನ್ನು ಮತ್ತೆ ಭೇಟಿಯಾದ ಅಮೂಲ್ಯ ಕ್ಷಣಕ್ಕೆ ಶಾಲಾವರಣಗಳು ಸಾಕ್ಷಿಯಾದವು. ಕಳೆದೊಂದು ತಿಂಗಳಿನಿಂದ ಮಕ್ಕಳ ಸುಳಿವಿಲ್ಲದೆ ಮೌನಕ್ಕೆ ಮಾರುಹೋಗಿದ್ದ ಶಾಲಾವರಣಗಳು ಮಕ್ಕಳ ಕಲರವದಿಂದ ಕಳೆಗಟ್ಟಿದ್ದವು. ಶಾಲೆಯ ಆರಂಭದ ಮೊದಲ ದಿನದಂದು ಶಾಲೆಯಲ್ಲಿ ನೀಡಿದ ಸಿಹಿಯೂಟ ಸವಿದ ಮಕ್ಕಳ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಪಟ್ಟಣದ ಖಾಸಗಿ ಶಾಲೆಗಳಾದ ಪ್ರಿಯಾ ಆಂಗ್ಲಶಾಲೆ, ಜೆ.ಪಿ.ಶಾಲೆ, ಇಂಡಿಯನ್ ಪಬ್ಲಿಕ್ ಶಾಲೆ ಹಾಗೂ ಗ್ಲೋಬಲ್ ಎಂಬೆಸ್ಸಿ ಸೇರಿದಂತೆ ಅನೇಕ ಶಾಲೆಗಳಲ್ಲೂ ಮಕ್ಕಳನ್ನು ಶಿಕ್ಷಕರುಗಳು ವಿಶೇಷವಾಗಿ ಸ್ವಾಗತಿಸಿದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭ ಕುರಿತು ಬಿ.ಇ.ಓ.ಪದ್ಮನಾಭ್ ಮಾತನಾಡಿ ಮೊದಲ ದಿನ ಶೆಕಡಾ 70 ರಷ್ಟು ಮಕ್ಕಳು ಶಾಲೆಗೆ ಹಾಜರಾಗಿರುವುದು ವಿಶೇಷವೆನಿಸಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಲ್ಲಿ ವಿಶೇಷ ಆಸಕ್ತಿ ತೋರಿದ್ದಾರೆ. ಶೈಕ್ಷಣಿಕ ವರ್ಷಾರಂಭದ ಪೂರ್ವ ಸಿದ್ದತೆಗಳನ್ನು ಗಮನಿಸಲು ಇ.ಸಿ.ಓ.ಗಳು ಮಿಂಚಿನ ಸಂಚಾರ ನೆಡೆಸಿ ಗಮನಸೆಳೆದರು. ಇಂದಿನಿಂದ ಬಿಸಿಯೂಟ, ಹಾಗೂ ಕಲಿಕಾ ಚೇತರಿಕೆ ವರ್ಷಕ್ಕೂ ಸಹ ಚಾಳನೆ ದೊರಕಿದೆ. ಶಿಕ್ಷಣ ಇಲಾಖಾ ಆಶಯದಂತೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಆಸಕ್ತಿ ವಹಿಸಿದ್ದು ವಿಶೇಷವೆನಿಸಿತ್ತು.