ತಿಪಟೂರು : ಮಠಗಳ ಅಭಿವೃದ್ದಿ, ಏಳಿಗೆಗೆ ಭಕ್ತರಿಗೆ ಶ್ರೀಕ್ಷೇತ್ರದ ಮೇಲಿರುವ ಅಪಾರ ನಂಬಿಕೆ, ಒಗ್ಗಟ್ಟಿನ ಶಕ್ತಿ, ಅಭಿಮಾನ, ಭಕ್ತಿಯ ಜೊತೆಗೆ ಅವರು ನೀಡುತ್ತಿರುವ ನಿರಂತರ ಸಹಕಾರ ಸ್ಮರಿಸುವಂತದ್ದು ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ತ್ರಿವಿಧ ದಾಸೋಹಿ, ನಡೆದಾಡುವ ರಂಗ-ಶಂಕರೇಶ್ವರ, ಅಭಿನವ ಸಿದ್ಧರಾಮ ಎಂದೇ ಪ್ರಖ್ಯಾತರಾಗಿರುವ ಏಳನೇ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರೀ ಕ್ಷೇತ್ರದ ಅಭಿಮಾನಿಗಳು, ಹಿರಿಯ ವಿದ್ಯಾರ್ಥಿ ಸಂಘದವರು ಹಾಗೂ ಕ್ಷೇತ್ರದ ಶಿಕ್ಷಕರುಗಳು ಶ್ರೀ ಪರದೇಸಿಕೇಂದ್ರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಭಕ್ತರಿಂದ ಗುರುವಂದನೆ ಸ್ವೀಕರಿಸಿದ ಶ್ರೀಗಳು ಆಶೀರ್ವಚನ ನೀಡುತ್ತಾ ನಮ್ಮ ಮಠ ಬೆಳೆಯಲು ಭಕ್ತರ ಸಹಕಾರ ನಿರಂತರವಾಗಿದ್ದು ಇಲ್ಲಿನ ಆರಾಧ್ಯ ದೈವರಾದ ಶ್ರೀರಂಗ ಹಾಗೂ ಶ್ರೀ ಶಂಕರರ ಕೃಪೆ ಮತ್ತು ಹಿರಿಯ 6 ಪೂಜ್ಯರುಗಳ ಆಶೀರ್ವಾದವೇ ಮುಖ್ಯವಾಗಿದೆ. ಇವರ ಹಾಗೂ ನನ್ನ ಆಶೀರ್ವಾದ ಸದಾ ಭಕ್ತಾದಿಗಳ ಮೇಲೆ ಇರುತ್ತದೆ. ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂಬ ಬಗ್ಗೆ ನಮಗೆ ಆಸಕ್ತಿ ಇಲ್ಲ. ಆದರೆ ನಮ್ಮ ಹಿರಿಯ ವಿದ್ಯಾರ್ಥಿ ಸಂಘದವರು, ಅಭಿಮಾನಿಗಳ ಒತ್ತಡಕ್ಕೆ ಮಣಿಯಬೇಕಾಗಿದೆ. ಗುರುವಂದನೆ ಕಾರ್ಯಕ್ರಮದಲ್ಲಿ ಮುಸ್ಲಿಂಬಾಂಧವರು, ಕ್ರೈಸ್ಥಗುರುಗಳು ಸೇರಿದಂತೆ ಎಲ್ಲ ವರ್ಗದವರು ಸೇರಿರುವುದು ನಮ್ಮ ಮಠ ಜಾತ್ಯತೀತ ಮಠ, ನಮ್ಮ ಸಂಸ್ಕೃತಿಯೂ ಅದೇ ಆಗಿದ್ದು ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆಯಾವುದೇ ಧರ್ಮ, ಜಾತಿ ವೈಷಮ್ಯಗಳು ಬೇಕಾಗಿಲ್ಲ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ನೆಲೆಸಿ ಎಲ್ಲ ಧರ್ಮದವರನ್ನು ಪ್ರೀತಿ ಸಹಬಾಳ್ವೆಯಿಂದ ನಡೆಸಿಕೊಳ್ಳುವುವುದು ದೇಶಕ್ಕೆ ಹೆಮ್ಮೆಯ ಸಂಗತಿ ಎಂದರು.
ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಹಾಗೂ ಮಾಡಾಳುವಿನ ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ರಂಗಾಪುರ ಶ್ರೀಗಳು ಸಾಮಾಜಿಕ ಹಾಗೂ ಧಾರ್ಮಿಕ ಕಾಳಜಿ ಹೊಂದಿದ್ದು ಮಾನವೀಯ ಮೌಲ್ಯದ ನೆಲೆಗಟ್ಟಿನಲ್ಲಿ ಕಾಯಕ ಮಾಡುತ್ತಾ ಭಕ್ತರದೊಂದಿಗೆ ಒಡನಾಟವಿಟ್ಟುಕೊಂಡು ಎಲ್ಲರ ಭಕ್ತಿಗೆ ಪಾತ್ರರಾಗಿದ್ದಾರೆ. ಹಿಂದಿನ ಶ್ರೀಗಳವರು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಸಾಗುತ್ತಾ ಶ್ರೀಮಠದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮಠದ ಏಳಿಗೆಯ ಜೊತೆಯಲ್ಲಿ ಭಕ್ತರ ಕಷ್ಟಕಾರ್ಪಣ್ಯಗಳಿಗೂ ಸ್ಪಂದಿಸುತ್ತಾ ಸಮಾಜಮುಖಿಯಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರ ಲೋಕೇಶ್ವರ ಮಾತನಾಡಿ ಶ್ರೀಗಳು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡುವ ಮೂಲಕ ಶೈಕ್ಷಣಿಕ ಸೇವೆಯಲ್ಲಿ ನಿರತವಾಗಿದ್ದು, ಗ್ರಾಮೀಣರ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿದ್ದು, ಇವರ ಸೇವೆ ಹೀಗೆ ಮುಂದುವರಿಯಲಿ, ದೇವರು ಇವರಿಗೆ ಮತ್ತಷ್ಟು ಆಯುಷ್ಯಾರೋಗ್ಯ ಕೊಟ್ಟು ಕಾಪಾಡಲಿ ಇವರ ಆರ್ಶೀದ ಸದಾ ಭಕ್ತರ ಮೇಲಿರಲಿ ಎಂದು ಆಶಿಸಿದರು.
ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಹಾಗೂ ಮಾಜಿ ಶಾಸಕ ಕೆ. ಷಡಕ್ಷರಿ ಮಾತನಾಡಿ, ಶ್ರೀಗಳವರು ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಅಚ್ಚಳಿಯದೆ ಜನಮಾನಸದಲ್ಲಿ ಉಳಿದಿದ್ದಾರೆ. ಸಾವಿರಾರು ಮಕ್ಕಳಿಗೆ ಅನ್ನಾಶ್ರಯ ಕೊಟ್ಟು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಾ, ಭಿಕ್ಷಾಟನೆ ಹಾಗೂ ಭಕ್ತರ ಸಹಕಾರದೊಂದಿಗೆ ಮಠವನ್ನು ಅಭಿವೃದ್ದಿಯ ಪಥದತ್ತ ಕೊಂಡೊಯ್ಯುತ್ತಿರುವ ಶ್ರೀಗಳ ಸೇವೆ ಸಮಾಜಕ್ಕೆ ಮತ್ತಷ್ಟು ನೀಡುವಂತಾಗಲಿ ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದರು. ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎನ್. ರೇಣುಕಯ್ಯ ಹಾಗೂ ಹರಶಿವಮೂರ್ತಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ಸುಕ್ಷೇತ್ರದಲ್ಲಿನ ಎಲ್ಲಾ ಗದ್ದುಗೆಗಳಿಗೆ ಮತ್ತು ರಂಗ-ಲಿAಗರಿಗೆ ವಿಶೇಷ ಹೋಮ ಹವನ, ಅಭಿಷೇಕ, ಪೂಜಾಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಶ್ರೀಮಠದ ಕಿರಿಯ ಶ್ರೀಗಳಾದ ಷಣ್ಮುಖಸ್ವಾಮಿ, ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕರುಗಳಾದ ಬಿ. ನಂಜಾಮರಿ, ಕೆ. ಷಡಕ್ಷರಿ, ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್, ಜನಸ್ಪಂಧನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್, ಮಧುಬೋರ್‌ವೆಲ್, ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್.ಬಿ. ದಿವಾಕರ್, ಪ್ರಧಾನ ಕಾರ್ಯದರ್ಶಿ ಯು.ಬಿ. ಶಿವಪ್ಪ, ಉಪಾಧ್ಯಕ್ಷ ಬಸವರಾಜು, ನಮ್ರತಾ ಆಯಿಲ್‌ನ ಶಿವಪ್ರಸಾದ್, ಭದ್ರಪ್ಪ, ನಿ. ಪ್ರಾಂಶುಪಾಲರಾದ ಶಂಕರಪ್ಪ, ಶಸಾಪ ತಾ. ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ, ಮಾಜಿ ಜಿ.ಪಂ. ಸದಸ್ಯ ತ್ರಿಯಂಬಕ, ಕೆರೆಗೋಡಿ ದೇವರಾಜು, ಸೇರಿದಂತೆ ಶ್ರೀಮಠದ ಆಡಳಿತ ಮಂಡಳಿ, ಶಾಲಾ-ಕಾಲೇಜು ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳ ವೃಂದ ಹಾಗೂ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು. ಶಿಕ್ಷಕ ಗಂಗಣ್ಣ ನಿರೂಪಿಸಿ, ಸ್ವಾಗತಿಸಿದರು.