ಬಿಜೆಪಿ ಅಲ್ಪಸಂಖ್ಯಾತರ ಮೂಲಕ ದಲಿತರನ್ನು ಬಗ್ಗು ಬಡಿಯಲು ಹೊರಟಿದೆ : ಜಿ.ಪಂ.ಸದಸ್ಯ ಕೆಂಚಮಾರಯ್ಯ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಾಬು ಜಗಜೀವನ್ ರಾಂ ಅವರ 115ನೇ ಜನ್ಮ ಜಯಂತಿ ಆಚರಣೆ

ತುಮಕೂರು : ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಅಲ್ಪಸಂಖ್ಯಾತರ ಹೆಗಲ ಮೇಲೆ ಬಂದೂಕ ಇಟ್ಟು, ದಲಿತರನ್ನು ಹೊಡೆಯಲು ಹೊರಟಿದೆ.ಈ ಬಗ್ಗೆ ಎಲ್ಲಾ ಪಕ್ಷದಲ್ಲಿರುವ ದಲಿತ ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಜಿ.ಪಂ.ಸದಸ್ಯ ಕೆಂಚಮಾರಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ 115ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಗೋಮಾಂಸದ ಹೆಸರಿನಲ್ಲಿ ದಲಿತರನ್ನು ಮಟ್ಟ ಹಾಕಲು ಹೊರಟ ಬಿಜೆಪಿ, ಸಾಧ್ಯವಾಗದೆ, ಹಿಂಭಾಗಲಿನ ಮೂಲಕ ಕೋಮುಭಾವನೆ ಕೆರಳಿಸುವ ಹಿಜಾಬ್, ಹಲಾಲ್ ಕಟ್, ಆಜ್ಹಾನ್ ಮೂಲಕ ಈ ದೇಶದ ದಲಿತರ ಮೇಲೆ ಸವಾರಿ ಮಾಡಲು ಹೊರಟಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಎಂದಿಗೂ ಅವಕಾಶ ನೀಡಬಾರದು ಎಂದರು.
ರಾಜ್ಯದಲ್ಲಿ ಕೋಮುಭಾವನೆ ಕೆರಳಿಸುವ ಕೆಲಸವನ್ನು ವ್ಯವಸ್ಥಿತವಾಗಿ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಮಾಡುತ್ತಿದ್ದರೂ, ಕಾಂಗ್ರೆಸ್ ಪಕ್ಷದ ಒಂದು ರೀತಿ ಮೌನಕ್ಕೆ ಶರಣಾಗಿರುವುದು ಸರಿಯಲ್ಲ. ಈ ರೀತಿಯ ದ್ವಂದ್ವ ನಿಲುವುವನ್ನು ತಕ್ಷಣವೇ ಕೈಬಿಟ್ಟು, ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ತಡೆಯಬೇಕೆಂದು ಆಗ್ರಹಿಸಿದ ಕೆಂಚಮಾರಯ್ಯ,ದಲಿತರು,ಮುಸ್ಲಿಮರು, ಹಿಂದುಳಿದ ವರ್ಗಗಳಿಗೆ ನೈತಿಕ ಬೆಂಬಲವನ್ನು ಪಕ್ಷ ಘೋಷಿಸಬೇಕು ಎಂದು ಆಗ್ರಹಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೆ ತಂದವರು ಬಾಬು ಜಗಜೀವನ್ ರಾಮ್ ಅವರು,ತಾವು ವಹಿಸಿಕೊಂಡ ಖಾತೆಗಳಲ್ಲಿ ಸಂವಿಧಾನದ ಅಡಿಯಲ್ಲಿ ಎಲ್ಲಾ ವರ್ಗಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ, ಮೀಸಲಾತಿ ಪರಿಕಲ್ಪನೆಗೆ ನ್ಯಾಯ ಒದಗಿಸಿದವರು, ರಕ್ಷಣಾ ಮಂತ್ರಿಯಾಗಿ ಭಾಂಗ್ಲಾ ವಿಮೋಚನೆ ಸೇರಿದಂತೆ ಹಲವು ದಿಟ್ಟ ನಿರ್ಧಾರಗಳು ಬಾಬು ಜಗಜೀವನ್ ರಾಂ ಓರ್ವ ಸಮರ್ಥ ಆಡಳಿತಗಾರರ ಎಂಬುದನ್ನು ನಿರೂಪಿಸಿದವರು.ಕಾರ್ಮಿಕ ಸಚಿವರಾಗಿ ಸರಕಾರದ ಸವಲತ್ತು ಕಾರ್ಮಿಕರಿಗೆ ತಲುಪುವಂತೆ ಮಾಡಿದವರು, ಇಂತಹ ಮಹನೀಯರ ಜಯಂತಿಯನ್ನು ಒಂದು ಜಾತಿಗೆ ಸಿಮೀತಗೊಳಿಸದೆ, ನಾಡಿನ ಎಲ್ಲಾ ಜನರು ಆಚರಿಸುವಂತಾಗಬೇಕು ಎಂದು ಕೆಂಚಮಾರಯ್ಯ ನುಡಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ದೇಶದ ಅಭಿವೃದ್ದಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ, ಕೈಗಾರಿಕೆ,ಹೈನುಗಾರಿಕೆ ಮುಂತಾದ ಯೋಜನೆಗಳ ಮೂಲಕ ಇಡೀ ರಾಷ್ಟçಕ್ಕೆ ಸ್ವಾವಲಂಬನೆಯ ಪಾಠ ಕಲಿಸಿದ್ದು ಬಾಬು ಜಗಜೀವನ್ ರಾಂ, ಅಂದು ಸ್ಥಾಪನೆಯಾದ ಸಾರ್ವಜನಿಕ ಉದ್ಯಮಗಳನ್ನು ಇಂದಿನ ಮೋದಿ ಸರಕಾರ ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುವಂತೆ ಮಾಡಿದೆ. ಇದು ಖಂಡನೀಯ. ಇದರ ವಿರುದ್ದ ನಾವೆಲ್ಲರೂ ಒಗ್ಗೂಡಬೇಕಿದೆ ಎಂದರು.
ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ದೇಶ ಇಂದು ಆಹಾರ ವಿಚಾರದಲ್ಲಿ ಸ್ವಾವಲಂಭನೆ ಸಾಧಿಸಿದ್ದರೆ, ಅದಕ್ಕೆ ಬಾಬೂಜಿ ಅವರ ಕೊಡುಗೆ ಅಪಾರ.ಕೃಷಿ ಸಚಿವರಾಗಿ, ನೀರಾವರಿ ಸಚಿವರಾಗಿ ಹೈಬ್ರಿಡ್ ತಳಿಗಳು, ನೀರಾವರಿಗಾಗಿ ಡ್ಯಾಂಗಳ ನಿರ್ಮಾಣ ಮಾಡಿ, ದೇಶದ ಬಡ ಜನತೆ ಹಸಿವಿನಿಂದ ನರಳುವುದನ್ನು ತಪ್ಪಿಸಿದರು. ಪಂಚವಾರ್ಷಿಕ ಯೋಜನೆಗಳ ಜೊತೆಗೆ, ಇಂದಿರಗಾಂಧಿ ಅವರ 20 ಅಂಶಗಳ ಕಾರ್ಯಕ್ರಮದ ಮೂಲಕ ದೇಶದಿಂದ ಬಡತನವನ್ನು ಕಿತ್ತೊಗೆಯಲು ಹಗಲಿರುಳು ಶ್ರಮಿಸಿದವರು ಬಾಬು ಜಗಜೀವನ್ ರಾಂ, ಅವರ ಅಡಳಿತ ಎಲ್ಲರಿಗೂ ಮಾದರಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಿಸಿ, ನೆಹರು ಸಂಪುಟದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಸಚಿವರಾಗಿ ಮಹತ್ವದ ಖಾತೆಗಳನ್ನು ನಿಬಾಯಿಸಿದ ಬಾಬು ಜಗಜೀವನ್ ರಾಂ, ನೀರಾವರಿ, ಆಹಾರ ಭದ್ರತೆಗೆ ಒತ್ತು ಕೊಟ್ಟುವರು. ಅನ್ಯ ಕಾರಣಕ್ಕೆ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಿ, ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಬಾಬೂಜಿ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ದಲಿತರಿಗೆ ರಕ್ಷಣೆ ಎಂಬುದನ್ನು ಅಂದೆ ಮನಗಂಡಿದ್ದರು. ಹಾಗಾಗಿ ಎಲ್ಲಾ ಪಕ್ಷದಲ್ಲಿರುವ ದಲಿತ ರಾಜಕಾರಣಿಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿಜಯಕುಮಾರ್, ಆಟೋ ರಾಜು, ಕೆಂಪಣ್ಣ,ಮುಖಂಡರಾದ ಸಿದ್ದಲಿಂಗೇಗೌಡ, ನ್ಯಾತೇಗೌಡ, ಸುಜಾತ, ನಾಗವೇಣಿ, ಮಂಜುನಾಥ್, ಚಂದ್ರಶೇಖರ್ ಗೌಡ, ಸಂಜೀವ್ ಕುಮಾರ್, ಶಿವಾಜಿ, ನಟರಾಜು, ಶೆಟ್ಟಾಳಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.