ಉಕ್ರೇನ್ ನಿಂದ ಹಿಂದಿರುಗಿರುವ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ನೊಂದಣಿ ಮಾಡಿ ಶಿಕ್ಷಣ ನೀಡಿ : ಮಾಜಿ ಶಾಸಕ ಡಾ. ರಫೀಕ್ ಅಹ್ಮದ್

ತುಮಕೂರು : ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿ ಹಿಂದಿರುಗಿರುವುದು ಸಮಾಧಾನಕರ ವಿಷಯ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಸುರಕ್ಷಿತವಾಗಿದೆ. ವಿದ್ಯಾಭ್ಯಾಸ ಕಡಿತಗೊಂಡು ತ್ರಿಶಂಕು ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ಕನಸಾಗಿಯೇ ಉಳಿದಿದೆ. ಮತ್ತೆ ಇವರೆಲ್ಲಾ ಉಕ್ರೇನ್‌ಗೆ ತೆರಳಿ ವಿದ್ಯಾಭ್ಯಾಸ ಮಾಡುವುದು ಮುಗಿದ ಅಧ್ಯಾಯ. ಈ ಕಾರಣ ವಿದ್ಯಾರ್ಥಿಗಳು ಮತ್ತು ಪೋಷಕರು ಮನೋಸ್ಥೆöÊರ್ಯ ಕಳೆದುಕೊಂಡಿದ್ದಾರೆ. ಆದ್ದರಿಂದ ಸರ್ಕಾರವೇ ಇವರಿಗೆ ನೆರವಾಗಬೇಕೆಂದು ಮಾಜಿ ಶಾಸಕರು ಒತ್ತಾಯಿಸಿದ್ದಾರೆ.
ಸದ್ಯಕ್ಕೆ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೊಂದಣಿ ಮಾಡಿಕೊಳ್ಳುತ್ತಿಲ್ಲ ಆದರೆ ಅವರ ಕಲಿಕೆ, ತರಬೇತಿಯನ್ನು ಇಲ್ಲಿ ಮುಂದುವರಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದು ಇದು ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ. ಅಧಿಕೃತವಾಗಿ ನೊಂದಣಿ ಮಾಡಿಕೊಳ್ಳದೆ ತರಬೇತಿ ನೀಡಿದರೆ ಯಾವ ಆಧಾರದ ಮೇಲೆ ಪ್ರಮಾಣ ಪತ್ರ ನೀಡುತ್ತಾರೆ ಹಾಗೂ ವೈದ್ಯಕೀಯ ಶಿಕ್ಷಣ ಮಾಡಿರುವುದಕ್ಕೆ ಯಾವ ದಾಖಲೆ ಮೂಲಕ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಬೇಕು ಎಂದು ಡಾ.ರಫೀಕ್ ಅಹ್ಮದ್ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಈ ಪ್ರಕರನವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನೊಂದಣಿ ಪ್ರಕ್ರಿಯೆಯಲ್ಲಿ ಸೂಕ್ತ ಬದಲಾವಣೆ ರಚಿಸಿ ಕೂಡಲೇ ಈ ವಿದ್ಯಾರ್ಥಿಗಳಿಗೆ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ಅಧಿಕೃತವಾಗಿ ನೊಂದಣಿ ಮಾಡಿಕೊಂಡು ವೈದ್ಯಕೀಯ ಶಿಕ್ಷಣ ನೀಡಬೇಕು. ಯಾವ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆಯೋ ಅದೇ ವರ್ಷದಲ್ಲಿ ಮುಂದುವರಿಕೆ ಮಾಡಬೇಕು. ಹಾಗೂ ಈ ವಿದ್ಯಾರ್ಥಿಗಳು ಯುದ್ದಪೀಡಿತ ಉಕ್ರೇನ್‌ನಿಂದ ಹಿಂದಿರುಗಿ ಸಂತ್ರಸ್ತರಾಗಿರುವ ಕಾರಣ ಉಚಿತ ಶಿಕ್ಷಣ ನೀಡಬೇಕೆಂದು ಡಾ. ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.