ಹೆಗ್ಗೆರೆ ಗ್ರಾಮಕ್ಕೆ ಹೇಮಾವತಿ ನೀರು ಪೂರೈಕೆಗೆ ಕ್ರಮ : ಡಾ.ಜಿ.ಪರಮೇಶ್ವರ್
ಶಿಕ್ಷಣ ಭೀಷ್ಮ ಡಾ: ಹೆಚ್.ಎಮ್. ಗಂಗಾಧರಯ್ಯ ಬಡಾವಣೆ ರಸ್ತೆ ಮುಖ್ಯದ್ವಾರದ ಉದ್ಘಾಟನೆ
ತುಮಕೂರು: ಹೆಗ್ಗೆರೆ ಗ್ರಾಮಕ್ಕೆ ಹೇಮಾವತಿ ನೀರು ಪೂರೈಕೆ ಆದರೆ ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದ್ದು, ಈ ನಿಟ್ಟಿನಲ್ಲಿ ಶಾಸಕರೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ(ರಿ) ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣ ಭೀಷ್ಮ ಡಾ:ಹೆಚ್. ಎಮ್.ಗಂಗಾಧರಯ್ಯನವರ ಬಡಾವಣೆ ರಸ್ತೆಯ ಮುಖ್ಯದ್ವಾರ ಉದ್ಘಾಟನಾ ಸಮಾರಂಭ ಹಾಗೂ ಅಭಿನಂದನಾ ಸಮಾರಂಭದಲ್ಲಿ ನಾಗರೀಕರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಹೆಗ್ಗೆರೆ- ಗೊಲ್ಲಹಳ್ಳಿ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು,ವಕ್ಕೊಡಿವರೆಗೂ ವಿಸ್ತಾರ ಗೊಂಡಿದೆ, ಇಲ್ಲಿನ ಜನರು ಕುಡಿಯುವ ನೀರಿಗೆ ಕೊಳವೆಬಾವಿಯನ್ನು ನೆಚ್ಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ನೀರು ಪೂರೈಕೆ ಆಗಬೇಕಾದರೆ ಹೇಮಾವತಿ ನೀರು ಹರಿಸಬೇಕಿದೆ ಎಂದು ಹೇಳಿದರು.
ಈಗಾಗಲೇ ಸಿದ್ಧಾರ್ಥ ಮೆಡಿಕಲ್ ಕಾಲೇಜುವರೆಗೂ ಹೇಮಾವತಿ ನೀರಿನ ಸಂಪರ್ಕ ಇದ್ದು, ಅದನ್ನು ಹೆಗ್ಗೆರೆವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು,ಈ ಬಡಾವಣೆಗೆ ಸಂಪರ್ಕಿಸುವ ರಸ್ತೆಯನ್ನು ಡಾಂಬರೀಕರಣ ಮಾಡಿಸಿಕೊಡುವ ಭರವಸೆ ನೀಡಿದರು.
ಬಡಾವಣೆ ನಾಗರೀಕ ಸಮಿತಿ ಅಧ್ಯಕ್ಷ ಎಂ.ಕೃಷ್ಣಯ್ಯ ಮಾತನಾಡಿ, ಈ ಬಡಾವಣೆಗೆ ರಸ್ತೆಯಿಲ್ಲದೇ ನಾಗರೀಕರು ಪರಿತಪಿ ಸುತ್ತಿದ್ದಾಗ, ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಸೇರಿದ ಜಾಗವನ್ನು ರಸ್ತೆಗಾಗಿ ನೀಡುವ ಮೂಲಕ ನಾಗರೀಕರ ಕಷ್ಟಕ್ಕೆ ಸ್ಪಂದಿಸಿದ್ದಾರೆ, ಹೆಗ್ಗೆರೆ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಕಂಡು ಕೊಳ್ಳಲು ಸಹಕಾರ ನೀಡುವಂತೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಹಿತರಕ್ಷಣಾ ಸಮಿತಿ ಮುಂದಿನ ವರ್ಷಗಳಲ್ಲಿ ಹಮ್ಮಿಕೊಳ್ಳುವ ವಾರ್ಷಿಕ ಕಾರ್ಯಕ್ರಮಗಳಲ್ಲಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಗಳಾಗಿ ಭಾಗವಹಿಸಬೇಕೆಂಬುದು ಇಲ್ಲಿನ ಎಲ್ಲರ ಒತ್ತಾಸೆಯಾಗಿದ್ದು, ಮುಂದಿನ ದಿನಗಳಲ್ಲಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಗಳಾಗುವುದು ನಿಶ್ಚಿತ, ಅವರ ಕೆಲಸ ಕಾರ್ಯಗಳಲ್ಲಿ ಬಡಾವಣೆಯ ಎಲ್ಲರು ಭಾಗವಹಿಸುವುದಾಗಿ ಭರವಸೆ ನೀಡಿದರು.
ಸಂಘದ ಕಾರ್ಯದರ್ಶಿ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಡಾವಣೆಯಲ್ಲಿ ವಾಸಿಸುವವರಿಗೆ ದಾರಿ ಇಲ್ಲ ದಂತಹ ಪರಿಸ್ಥಿತಿಯಲ್ಲಿ ಆತಂಕಕ್ಕೆ ಒಳಗಾಗಿದ್ದ ನಾಗರೀಕರಿಗೆ ಪರಮೇಶ್ವರ್ ಅವರು ಅವರ ಜಮೀನಿನಲ್ಲಿ ದಾರಿ ಬಿಡುವ ಮೂಲಕ ನಮ್ಮೆಲ್ಲರಿಗೂ ದಾರಿದೀಪವಾಗಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಈ ಬಡಾವಣೆಯಲ್ಲಿರುವ ಎಲ್ಲರು ಸೇರಿ ಜೀವನ ಇರುವವರೆಗೆ ಡಾ.ಜಿ.ಪರಮೇಶ್ವರ್ ಅವರನ್ನು ಸ್ಮರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ.ಸದಸ್ಯೆ ಸುಮಂಗಲ, ವಿಶಾಲ ರೇವಣ್ಣ, ಗ್ರಾ.ಪಂ.ಸದಸ್ಯೆ ಅಕುಂ, ಬಡಾವಣೆ ನಾಗರೀಕ ಸಮಿತಿ ಅಧ್ಯಕ್ಷ ಎಂ.ಕೃಷ್ಣಯ್ಯ,ಕಾರ್ಯದರ್ಶಿ ಸೋಮಶೇಖರ್ ಸಮಿತಿಯ ಗೌರವಾಧ್ಯಕ್ಷ ರಂಗಸ್ವಾಮಿ, ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ನಟರಾಜು, ಖಜಾಂಚಿ ರಘು, ಹಿತರಕ್ಷಣಾ ಸಮಿತಿ ಸದಸ್ಯರು ಕಂಠಾರಾಧ್ಯ, ದಿಲೀಪರಾಜ್, ಸುನೀತ, ಶೈಲಜಾ, ಮೈಲಾರಪ್ಪ, ಜಬೀವುಲ್ಲಾ, ಬಾಬು ಯಶೋಧಮ್ಮ,ಸೇರಿದಂತೆ ಸದಸ್ಯರು ಹಾಗೂ ಹೆಗ್ಗೆರೆ ಗ್ರಾಮದ ಸಮಸ್ತ ನಾಗರಿಕರು ಪಾಲ್ಗೊಂಡಿದ್ದರು.