ಶಿರಾ : ಶಿರಾ ಕ್ಷೇತ್ರದಲ್ಲಿ ನನಗೆ ಐತಿಹಾಸಿಕ ಗೆಲುವು ನೀಡಿ ಭಾರತದ ಇತಿಹಾಸ ಪುಟದಲ್ಲಿ ಸೇರುವಂತೆ ಮಾಡಿದ್ದೀರಿ. ಅದಕ್ಕೆ ಅನುಗುಣವಾಗಿ ಜನರಿಗೆ ಸ್ಪಂದನೆಯಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಪ್ಪರ್ ಭದ್ರ, ಎತ್ತಿನ ಹೊಳೆ ಕುಡಿಯುವ ನೀರು ಶಿರಾ ತಾಲ್ಲೂಕಿಗೆ ಹರಿಯಲಿದ್ದು, ನೀರಿನಿಂದ ತಾಲ್ಲೂಕು ಸಮೃದ್ಧಿಯಾಗಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಶಿರಾದ ಅಮರಾಪುರ ರಸ್ತೆಯಲ್ಲಿ ತಮ್ಮ 47ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡು ಮಾತನಾಡಿದರು. ನಾನು ಶಾಸಕನಾಗುವ ಅವಧಿಗಿಂತ ಮುನ್ನಾ ತಾಲ್ಲೂಕಿನಲ್ಲಿ ಮೂಲಭೂತ ಅಗತ್ಯತೆಗಳು ಕೊರತೆ ಇತ್ತು. ಆ ಸಂದರ್ಭದಲ್ಲಿ ತಾಲ್ಲೂಕಿನ ಜನತೆ ಆರೋಗ್ಯ ಸಮಸ್ಯೆಗಳಿಗೆ ಬೆಂಗಳೂರಿಗೆ ಹೋಗುವ ರೋಗಿಗಳಿಗೆ ತಪಾಸಣೆ ಮಾಡುವಲ್ಲಿ ಶ್ರಮಿಸಿ ಆತ್ಮತೃಪ್ತಿ ಕಾಣುತ್ತಿದೆ. ಶಿರಾ ಕ್ಷೇತ್ರದ ಜನತೆ ನಾನು ಶಾಸಕನಾಗಿ ಅತಿ ಹೆಚ್ಚು ಕೆಲಸ ಮಾಡಲು ಉತ್ತೇಜನ ಸಹಕಾರ ಕೊಟ್ಟಿದ್ದಾರೆ. ನಿಮ್ಮೆಲ್ಲರ ಹಾರೈಕೆ ಸಹಕಾರದಿಂದ ಅಲ್ಪಾವಧಿಯಲ್ಲಿ ತಾಲ್ಲೂಕಿನ ನೀರಾವರಿ ಸಮಸ್ಯೆ ನಿವಾರಣೆ ಮಾಡಲು ಯಶಸ್ವಿಯಾಗಿದ್ದೇನೆ ಎಂದರು.
ನನಗೆ ಅಣ್ಣನ ರೀತಿಯಲ್ಲಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿಯವರು ಸಹಕಾರ ಕೊಟ್ಟಿದ್ದಾರೆ. ರೇಷ್ಮೆ ನಿಗಮದ ಅಧ್ಯಕ್ಷರಾದ ಎಸ್.ಆರ್.ಗೌಡ ಅವರು, ನಾರು ನಿಗಮದ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್ ಅವರು ಸಹ ಉತ್ತಮ ಸಹಕಾರ ಕೊಟ್ಟಿದ್ದಾರೆ. ಬಿಜೆಪಿ ಪಕ್ಷವನ್ನು ಈ ತಾಲ್ಲೂಕಿನಲ್ಲಿ ಉತ್ತಮ ರೀತಿಯಲ್ಲಿ ಸಂಘಟಿಸುವಲ್ಲಿ ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಅವರು ಶ್ರಮಿಸಿದ್ದಾರೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಎಲ್ಲರೂ ಉತ್ತಮ ಸಹಕಾರ ಕೊಟ್ಟಿದ್ದಾರೆ ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಅವರು ಮಾತನಾಡಿ ರಾಜೇಶ್ ಗೌಡ ಅವರು ಶಾಸಕರಾಗಿದ್ದಾಗಿನಿಂದ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಿ ಜನರು ನೆಮ್ಮದಿಯಾಗಿದ್ದಾರೆ. ಶಾಸಕರು ಸರಕಾರದೊಂದಿಗೆ ಒಡನಾಟ ಇಟ್ಟುಕೊಂಡು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಹೆಚ್ಚು ಪ್ರಗತಿಯಾಗಲಿ ಎಂದರು.
ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ಸರಳ ವ್ಯಕ್ತಿಯಾದ ಶಾಸಕರು ಹೆಚ್ಚಿನ ಅಧಿಕಾರ ಸಿಗಲಿ ಎಂದು ಹಾರೈಸಿದರು.
50 ಕ್ಕೂ ಹೆಚ್ಚು ಮಂದಿ ನೇತ್ರದಾನ: ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಮಂದಿ ನೇತ್ರದಾನಕ್ಕೆ ತಮ್ಮ ಹೆಸರನ್ನು ನೊಂದಾಯಿಸಿಕೊAಡರು. ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಹಾಲು ಬ್ರೆಡ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಮುಖಂಡರಾದ ಮದಲೂರು ಮೂರ್ತಿ ಮಾಸ್ಟರ್, ಮದಲೂರು ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದಿಮಡು ಮಂಜುನಾಥ್, ಮಾಲಿ ಸಿ.ಎಲ್.ಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹನುಮಂತನಾಯ್ಕ, ಚಂಗಾವರ ಮಾರಣ್ಣ, ಬಿಜೆಪಿ ಓಬಿಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ.ಈ.ಮಲ್ಲಯ್ಯ, ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ರವಿಕಿರಣ್ ಸೇರಿದಂತೆ ಹಲವರು ಹಾಜರಿದ್ದರು.