ಬೆಂಗಳೂರು:ಹಿಜಾಬ್ ವಿವಾದ ಕುರಿತು ಸರ್ಕಾರ ಶಾಲೆಗಳಿಗೆ ಹೊರಡಿಸಿದ್ದ ಆದೇಶ ಕ್ರಮಬದ್ಧವಾಗಿದೆ ಎಂಬ ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಹೈಕೋರ್ಟ್ ತೀರ್ಪು ಬಳಿಕ ಪ್ರತಿಕ್ರಿಯೆ ನೀಡಿರುವ ಅವರು ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸಮಾಜದ ಮುಖ್ಯವಾಹಿನಿಗೆ ಬಂದು ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟತೆ ನೀಡಿದೆ. ಶಿಕ್ಷಣ ನೀತಿಯಲ್ಲಿ ಸಮವಸ್ತ್ರ ಕುರಿತು ಇದ್ದಂತಹ ಗೊಂದಲಗಳನ್ನು ಈ ತೀರ್ಪಿನ ಆಧಾರದ ಮೇಲೆ ತಿದ್ದುಪಡಿ ಮಾಡುವ ಮೂಲಕ ಸರಿಪಡಿಸಲಾಗುವುದು ಎಂದು ಬಿ.ಸಿ.ನಾಗೇಶ್ ಹೇಳಿದರು.
ಮಕ್ಕಳಲ್ಲಿ ಏಕರೂಪದ ಮಾನಸಿಕತೆ ತರಲು ಸಮವಸ್ತ್ರ ಅಗತ್ಯ ಎಂಬುದು ಈಗಾಗಲೇ ಹಲವು ವರ್ಷಗಳಿಂದ ತಿಳಿದಿದೆ. ನಾವೆಲ್ಲ ಈ ದೇಶದ ಮಕ್ಕಳು, ರಾಷ್ಟ್ರೀಯ ಪ್ರಜೆಗಳು ಎಂಬ ಮಾನಸಿಕತೆ ಎಲ್ಲ ವಿದ್ಯಾರ್ಥಿಗಳಲ್ಲಿಯೂ ಬರಬೇಕು ಎಂದರು.
ಕರ್ನಾಟಕದ ಇತಿಹಾಸದಲ್ಲಿ ಹೈಕೋರ್ಟ್ ತೀರ್ಪನ್ನು ವಿರೋಧಿಸಿದ ಅಥವಾ ಉಲ್ಲಂಘಿಸಿದ ಇತಿಹಾಸ ಇಲ್ಲ. ಹಾಗಾಗಿ ಎಲ್ಲಾ ಮಕ್ಕಳು ಹೈಕೋರ್ಟ್ ತೀರ್ಪು ಆದೇಶ ಪಾಲಿಸಿ ಶಿಕ್ಷಣ ಪಡೆಯಬೇಕು. ಹಿಜಾಬ್ ವಿಚಾರದಲ್ಲಿ ಕೆಲವು ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗಿತ್ತು. ಅಂತಹ ವಿದ್ಯಾರ್ಥಿನಿಯರು ತಮ್ಮ ಚೌಕಟ್ಟುಗಳನ್ನು ಮಿರಿ ಹೈಕೋರ್ಟ್ ಆದೇಶ ಪಾಲಿಸಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲ ವಿದ್ಯಾರ್ಥಿಗಳಂತೆ ಶಿಕ್ಷಣ ಪಡೆಯಬೇಕು,ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಬಿ.ಸಿ.ನಾಗೇಶ್ ಮನವಿ ಮಾಡಿದರು.