ಶಿಕ್ಷಣ ಮತ್ತು ಆರೋಗ್ಯ ಸೇವೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ : ಸಚಿವ ಡಾ. ಕೆ. ಸುಧಾಕರ್
ಜೆ.ಸಿ.ಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ
ತುಮಕೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ನಾಗರಿಕ ಸಮಾಜದ ಎರಡು ಕಣ್ಣುಗಳಿದ್ದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸುಸ್ಥಿರವಾಗಿದ್ದರೆ ಸ್ವಾಭಾವಿಕವಾಗಿ ಸಮಾಜದ ಆರ್ಥಿಕ ಮಟ್ಟವೂ ಹೆಚ್ಚಳವಾಗಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವೆ ಉನ್ನತೀಕರಣಗೊಳಿಸಿ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕ್ರಾಂತಿಕಾರ ಹೆಜ್ಜೆ ಇಟ್ಟಿದೆ ಎಂದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜಯಚಾಮರಾಜಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಆಸ್ಪತ್ರೆಗಳು ಸಹ ಕಮ್ಯಾಂಡ್ ಸೆಂಟರ್‌ನಲ್ಲಿ ಮ್ಯಾಪ್ ಆಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಸಮಗ್ರವಾದ ನೀತಿ, ಸೇವೆ ಒದಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂದಿನ 2 ತಿಂಗಳಲ್ಲಿ ಕಮ್ಯಾಂಡ್ ಸೆಂಟರ್‌ನ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ನಂತರ ಆಂಬ್ಯುಲೆನ್ಸ್ ಸೇವೆಯಲ್ಲೂ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದರು.
ಆರೋಗ್ಯ ಸೇವೆ ಉನ್ನತೀಕರಣಗೊಳಿಸಲು ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಎಷ್ಟು ಹೂಡಿಕೆ ಮಾಡಿದರೂ ಸಾಲದು. ಅಮೆರಿಕಾದಂತಹ ಮುಂದುವರೆದ ದೇಶ ವರ್ಷಕ್ಕೆ 23 ಟ್ರಿಲಿಯನ್ ಡಾಲರ್ ಜಿಎಸ್‌ಟಿಯಲ್ಲಿ ಶೇ. 20 ರಷ್ಟು ಜಿಎಸ್‌ಟಿ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದೆ ಎಂದರು.
ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ತುರ್ತು ಸೇವೆ ಪ್ರತಿಯೊಬ್ಬರಿಗೂ ದೊರೆಯಬೇಕಾಗಿದೆ. ಸಮಗ್ರವಾಗಿ, ಬಹಳ ವೇಗವಾಗಿ 20 ನಿಮಿಷದೊಳಗೆ ಆಂಬ್ಯುಲೆನ್ಸ್ ಸೇವೆ ದೊರೆಯಬೇಕು. ಈ ಸಂಬಂಧ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ 5 ವರ್ಷದಲ್ಲಿ ಆರೋಗ್ಯ ಸೇವೆಯ ಚಿತ್ರಣವೇ ಬದಲಾಗಲಿದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 1730 ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಯಿತು. 2 ಸಾವಿರ ವೈದ್ಯರನ್ನು ಕಡ್ಡಾಯ ಗ್ರಾಮೀಣ ಸೇವೆ ಯೋಜನೆಯಲ್ಲಿ ನೇಮಕ ಮಾಡಲಾಯಿತು. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ವತಿಯಿಂದ ಆರೋಗ್ಯ ಶಿಬಿರಗಳನ್ನು ನಡೆಸುವ ಚಿಂತನೆಯಿದ್ದು, ಹೃದಯ, ಕ್ಯಾನ್ಸರ್‌ಗೆ ಸಂಬಂಧಿಸಿದ ವ್ಯಾದಿಗಳು, ಮೂತ್ರ ಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಶಿಬಿರಗಳನ್ನು ನಡೆಸಲಾಗುವುದು. ಈ ಸಮಸ್ಯೆಗಳನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ರೋಗಿಗಳು ಗುಣಮುಖರಾಗುವ ಸಾಧ್ಯತೆ ಇದೆ ಎಂದರು.
ಗ್ರಾಮೀಣ ಜನರಲ್ಲಿ ಆರೋಗ್ಯ ಬಗ್ಗೆ ಅರಿವಿನ ಕೊರತೆಯಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆಗಳು ಮತ್ತಷ್ಟು ಉತ್ತಮವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ವ್ಯಕ್ತಿ 45 ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಇದರ ಸದ್ಬಳಕೆಯನ್ನು ಗ್ರಾಮೀಣ ಜನರು ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಆಸ್ಪತ್ರೆಗಳಿಗೆ ಬಂದು ವರ್ಷಕ್ಕೊಮ್ಮೆ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಹೊಣೆ ಎಂಬುದನ್ನು ಮರೆಯಬಾರದು ಎಂದರು.
ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ಅತ್ಯಂತ ಸಂತಸದಿAದ ನೆರವೇರಿಸಿದ್ದೇನೆ. ನಾನು ಮೊದಲನೇ ಬಾರಿ ಮಂತ್ರಿಯಾಗಿದ್ದೇನೆ, ಮೊದಲ ಬಾರಿಗೆಯೇ ಸಾಂಕ್ರಾಮಿಕ ರೋಗವನ್ನು ನಿಯಂತ್ರಣ ಮಾಡುವ ಹೊಣೆಯೂ ನನ್ನ ಮೇಲಿದೆ. ಈ ಎಲ್ಲ ಸವಾಲುಗಳನ್ನು ರಾಜ್ಯದ ಜನತೆಯ ಸಹಕಾರ, ಆಶೀರ್ವಾದದಿಂದ ನಿಭಾಯಿಸುತ್ತಾ ಸಾಗುತ್ತಿದ್ದೇನೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಕೋವಿಡ್ ನಿಭಾಯಿಸುವಲ್ಲಿ ಮಾಧುಸ್ವಾಮಿಯವರ ಕ್ರಿಯಾಶೀಲತೆಯೂ ಮುಖ್ಯ ಕಾರಣವಾಗಿದೆ. ಈ ರೋಗ ನಿಯಂತ್ರಣಕ್ಕೆ ವೈದ್ಯರು, ಆಶಾ ಕಾರ್ಯಕರ್ತರು ಸಹ ಹಗಲಿರುಳು ಶ್ರಮಿಸಿದ್ದಾರೆ.
ಮೊದಲನೇ ಅಲೆಯಿಂದ ಹಿಡಿದು ಲಸಿಕೆ ಕೊಡುವವರೆಗೂ ಮನೆ ಮನೆಗೆ ಭೇಟಿ ನೀಡಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕೊರೊನಾ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿರುವ ಆಶಾ ಕಾರ್ಯಕರ್ತರ ಗೌರವ ಧನವನ್ನು ಕನಿಷ್ಠ 2 ಸಾವಿರ ರೂ. ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿಗಳು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು 1 ಸಾವಿರ ರೂ. ಹೆಚ್ಚಳ ಮಾಡಿದ್ದಾರೆ ಎಂದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವAತೆ ಸರ್ಕಾರವನ್ನು ಒತ್ತಾಯಿಸಿದರು.
ಈಗಾಗಲೇ ತುಮಕೂರು ನಗರದಲ್ಲಿ ಮೂರು ಮೆಡಿಕಲ್ ಕಾಲೇಜುಗಳು ಇವೆ. ಹಾಗಾಗಿ ಜಿಲ್ಲಾಸ್ಪತ್ರೆಗೆ ಮೆಡಿಕಲ್ ಕಾಲೇಜು ಬೇಡ ಎಂದು ನಾವೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿ, ಸ್ನಾತಕೋತ್ತರ ಕೋರ್ಸ್ ಮಂಜೂರು ಮಾಡಿಸಲಾಯಿತು ಎಂದರು.
ಕೆ.ಬಿ.ಕ್ರಾಸ್ ಹಲವು ತಾಲ್ಲೂಕು, ಜಿಲ್ಲೆಗಳಿಗೆ ಸಂಪರ್ಕಿಸುವ ಸ್ಥಳವಾಗಿದ್ದು, ಇಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದರೆ ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ. ಆದ್ದರಿಂದ ಸರ್ಕಾರ ತುಮಕೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದಾದರೆ ಕೆ.ಬಿ. ಕ್ರಾಸ್‌ಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಎಂ.ಡಿ., ಎಂ.ಎಸ್. ಕೋರ್ಸ್ಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ. ಬೆಂಗಳೂರಿನಲ್ಲಿ ದೊರೆಯುವ ಎಲ್ಲ ಆರೋಗ್ಯ ಸೌಲಭ್ಯಗಳೂ ತುಮಕೂರಿನಲ್ಲೂ ಸಿಗುವಂತೆ ಮಾಡಲಾಗುತ್ತಿದೆ ಎಂದರು.
ಈಗಾಗಲೇ ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಟ್ರಾಮಾ ಸೆಂಟರ್‌ನ್ನು ಆದಷ್ಟು ಬೇಗ ಆರಂಭಿಸುವ ಬಗ್ಗೆಯೂ ಕ್ರಮ ವಹಿಸಲಾಗಿದೆ. ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಹಿಂದೆಂದೂ ಇಷ್ಟರ ಮಟ್ಟಿಗೆ ಆರೋಗ್ಯ ಸುಧಾರಣೆ ಆಗಿರಲಿಲ್ಲ. ವೈದ್ಯರ ಕೊರತೆಯನ್ನು ನೀಗಿಸಲು ಸಾಧ್ಯವಾಗಿರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಅವರ ಕೊರತೆಯನ್ನು ನೀಗಿಸಲಾಗಿದೆ. ಆರೋಗ್ಯ ಸಹಾಯಕಿಯರ ಭರ್ತಿ ಮಾಡಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ದೊರೆಯುತ್ತಿವೆ ಎಂದರು.
ಸಮಾರಂಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಶ್ರೀನಿವಾಸ್, ಜೆ.ಸಿ. ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಗಂಗಮ್ಮ, ತಹಶೀಲ್ದಾರ್ ತೇಜಸ್ವಿನಿ, ಪ್ರೊಭೆಷನರಿ ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್, ಜಿಲ್ಲಾ ಶಸ್ತçಚಿಕಿತ್ಸಕ ಡಾ. ವೀರಭದ್ರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನವೀನ್ ಮತ್ತಿತರರು ಉಪಸ್ಥಿತರಿದ್ದರು.