ಗುಬ್ಜಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ವಿಜೃಂಭಣೆಯ ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಮೂಹ
ಗುಬ್ಬಿ: ಇತಿಹಾಸ ಪ್ರಸಿದ್ಧ ಗುಬ್ಜಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ವಿಜೃಂಭಣೆಯ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕೈಂಕರ್ಯ ನಡೆದು ಸ್ವಾಮಿ ಅವರಿಗೆ ಮಾಡಿದ ವಿಶೇಷ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ಮಧ್ಯಾಹ್ನ 1-45 ಕ್ಕೆ ಗುಬ್ಬಿಯಪ್ಪ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ಕೋವಿಡ್ ಕರಿ ನೆರಳಿನ ಮಧ್ಯೆ ಈ ಬಾರಿ ಜಾತ್ರೆಗೆ ಭಕ್ತ ಸಾಗರ ಹರಿದು ಬಂತು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ ರಥೋತ್ಸವಕ್ಕೆ ಬಾಳೆಹಣ್ಣು ದವನ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ನವ ದಂಪತಿಗಳು ಹರಕೆ ಸಲ್ಲಿಸುವ ವಿಶೇಷ ಪದ್ದತಿ ಸಹ ಇಲ್ಲಿ ನಡೆಯುತ್ತದೆ. ಬೆಳಿಗ್ಗೆಯಿಂದ ತಯಾರಿ ನಡೆಸಿದ ವಿವಿಧ ಸಂಘಸಂಸ್ಥೆಗಳು ಬಿಸಲಿನಿಂದ ಬಳಲಿದ ಭಕ್ತರಿಗೆ ಪಾನಕ ಫಲಹಾರ ವಿತರಿಸಿ ತಮ್ಮ ಭಕ್ತ ಸಮರ್ಪಿಸಿದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿದ ಸಮಿತಿ ಎರಡು ದಿನದಿಂದ ಹಗಲಿರುಳು ಶ್ರಮಿಸಿ ಸಾವಿರಾರು ಭಕ್ತರಿಗೆ ಬಫೆ ಮೂಲಕ ಅನ್ನ ಸಂತರ್ಪಣೆ ನಡೆಸಿದರು. ಈ ಕಾರ್ಯಕ್ಕೆ ಹಲವು ಭಕ್ತರು ದೇಣಿಗೆಯನ್ನು ದವಸ ಧಾನ್ಯದ ರೂಪದಲ್ಲೂ ನೀಡಿದ್ದಾರೆ. ಎಲ್ಲಾ ವ್ಯವಸ್ಥಿತವಾಗಿ ಆಯೋಜಿಸಿದ ಸಮಿತಿ ದೇವಲಯದಲ್ಲೂ ವಿಶೇಷ ಅಲಂಕಾರ ಮಾಡಿದೆ. 18 ಕೋಮಿನ ಸಹಕಾರದಲ್ಲಿ ದೇವಾಲಯ ಹಾಗೂ ಹೊರಾಂಗಣ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ಈ ನಡುವೆ ರಥೋತ್ಸವಕ್ಕೆ ಭಕ್ತರು ಎಸೆದ ದವನ ಬಾಳೆಹಣ್ಣಿನ ಮೇಲೆ ‘ರಷ್ಯಾ ಉಕ್ರೇನ್ ಯುದ್ಧ ನಿಲ್ಲಲಿ, ಶಾಂತಿ ನೆಲಸಲಿ’ ಎಂಬ ವಾಕ್ಯ ಬರೆದ ಭಕ್ತರು ತಮ್ಮ ಹರಕೆಯನ್ನು ಈ ರೀತಿ ವ್ಯಕ್ತಪಡಿಸಿದ್ದು ಮತ್ತೊಂದು ವಿಶೇಷವಾಗಿ ಕಾಣಿಸಿಕೊಂಡಿತು.
ರಥೋತ್ಸವ ಕಾರ್ಯಕ್ರಮಕ್ಕೆ ತೊರೇಮಠದ ಶ್ರೀ ರಾಜಶೇಖರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಎಸ್.ಆರ್.ಶ್ರೀನಿವಾಸ್, ಮುಖಂಡರಾದ ಹೊನ್ನಗಿರಿಗೌಡ, ಬಿ.ಎಸ್.ನಾಗರಾಜು, ಉಪ ವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಬಿ.ಆರತಿ ಸೇರಿದಂತೆ ಪಪಂ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.