ಗುಬ್ಬಿ: ತಾಲ್ಲೂಕಿನ ಅಮ್ಮನಘಟ್ಟ ಅರಣ್ಯ ಪ್ರದೇಶದ ಗಡಿ ನಿರ್ಧರಿಸಲು ಮುಂದಾದ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ನೇತೃತ್ವದ ತಂಡ ಏಕಾಏಕಿ ರೈತರ ಕೃಷಿ ಜಮೀನಿಗೆ ಅತಿಕ್ರಮಣ ಮಾಡಿದ್ದಲ್ಲದೇ ರೈತರ ವಿರುದ್ಧ ದೌರ್ಜನ್ಯದ ಮಾತುಗಳಾಡಿದ್ದಾರೆ. ಫಲ ನೀಡಿತ್ತಿದ್ದ 30 ವರ್ಷದ ಅಡಕೆ, ತೆಂಗು ಮತ್ತು ಎಳೆಅಂಬು ಮಣ್ಣು ಪಾಲು ಮಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಂಜೆ ಸಿಟ್ಟಿಗೆದ್ದ ರೈತ ಸಂಘದ ಸದಸ್ಯರು ಹಾಗೂ ಸಂತ್ರಸ್ತ ರೈತರು ತಾಲ್ಲೂಕು ಕಛೇರಿ ಮುಂದೆ ಅನಿರ್ಧಿಷ್ಟಾವಧಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಮರಗಿಡಗಳನ್ನು ಬೆಳೆಸಿ ಪೋಷಿಸುವ ಕಾಯಕ ಮಾಡುವ ಅರಣ್ಯ ಇಲಾಖೆ ಕೃಷಿಕನ ಜಮೀನಿಗೆ ಹಿಟಾಜಿ ಯಂತ್ರ ನುಗ್ಗಿಸಿ ಫಲ ನೀಡುತ್ತಿದ್ದ 200 ಕ್ಕೂ ಅಧಿಕ ಅಡಕೆಮರಗಳು, 10 ತೆಂಗಿನಮರಗಳು ಹಾಗೂ ವಿಳೇದೆಲೆ ಅಂಬುಗಳನ್ನು ಕತ್ತರಿಸಿ ಕಟುಕಟನ ಪ್ರದರ್ಶಿಸಿದ್ದಾರೆ. ನಮ್ಮ ಜಮೀನಿನ ಬೆಳೆ ನಾಶ ಮಾಡದಂತೆ ಅಂಗಲಾಚಿದರೂ ಕಿಂಚಿತ್ತೂ ಕರುಣೆ ತೋರದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರು ರೈತರಿಗೆ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ. ಮುಗ್ದ ರೈತ ಕುಟುಂಬಕ್ಕೆ ದಿಕ್ಕು ತೋಚದೆ ತಲೆ ಮೇಲೆ ಕೈ ಹಿಟ್ಟುಕೊಂಡು ರೋಧಿಸತೊಡಗಿದರು. ಇಡೀ ರಾತ್ರಿ ನಿದ್ದೆಗೆಟ್ಟ ಕುಟುಂಬದ ಅರಣ್ಯ ರೋಧನೆ ಅಳಿಸುವವರಿಲ್ಲದೇ ಕಂಗಾಲಾದರು. ಸಂಜೆ ವೇಳೆ ವಿಷಯ ತಿಳಿದ ರೈತ ಸಂಘದ ಸದಸ್ಯರು ಸ್ಥಳಕ್ಕೆ ಧಾವಿಸಿ ಅಲ್ಲಿನ ಅಮಾನವೀಯ ಕೃತ್ಯ ನೋಡಿ ಆಕ್ರೋಶ ಹೊರಹಾಕಿದರು. ಅಲ್ಲಿ ಮಣ್ಣು ಪಾಲಾದ ಎಲ್ಲಾ ಮರಗಳನ್ನು ಟ್ರಾಕ್ಟರ್ ಮೂಲಕ ತಾಲ್ಲೂಕು ಕಚೇರಿ ಮುಂದೆ ಸುರಿದು ಉಗ್ರ ಪ್ರತಿಭಟನೆ ಆರಂಭಿಸಿದರು. ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಅಧಿಕಾರಿ ದುಗ್ಗಪ್ಪ ಅಮನತುಗೆ ಆಗ್ರಹಿಸಿ ಧರಣಿ ನಡೆಸಿದರು.
ಸರ್ವೆ ನಂಬರ್ 116 ರಲ್ಲಿನ 401 ಎಕರೆ ಅರಣ್ಯ ಪ್ರದೇಶದ ಗಡಿ ನಿರ್ಣಯ ಮಾಡಿದ್ದ ಇಲಾಖೆ ಸರ್ವೆ ಮೂಲಕ ಗಡಿ ಕಲ್ಲುಗಳನ್ನು ನೆಟ್ಟಿದ್ದಾರೆ. ಭಾನುವಾರವೇ ಟ್ರಂಚ್ ಆರಂಭಿಸಿದ ದುಗ್ಗಪ್ಪ ಅವರ ತಂಡ ಗಡಿ ಕಲ್ಲು ಬಿಟ್ಟು ಏಕಾಏಕಿ ಸಂತ್ರಸ್ತ ರೈತರಾದ ಪುಟ್ಟತಾಯಮ್ಮ ದೊಡ್ಡತಿಮ್ಮಯ್ಯ ಅವರ ಜಮೀನಿಗೆ ಅತಿಕ್ರಮಣ ಮಾಡಿ ಅಡಕೆ, ತೆಂಗಿನಮರ ಧರೆಗುರುಳಿಸಿದ್ದು ರಾಕ್ಷಸ ಕೃತ್ಯ ಎಂದು ರೈತಸಂಘದ ತಾಲ್ಲೂಕು ಅಧಕ್ಷ ಕೆ.ಎನ್.ವೆಂಕಟೇಗೌಡ ಕಿಡಿಕಾರಿದರು.
ಕಾನೂನು ಹೋರಾಟಕ್ಕೆ ಸಹ ಸಮಯ ನೀಡದ ಅಧಿಕಾರಿಗಳು ರಜೆ ದಿನ ತೆರವು ಕಾರ್ಯ ಮಾಡಿದ್ದು ಸರಿಯಲ್ಲ. ಸಂತ್ರಸ್ತ ಕುಟುಂಬದ ವಕೀಲ ಶ್ರೀನಿವಾಸ್ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಯಾವುದೇ ಬೆಲೆ ನೀಡದೆ ನಮ್ಮ ಪ್ರದೇಶವೆಂದು ಕೂಗಾಡಿದ್ದಾರೆ. ಈ ಜೊತೆಗೆ ಸರ್ವೆ ಕಲ್ಲು ತಪ್ಪಾಗಿದ್ದರೆ ಮತ್ತೊಮ್ಮೆ ಸರ್ವೆ ನಡೆಸಬೇಕಿತ್ತು. ಕಾನೂನು ಕೈಗೆ ತೆಗೆದುಕೊಂಡು ಗಿಡ ಮರಗಳನ್ನು ಕಡಿದಿದ್ದು ಸರಿಯಲ್ಲ. ಈ ಕೃತ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಧರಣಿಗೆ ಬೆಂಬಲ ಸೂಚಿಸಿದ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಅನುಚಿತವಾಗಿ ವರ್ತಿಸಿದ ಅರಣ್ಯ ಇಲಾಖೆ ಕಾನೂನು ರೀತಿ ಕ್ರಮ ವಹಿಸದೆ ದುರುದ್ದೇಶದಲ್ಲಿ ರೈತರಿಗೆ ತೊಂದರೆ ನೀಡಿದೆ. ಅರಣ್ಯ ಪ್ರದೇಶದ ಬದಿಯಲ್ಲಿ ಅವರ ಜಮೀನಲ್ಲಿ ಕಳೆದ 30 ವರ್ಷದಿಂದ ಕೃಷಿ ನಂಬಿ ಬದುಕು ಸಾಗಿಸುತ್ತಿದೆ. ಈ ರೀತಿ ಅತಿಕ್ರಮಣ ಮಾಡಿದ ಇಲಾಖೆ ಫಲ ನೀಡುವ ಮರಗಳನ್ನು ಧರೆಗುರುಳಿಸಿದ್ದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಯನ್ನು ಅಮಮಾತುಗೊಳಿಸಲು ಆಗ್ರಹಿಸಿದರು.
ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಬಿ.ಆರತಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆ ನಿಲ್ಲಿಸಲು ಒಪ್ಪದ ರೈತರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿ ಅಮಾನತು ಶಿಕ್ಷೆ ಕೊಡುವಂತೆ ಆಗ್ರಹಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಗ್ರಾಪಂ ಸದಸ್ಯ ರಮೇಶ್, ರೈತಸಂಘದ ಸಿ.ಜಿ.ಲೋಕೇಶ್, ಗುರುಚನ್ನಬಸಪ್ಪ, ಮುಖಂಡರಾದ ಮಹಾದೇವಯ್ಯ, ವಿನಯ್, ಸಂತೋಷ್ ಸೇರಿದಂತೆ ಅಮ್ಮನಘಟ್ಟ ಗ್ರಾಮಸ್ಥರು ಇದ್ದರು.