ತುಮಕೂರು : ಜಗತ್ತಿನಲ್ಲಿಂದು ಎಲ್ಲ ಕ್ಷೇತ್ರಗಳೂ ಸ್ವಾರ್ಥಮಯವಾಗಿ ಕಲುಷಿತಗೊಂಡಿದ್ದು,ವಿಶ್ವ ಅಶಾಂತಿಯ ಬೀಡಾಗಿದೆ.ಹಾಗಾಗಿ ಮನುಜ ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಮಾತ್ರ ರಾಷ್ಟದ ಅಭ್ಯುದಯ ಸಾಧ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ಮೈದಾಳದ ಶ್ರೀಶಿವಶೈಕ್ಷಣಿಕ ಸೇವಾಶ್ರಮದ ಬೆಳ್ಳಿಹಬ್ಬ ಸಮಾರಂಭ ಹಾಗೂ ರಜತಮಹೋತ್ಸವ ಶಾಲಾಕೊಠಡಿಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಜಿಲ್ಲೆಯ ಕುಗ್ರಾಮವೊಂದರ ಬಡತನದ ಕೆಳವರ್ಗದಿಂದ ಬಂದ ಶರಣ ಲೇಪಾಕ್ಷಯ್ಯ ನವರು ನಿಸ್ವಾರ್ಥವಾಗಿ ನಾಡಿನಾದ್ಯಂತದ ಅಶಕ್ತ ಬಡಮಕ್ಕಳಿಗೆ ಅನ್ನ, ಆಶ್ರಯ ಹಾಗೂ ಅಕ್ಷರ ದಾಸೋಹವನ್ನು ಕಳೆದ 25 ವರ್ಷಗಳಿಂದಲೂ ನೀಡುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ.ಇಂತಹ ಮಕ್ಕಳ ಶೈಕ್ಷಣಿಕ ಸೇವಾಕಾರ್ಯದಲ್ಲಿ ಅವರ ಕುಟುಂಬವರ್ಗದವರ ಸೇವೆಯೂ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ,ಸೇವೆ ಎಂಬ ಪದಕ್ಕೆ ಉತ್ತಮ ಅರ್ಥ ನೀಡಿದ ಶರಣ ಲೇಪಾಕ್ಷಯ್ಯನವರ ಇಡೀ ಕುಟುಂಬವೇ ಈ ಸೇವಾಶ್ರಮದ ಅಭ್ಯುದಯಕ್ಕೆ ಶ್ರಮವಹಿಸಿದೆ.ಇದು ಅಭಿನಂದನೀಯ ಹಾಗೂ ಅನುಕರಣೀಯ ಸಂಗತಿಯಾಗಿದ್ದು,ಆಶ್ರಮದ ಮಕ್ಕಳ ಶಿಸ್ತಿನ ಚಟುವಟಿಕೆಗಳು ಆದರ್ಶನೀಯ ವಾಗಿವೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ಇಲ್ಲಿರುವ ಮಕ್ಕಳು ಬಡ, ನಿರ್ಗತಿಕ, ಪಾಲಕರಹಿತ ಹಾಗೂ ಆಶ್ರಯರಹಿತರಾಗಿದ್ದು,ಅತ್ಯಂತ ಕಡುಬಡತನದಿಂದ ಬಂದವರಾಗಿದ್ದಾರೆ.ಆದ್ದರಿಂದ ಈ ಆಶ್ರಮ ಶಾಲೆಗೆ ಅನುದಾನ ನೀಡಲು ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವೀರಜ್ಜನಹಳ್ಳಿ ಮಠದ ಶ್ರೀಕರುಣಾಕರ ಶ್ರೀಗಳು,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್,ಶಿಕ್ಷಕ ಜಯಣ್ಣ ಮಾತನಾಡಿದರು.ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್, ನಂದೀಶ್, ಮೈದಾಳ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಾಲಾಮಂಜುನಾಥ್,ಉಪಾಧ್ಯಕ್ಷ ನರಸಿಂಹಮೂರ್ತಿ,ಡಿಡಿಪಿಐ ನಂಜಯ್ಯ,ಡಯಟ್‌ನ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್, ಪಿಡಿಓ ಶಶಿಧರ್, ಸಿದ್ಧರಾಮಣ್ಣ ಆಸ್ಪತ್ರೆಯ ಶ್ರೀಮತಿ ಸಿದ್ಧಗಂಗಮ್ಮ, ವಾಸವಾಂಬ ಹಾಲ್‌ನ ನಾಗರಾಜ ಶೆಟ್ಟರು, ನಾದಸ್ವರ ವಾದಕಿ ಲಕ್ಷ್ಮಮ್ಮ, ಅರ್ಜುನ್, ಶಿವಾಶ್ರಮದ ಕಾರ್ಯದರ್ಶಿ ಲಕ್ಷ್ಮಮ್ಮ,, ಶಿಕ್ಷಣಾಧಿಕಾರಿ ಎಲ್.ಶಿವಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.