ತುಮಕೂರು : ಜಿಲ್ಲಾ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ, ಭ್ರಷ್ಟಾಚಾರ ಮತ್ತು ಕುಂದುಕೊರತೆ ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾ ಅಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರತಿಭಟನಾಕಾರರನ್ನುದ್ಧೇಶಿಸಿ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಸಿ.ಪಿ.ಸುಧೀರ್, ಜಿಲ್ಲಾಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುವುದರಿಂದ ಅವರಿಂದಲೂ ಹಣ ಪೀಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈಲ್ಲಾಸ್ಪತ್ರೆಯ ಹೆರಿಗೆ ವಾರ್ಡ ನಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, 5 ರಿಂದ 15 ಸಾವಿರದವರೆಗೆ ಹಣಕ್ಕಾಗಿ ಬೇಡಿಕೆ ಇಡುವುದು, ದಾದಿಯರು ಬಡ ರೋಗಿಗಳ ಪಾಲಿಗೆ ಯಮಸ್ವರೂಪಿಗಳಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳ ವ್ಯವಸ್ಥೆ ಇದ್ದರೂ ಸಿಬ್ಬಂದಿ ಕೊರತೆಯ ನೆಪವೊಡ್ಡಿ ರೋಗಿಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಸೂಚಿಸಿ ಕಮಿಷನ್ ಪಡೆಯುತ್ತಿದ್ದಾರೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೂ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಪಾದಿಸಿದರು.
ಸರ್ಕಾರಿ ಆಂಬ್ಯುಲೆನ್ಸ್ ಜೊತೆಯಲ್ಲಿ ದಾದಿಯರೆ ಇಲ್ಲದೆ ತುರ್ತ ಚಿಕಿತ್ಸೆಗೆ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 108 ಆಂಬ್ಯುಲೆನ್ಸ್ ಸೇವೆ ಜನತೆಗೆ ಸರಿಯಾದ ಸಮಯಕ್ಕೆ ರಿಜಿಸ್ಪೆಷನ್ ಮಾಡಿಕೊಳ್ಳಲು 10 ರಿಂದ 15 ನಿಮಿಷ ಸಮಯ ತೆಗೆದುಕೊಳ್ಳುತ್ತಾರೆ ಹಾಗಾಗಿ ಕೆಲವು ಸಂದರ್ಭಗಳಲ್ಲಿ ರೋಗಿಗಳು ಸಾವನ್ನಪ್ಪಿರುವುದುಂಟು. ಕರೆ ಬಂದ ತಕ್ಷಣ 108 ವಾಹನ ಸ್ಥಳಕ್ಕೆ ಬರುವಂತಹ ವ್ಯವಸ್ಥೆ ಆಗಬೇಕಿದೆ ಎಂದರು.
ಕರುನಾಡ ವಿಜಯಸೇನೆ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದಡಿಯಲ್ಲಿ ನೂರಾರು ಕೋಟಿ ತುಮಕೂರು ಜಿಲ್ಲೆಗೆ ಅನುದಾನ ಬರುತ್ತದೆ. ಜಿಲ್ಲಾ ಶಸ್ತç ಚಿಕಿತ್ಸಕರು ಯಾವುದಕ್ಕೆ ಎಬಿಆರ್‌ಕೆ ಅನುದಾನವನ್ನು ಸದುಪಯೋಗಪಡಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಡಾ.ವೀರಭದ್ರಯ್ಯ ಭ್ರಷ್ಟ ಅಧಿಕಾರಿಯಾಗಿದ್ದು, ಮೂರು ಭಾರಿ ವರ್ಗಾವಣೆಯಾದರೂ ಸಹ ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ವರ್ಗಾವಣೆಯನ್ನು ರದ್ದುಮಾಡಿಸಿಕೊಂಡು ಬರುತ್ತಿದ್ದಾರೆ ಎಂದು ದೂರಿದರು. ಪ್ರಥಮ ದರ್ಜೆ ಸಹಾಯಕ ಹರೀಶ್ ಕೂಡ ಭಾಗಿಯಾಗಿದ್ದು, ಜಿಲ್ಲಾ ಆಸ್ಪತ್ರೆ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಗೆ ಬರುತ್ತಿರುವ ಅನುದಾನದಲ್ಲಿ 10ರಿಂದ 15 ರೂ.ಗಳಿಗೆ ಸಿಗುವ ಮಾಸ್ಕ್ಗಳನ್ನು ಯಾವುದೋ ಏಜೆನ್ಸಿಗೆ ನೀಡಿ ಒಂದು ಮಾಸ್ಕ್ಗೆ 80 ರಿಂದ 100 ರೂ. ಬಿಲ್ ಮಾಡಿ ಕೋಟ್ಯಾಂತರ ರೂ ಅವ್ಯಹಾರ ಮಾಡಿದ್ದಾರೆ. ಆಕ್ಸಿಜನ್, ಆಹಾರ ಟೆಂಡರ್ ಕರೆಯದೇ ಇ-ಪ್ರಕ್ಯೂರ್‌ಮೆಂಟ್‌ನಲ್ಲಿ ವ್ಯವಸ್ಥೆ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯಕ್, ನಗರಾಧ್ಯಕ್ಷ ಪಿ.ಎಸ್. ಪುರುಷೋತ್ತಮ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜು, ಯುವ ಘಟಕದ ಅಧ್ಯಕ್ಷ ದೀಕ್ಷಿತ್, ಉಪಾಧ್ಯಕ್ಷ ಸುರೇಶ್, ಡಾ.ಸಾಲೋಮನ್ ವಿಕ್ಟರ್, ಸುಧಾಕರ್ ರಾವ್, ಎ.ಜಿ.ಹರೀಶ್, ರುದ್ರೇಶ್, ನಯನ್, ಸತೀಶ್, ಸಂದೀಪ್, ಮಧುಗಿರಿ ರಾಜು, ತಿಮ್ಮರಾಜು, ಮಹಿಳಾ ಮುಖಂಡರಾದ ಯಾಸ್ಮಿನ್ ತಾಜ್, ರಾಧಮ್ಮ ಗಂಗಾಧರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.