ತುಮಕೂರು

ಪಕ್ಷಿ ಸಂಕುಲದ ರಕ್ಷಣೆ ಪ್ರತಿ ನಾಗರೀಕನ ಆದ್ಯ ಕರ್ತವ್ಯ : ಸಾಹಿತಿ ಡಾ.ಕವಿತಾಕೃಷ್ಣ

ಪಕ್ಷಿ ದಾಸೋಹಿ ಎಂ.ಜಿ.ಪರಮೇಶ್ವರಪ್ಪನವರಿಗೆ “ಪಕ್ಷಿ ಸೇವಾರತ್ನ” ಪ್ರಶಸ್ತಿ

ತುಮಕೂರು : ಪ್ರಪಂಚದಲ್ಲಿ ಇಂದು ಪಕ್ಷಿ ಸಂಕುಲ ಕಣ್ಮರೆಯಾಗುತ್ತಿದೆ,ಕೆಲವು ಪಕ್ಷಿ ತಜ್ಞರು ಹೇಳುವ ಪ್ರಕಾರ ಸುಮಾರು 6 ಸಾವಿರ ಪಕ್ಷಿಗಳ ಸಂಕುಲ ನಾಶವಾಗಿದೆ,ಹಿರಿಯರ ಪೂಜೆ ಮಾಡಿ ಪಿಂಡ ಇಟ್ಟರೆ ಕಾಗೆ ಬರುವುದಿಲ್ಲ ಏಕೆಂದರೆ ಅದನ್ನು ಒಂದು ದಿನ ಕರೆದರೆ ಹೇಗೆ ಬರುತ್ತದೆ,ಪ್ರತಿ ದಿನ ಅವುಗಳಿಗೆ ಅನ್ನ ನೀರು ಬೇಡವೇ?ಪ್ರತಿಯೊಬ್ಬರು ಪ್ರತಿ ಮನೆಯ ಮುಂದೆ ಹಣ್ಣು ಬಿಡುವ ಮರಗಳನ್ನು ಬೆಳೆಸಿದರೆ ಪಕ್ಷಿ ಸಂಕುಲ ಉಳಿಯಲಿದೆ, ಪಕ್ಷಿಸಂಕುಲದ ರಕ್ಷಣೆ ಪ್ರತಿ ನಾಗರೀಕನ ಆದ್ಯ ಕರ್ತವ್ಯ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಅವರು ಇಂದು ಪೌಳಿ ಪ್ರಕಾಶನ ಮತ್ತು ಕವಿತಾಕೃಷ್ಣ ಸಾಹಿತ್ಯ ಮಂದಿರ,ಜಯನಗರ ಕ್ಷೇಮಾಭಿವೃದ್ಧಿ ಸಂಘ(ರಿ) ಜಂಟಿಯಾಗಿ ಆಯೋಜಿಸಿದ್ದ ಪಕ್ಷಿ ದಾಸೋಹಿ ಎಂ.ಜಿ.ಪರಮೇಶ್ವರಪ್ಪನವರಿಗೆ “ಪಕ್ಷಿ ಸೇವಾರತ್ನ” ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು.
ಮಾನವೀಯತೆಯ ನೆಲೆಯಲ್ಲಿ 2ಕಿ.ಮೀ.ವರೆಗೆ ಮರಗಳನ್ನು ನೆಟ್ಟು ಬೆಳೆಸಿದ ಸಾಲುಮರದ ತಿಮ್ಮಕ್ಕ ನಮಗೆ ಆದರ್ಶ,ನಾವು ಹಣದ ಹಿಂದೆ ಹೋಗುತ್ತಿದ್ದೇವೆಯೇ ಹೊರತು ಪರಿಸರದ ಹಿಂದೆ ಅಲ್ಲ ,ಪ್ರಸ್ತುತ ಸಮಾಜದಲ್ಲಿ ಎರಡೇ ವರ್ಗ ಇರುವುದು ಉಳ್ಳವರು-ಇಲ್ಲದವರು,ಆದ್ದರಿಂದ ಎಲ್ಲರೂ ಪಕ್ಷಿ ಸಂಕುಲದ ಉಳಿವಿಗಾಗಿ ಪರಿಸರ ಉಳಿಸೋಣ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ.ದಾಸಪ್ಪನವರು ಮಾತನಾಡಿ ಕಾಗೆಯ ಒಗ್ಗಟ್ಟು ಮನಷ್ಯರಲ್ಲಿ ಇಲ್ಲದ್ದು ದುರಂತವೇ ಸರಿ,ನಮ್ಮ ಹಿರಿಯರು ಎಲ್ಲಾ ಕಡೆ ಹಣ್ಣು ಹಂಪಲುಗಳ ಗಿಡಗಳನ್ನು ಹಾಕುತ್ತಿದ್ದರು ಕಾರಣ ಅದು ಪ್ರಾಣಿ ಪಕ್ಷಿಗಳಿಗೆ ಆಹಾರದ ಆಸರೆ ಆಗಲಿ ಎಂದು ಆದರೆ ಇಂದು ನಾವು ಅದನ್ನು ಕಡಿದು ಹಾಕುತ್ತಿರುವುದು ದುರಂತ,ಹಿಂದೆ ಗುಂಡು ತೋಪು ಇದ್ದವು,ರಸ್ತೆಯ ಇಕ್ಕೆಲಗಳಲ್ಲಿ ನೇರಳೆ,ಹಲಸು,ಹುಣಸೆ,ನೆಲ್ಲಿ,ಮಾವು ಹೀಗೆ ನಾನಾ ಬಗೆಯ ಹಣ್ಣಿನ ಗಿಡಗಳಿದ್ದವು ಅವುಗಳನ್ನು ಕಡಿದು ರಸ್ತೆಗಳನ್ನು ಮಾಡಿದ ಪರಿಣಾಮ ಪ್ರಾಣಿಗಳು ನಗರದ ಮನೆಗಳಿಗೆ ನುಗ್ಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
31ನೇ ವಾರ್ಡ್ನ ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್ ರವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಮಾಡಿ ತಿನ್ನಬೇಕು,ಕೆಲಸ ಮಾಡದೆ ಆಹಾರ ಸ್ವೀಕರಿಸಬಾರದು ಅದನ್ನು ನಾವು ಪ್ರಾಣಿ-ಪಕ್ಷಿಗಳನ್ನು ನೋಡಿ ಕಲಿಯಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಪರಮೇಶ್ವರಪ್ಪನವರು ನಾವು ಪ್ರತಿ ದಿನ ಬೆಳಿಗ್ಗೆ 5-6 ಗಂಟೆಯ ಹೊತ್ತಿನಲ್ಲಿ ಸುಮಾರು 300ರೂ ಬೆಲೆಯ ತಿಂಡಿ-ತಿನಿಸುಗಳನ್ನು,ಆಹಾರವನ್ನು ಕಳೆದ ಹತ್ತು ವರ್ಷಗಳಿಂದ ಪಕ್ಷಿಗಳಿಗೆ ಕೊಡುತ್ತಾ ಬಂದಿದ್ದೇನೆ ಇದು ನನಗೆ ನೆಮ್ಮದಿ ತಂದಿದೆ,ಇದಕ್ಕೆ ನಮ್ಮ ಕುಟುಂಬವೂ ಸಹ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ನನಗೆ ಸಂತೋಷ,ಸಾರ್ವಜನಿಕರು ತಮ್ಮ ಮನೆಯಲ್ಲಿ ಮಿಕ್ಕ ಊಟ ತಿಂಡಿಗಳನ್ನು ಬಯಲಿನಲ್ಲಿ ಹಾಕಿದರೆ ಪ್ರಾಣಿ ಪಕ್ಷಿಗಳು ಬಂದು ತಿನ್ನುತ್ತವೆ ಅದನ್ನು ಕಸಕ್ಕೆ ಎಸೆಯಬೇಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಯನಗರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಬಿ.ವಿ.ದ್ವಾರಕಾನಾಥ್,ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು,ಪಾಲಿಕೆ ಸದಸ್ಯ ವಿಷ್ಣುವರ್ಧನ್,ಪೌಳಿ ಶಂಕರಾನಂದಪ್ಪ ಮುಂತಾದವರು ಉಪಸ್ಥಿತರಿದ್ದರು.
ಜಿ.ಬಿ.ನಾಗಭೂಷಣ್ ನಿರೂಪಿಸಿ,ಎಂ.ಸಿ.ಕುಮಾರ್ ಪ್ರಾರ್ಥಿಸಿ,ಕೆ.ಬಿ.ಚಂದ್ರಚೂಡ ಸ್ವಾಗತಿಸಿ,ಶ್ರೀನಿವಾಸಮೂರ್ತಿ ವಂದಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker