ಕಾಡುಗೊಲ್ಲರ ರಾಜಕೀಯ ಅಸ್ತಿತ್ವಕ್ಕೆ ಶಾಸಕ ರಾಜೇಶ್ ಗೌಡ ಅಡ್ಡಿ : ಜಿ.ಎಂ.ಈರಣ್ಣ ಆರೋಪ
ತುಮಕೂರು: ಉಪಚುನಾವಣೆಯಲ್ಲಿ ಕಾಡುಗೊಲ್ಲರ ಮತ ಪಡೆದು ಆಯ್ಕೆಯಾದ ಶಾಸಕ ರಾಜೇಶ್ ಗೌಡ ಇಂದು ಸಮುದಾಯದ ರಾಜಕೀಯ ಅಸ್ತಿತ್ವಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿರಾದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸಿದ ಕಾಡುಗೊಲ್ಲ ಸಮುದಾಯದವರೇ ಆದ ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಈರಣ್ಣ ಅವರನ್ನು ಬದಲಿಸುವ ಕೆಲಸಕ್ಕೆ ಶಾಸಕರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.
ಗೊಲ್ಲರ ಮತಗಳಿಂದ ಗೆದ್ದು ಗೊಲ್ಲರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.ಈ ಹಿಂದೆ ಇದ್ದವರು ಗೊಲ್ಲ ಸಮುದಾಯವನ್ನು ಕಡೆಗಣಿಸಿ, ಅಧಿಕಾರ ವಂಚಿತರಾಗಿಸಿದ್ದು, ಇದು ಹೀಗೆ ಮುಂದುವರೆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ರಾಜೇಶ್‌ಗೌಡ ಶಾಸಕರಾಗಿ ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಗೊಲ್ಲರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿಲ್ಲ. ಕಳೆದ ಶಿರಾ ಉಪ ಚುನಾವಣೆಯ ಸಮಯದಲ್ಲಿ ಘೋಷಿಸಿದ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ಕಾಡುಗೊಲ್ಲ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುತ್ತಿದೆ ಎಂದು ದೂರಿದರು.
ಕಾಡುಗೊಲ್ಲರ ಸಮುದಾಯದ ಮುಖಂಡ ಗೋಪಿ ಯಾದವ್, ಮಾತನಾಡಿ ?ಶಾಸಕ ಸಿ.ಎಂ.ರಾಜೇಶ್‌ಗೌಡ ಕಾಡುಗೊಲ್ಲರ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿಲ್ಲ. ನಗರಸಭೆಯ ಚುನಾವಣೆಯಲ್ಲಿ ಪಕ್ಷಕ್ಕೆ ಕಾಡುಗೊಲ್ಲರು ಮತ ನೀಡಿದ್ದಾರೆ. ಆದರೆ, ನಗರ ಸಭೆಯಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಒಂದೇ ಒಂದು ಸ್ಥಾನ ನೀಡಿಲ್ಲ. ಎಸ್.ಈರಣ್ಣ ಅವರನ್ನು ಬದಲಿಸಿದರೆ ಶಿರಾದಲ್ಲಿ ಪ್ರತಿಭಟನೆ ನಡೆಸಲಾಗುವುದು? ಎಂದು ಎಚ್ಚರಿಸಿದರು.
ಕಾಡುಗೊಲ್ಲರ ಜೊತೆಗೆ ಮಾತುಕತೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಭರವಸೆ ನೀಡಿ ಮೂರು ತಿಂಗಳು ಕಳೆದರೂ ಯಾವುದೇ ಸಭೆ ಕರೆದಿಲ್ಲ. ಸರ್ಕಾರ ತಾತ್ಸಾರ ಭಾವನೆ ತೋರುತ್ತಿದೆ. ರಾಜ್ಯದ 5 ಜಿಲ್ಲೆಗಳ 37 ತಾಲ್ಲೂಕುಗಳಲ್ಲಿ ಕಾಡುಗೊಲ್ಲರಿದ್ದರಾರೆ. ಕಾಡುಗೊಲ್ಲರ ಮನನೋಯಿಸಿದರೆ ಮುಂದಿನ ಬಾರಿ ನೀವು ವಿಧಾನಸಭೆ ಸೇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಡುಗೊಲ್ಲ ಸಮುದಾಯದ ಮುಖಂಡರಾದ ಪ್ರಕಾಶ್,ಸಣ್ಣೇಗೌಡ, ನಾಗೇಂದ್ರಪ್ಪ ಇದ್ದರು.