ತುಮಕೂರು
ಪ್ರತಿದಿನವನ್ನೂ ಹೊಸತನವೆಂದು ಭಾವಿಸಿ : ಶ್ರೀ ಸಿದ್ದಲಿಂಗ ಸ್ವಾಮೀಜಿ
ತುಮಕೂರು: ಪ್ರತಿದಿನವನ್ನೂ ಹೊಸತನವೆಂದು ಭಾವಿಸಬೇಕು. ಒಳ್ಳೆಯ ಕೆಲಸ ಮಾಡುವುದರೊಂದಿಗೆ ಸಾಧನೆ ಮಾಡೋಣ. ಅಶಕ್ತರಿಗೆ ಕೈಲಾದಷ್ಟು ಸಹಾಯ ಮಾಡೋಣ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಸಿದ್ದಗಂಗಾ ಮಠದಲ್ಲಿ ಹೊಸ ವರ್ಷದ ಶುಭ ಹಾರೈಸಿ ಮಾತನಾಡಿದ ಅವರು, ಜೀವನ ಸುಖ-ದುಃಖದ ಸಂಗಮ. ಯಾವಾಗಲೂ ಸುಖ ಅಥವಾ ದುಃಖವೇ ಇರುವುದಿಲ್ಲ. ಸುಖ ಮತ್ತು ದುಃಖ ಚಕ್ರದಂತೆ ತಿರುಗುತ್ತಿರುತ್ತದೆ ಎಂದರು.
ಪ್ರತಿಯೊಬ್ಬರಿಗೂ ಆರೋಗ್ಯ ಅತಿ ಮುಖ್ಯ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವತ್ತ ಪ್ರತಿಯೊಬ್ಬರೂ ಗಮನ ಹರಿಸೋಣ ಎಂದು ಹೇಳಿದರು.
ಕಳೆದ 2 ವರ್ಷಗಳಿಂದ ಕೊರೊನಾ ಮಹಾಮಾರಿಯ ಆರ್ಭಟದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈಗಾಗಲೇ 3ನೇ ಅಲೆ ಓಮಿಕ್ರಾನ್ ಹೆಸರಲ್ಲಿ ಎಲ್ಲೆಡೆ ಸೋಂಕು ಹೆಚ್ಚಾಗುವ ನಿಟ್ಟಿನಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬದುಕು ನಡೆಸೋಣ ಎಂದು ಅವರು ಸಲಹೆ ಮಾಡಿದರು.