ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಕ್ರಮ: ಅಸಡ್ಡೆ ಮಾಡದೇ ಮುನ್ನೆಚ್ಚರಿಕೆ ವಹಿಸಿ: ಸಚಿವ ವಿ.ಸೋಮಣ್ಣ
ತುಮಕೂರು: ರಾಜ್ಯದಲ್ಲಿ ಕೊರೊನಾ ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿ ಆದಂತಹ ಕಹಿ ಘಟನೆಗಳು 3ನೇ ಅಲೆಯಲ್ಲಿ ಆಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಈಗಾಗಲೇ ಕೋವಿಡ್ 3ನೇ ಅಲೆ ದೇಶದ ವಿವಿಧೆಡೆ ಹೆಚ್ಚಾಗುತ್ತಿದೆ. ಮಹಾರಾಷ್ಟç, ಕೇರಳ, ತಮಿಳುನಾಡು, ದೆಹಲಿ ಸೇರಿದಂತೆ ಎಲ್ಲೆಡೆ 3ನೇ ಅಲೆ ಅಬ್ಬರ ಕಂಡು ಬರುತ್ತಿದೆ. ಹಾಗಾಗಿ ನಾವು ಎಷ್ಟು ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತೇವೆಯೋ ಅಷ್ಟೇ ಒಳ್ಳೆಯದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ. ಜನಸಾಮಾನ್ಯರು ಸಹ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಸಡ್ಡೆ ಮಾಡದೆ ಅನುಸರಿಸುವುದು ಒಳಿತು ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂತ ಹಂತವಾಗಿ ಕೋವಿಡ್ ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಸಭೆ ನಡೆಸಿ 3ನೇ ಅಲೆ ನಿಯಂತ್ರಣಕ್ಕೆ ಶ್ರಮಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಪಾನಕ ಕೊಡುವ ಮಾತನ್ನು ಡಿ.ಕೆ. ಶಿವಕುಮಾರ್ ಅವರು ಆಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಜ್ಜಿಗೆ, ಪಾನಕ ಕೊಡುವ ಮಾತನ್ನು ಎಲ್ಲರೂ ಆಡುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದಾರೆ. ಮೇಕೆದಾಟು ಅವರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಇದೆ. ಹಾಗಾಗಿ ಅವರ ಕೆಲಸವನ್ನು ಅವರು ಮಾಡಲಿ, ಅವರಿಗೆ ಒಳ್ಳೆಯದಾಗಲಿ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎದುರಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ಒಂದೊAದಾಗಿಯೇ ನಿವಾರಣೆ ಮಾಡುತ್ತಾ ಬರುತ್ತಿದೆ ಎಂದು ಅವರು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಯಾವಾಗ ಪಂಚೆ. ಪ್ಯಾಂಟ್ ಹಾಕಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಅವರೂ ರೈತರ ಮಗ, ನಾನೂ ರೈತರ ಮಗ. ಅವರು ಯಾವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.
ಎಲ್ಲಕ್ಕಿಂತ ದೊಡ್ಡದು ಜನರ ಜೀವ, ಆರೋಗ್ಯ ಕಾಪಾಡಬೇಕಾಗಿದೆ. ಇಡೀ ದೇಶವೇ ಆರೋಗ್ಯಕ್ಕಾಗಿ ಪರಿತಪಿಸುತ್ತಿದೆ. ಇಂತಹ ಸಮಯದಲ್ಲಿ ಯಾವುದು ಅವಶ್ಯಕತೆ, ಯಾವುದು ಅಗತ್ಯತೆ ಇದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಅವರೇ ತೀರ್ಮಾನ ಮಾಡಲಿ ಎಂದರು.
ನಾನು ಶ್ರೀಮಠಕ್ಕೆ ಆಗಿಂದಾಗ್ಗೆ ಬರುತ್ತಲೇ ಇರುತ್ತೇನೆ. ಇಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಮಾರ್ಗದಲ್ಲಿ ಹೋಗುವಾಗ ಶ್ರೀಕ್ಷೇತ್ರಕ್ಕೆ ಬರುವುದು ರೂಢಿ. ನಮ್ಮ ಆರಾಧ್ಯ ದೈವ, ನಡೆದಾಡುವ ದೇವರ ಬಳಿ ಬಂದು ದರ್ಶನ ಪಡೆದರೆ ನನಗೆ ದೊಡ್ಡ ಶಕ್ತಿ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ರವಿ ಹೆಬ್ಬಾಕ ಎಪಿಎಂಸಿ ಅಧ್ಯಕ್ಷ ಉಮೇಶ್‌ಗೌಡ, ಕೊಪ್ಪಲ್ ನಾಗರಾಜು, ಪಂಚಣ್ಣ, ನೇರಳಾಪುರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.