ತುಮಕೂರು

ಡಿ.31 ರಂದು ತುಮಕೂರು ನಗರ ಸಂಪೂರ್ಣ ಬಂದ್

ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಬೆಂಬಲ

ತುಮಕೂರು: ಡಿಸೆಂಬರ್ 31ರಂದು ಮಹಾರಾಷ್ಟ್ರಏಕೀಕರಣ ಸಮಿತಿಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆದಿರುವ ಕರ್ನಾಟಕ ಬಂದ್‌ಗೆ ತುಮಕೂರು ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದ್ದು, ತುಮಕೂರು ನಗರದಲ್ಲಿ ಬಂದ್ ಆಚರಿಸಲು ತೀರ್ಮಾನಿಸಿದೆ.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸಮೃದ್ದಿ ಹೊಟೇಲ್‌ನಲ್ಲಿ ಒಕ್ಕೂಟದ ಅಧ್ಯಕ್ಷ ಶಂಕರ್ ನೇತೃತ್ವದಲ್ಲಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 30ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಮುಖಂಡರು,ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವ ನಿರ್ಣಯ ಕೈಗೊಂಡರಲ್ಲದೆ,ಡಿಸೆಂಬರ್ 31ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ,ಉಳಿದೆಲ್ಲವುಗಳನ್ನು ಬಂದ್ ಮಾಡಲು ತೀರ್ಮಾನ ಕೈಗೊಂಡರು.
ಸಭೆಯ ನಂತರ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್,ಕನ್ನಡ ಭಾವುಟ ಇಡೀ ನಾಡಿನ ಕನ್ನಡಿಗರ ಗೌರವದ ಸಂಕೇತ.ಅದನ್ನು ಸುಟ್ಟು ವಿಕೃತಿ ಮೆರೆದಿರುವ ಎಂ.ಇ.ಎಸ್.ಪುಂಡರನ್ನು ಸರಕಾರ ಕೂಡಲೇ ಬಂದಿಸಬೇಕು ಹಾಗೂ ಅನಗತ್ಯವಾಗಿ ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವ ಎಂ.ಇ.ಎಸ್.ಸಂಘಟನೆಯನ್ನು ನಿಷೇಧಿಸಬೇಕೆಂಬುದು ಕನ್ನಡಿಗರ ಆಗ್ರಹವಾಗಿದೆ.ಈ ಹಿನ್ನೆಲೆಯಲ್ಲಿ ಇಂದು ಎಲ್ಲಾ ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷರು, ಮುಖಂಡರ ಸಭೆ ಕರೆದು ವಿಸೃತವಾಗಿ ಚರ್ಚೆ ನಡೆಸಿ, ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ಎಲ್ಲಾ ನಾಗರಿಕರು ಸ್ವಯಂ ಪ್ರೇರಿತರಾಗಿ ಬಂದ್‌ನಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಬಂದ್ ಕುರಿತಂತೆ ಹೊಟೇಲ್ ಮಾಲೀಕರುಗಳು ಸಂಘ,ಆಟೋ,ಟ್ಯಾಕ್ಸಿ,ಲಾರಿ ಚಾಲಕರ ಸಂಘಗಳ ಪದಾಧಿಕಾರಿಗಳು, ಕೈಗಾರಿಕೆಗಳ ಮಾಲೀಕರೊಂದಿಗೂ ಮಾತುಕತೆ ನಡೆಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವಂತೆ ಕೇಳಿಕೊಳ್ಳಲಾಗುವುದು.ಇದರ ಜೊತೆಗೆ ಬೀದಿ ಬದಿ ವ್ಯಾಪಾರಿಗಳು,ಸಣ್ಣಪುಟ್ಟ ಕಿರಾಣಿ ಅಂಗಡಿಗಳು, ಕ್ಯಾಂಟೀನ್ ಮಾಲೀಕರೊಂದಿಗೂ ಸಹ ಮಾತುಕತೆ ನಡೆಸಲಾಗುವುದು.ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆ.ಹಾಗಾಗಿ ಎಲ್ಲ ಸ್ವಾಭಿಮಾನಿ ಕನ್ನಡಿಗರು,ಸಾಹಿತಿಗಳು, ಪ್ರಗತಿಪರ ಚಿಂತಕರು ಈ ಬಂದ್‌ಗೆ ಬೆಂಬಲ ನೀಡಬೇಕೆಂದು ಧನಿಯಕುಮಾರ್ ಮನವಿ ಮಾಡಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ್ ಮಾತನಾಡಿ,ಡಿಸೆಂಬರ್ 31ರ ಕರ್ನಾಟಕ ಬಂದ್ ಅಂಗವಾಗಿ ಡಿಸೆಂಬರ್ 30ರಂದು ಸಂಜೆ 4 ಗಂಟೆಯಿಂದ ನಗರದಲ್ಲಿ ಒಂದು ಸುತ್ತಿನ ಬೈಕ್ ರ‍್ಯಾಲಿ ನಡೆಯಲಿದೆ.ಅಲ್ಲದೆ ಡಿಸೆಂಬರ್ 31ರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಆಚರಿಸಲಾಗುವುದು.ಬೆಳಗ್ಗೆ 9 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು. ನಂತರ ಎಂ.ಜಿ.ರಸ್ತೆ, ಗುಂಚಿ ಚೌಕದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಡಿಸೀ ಅವರಿಗೆ ಮನವಿ ಸಲ್ಲಿಸಲಾಗುವುದು. ಮೆಡಿಕಲ್, ಹಾಲು, ತರಕಾರಿ ಮತ್ತು ಅಗತ್ಯ ವಸ್ತುಗಳ ಮಾರಾಟವನ್ನು ಹೊರತು ಪಡಿಸಿ ಉಳಿದೆಲ್ಲಾ ಬಂದ್ ಆಗಲಿದೆ. ಇದಕ್ಕೆ ಜಿಲ್ಲೆಯ ಎಲ್ಲಾ ಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ದಲಿತ ಸಂಘಟನೆಗಳ ಪರವಾಗಿ ಪಿ.ಎನ್.ರಾಮಯ್ಯ,ಜಯಕರ್ನಾಟಕದ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಯಕರ್ನಾಟಕ ಜನರಪರ ವೇದಿಕೆಯ ಉಮೇಶ್, ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಸುಧೀರ್,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪರುಶುರಾಮ್,ಮೈಯೂರು ಯುವ ವೇದಿಕೆಯ ಪ್ರಸನ್ನ, (ಪಚ್ಚಿ),ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ನಟರಾಜು,ಕನ್ನಡ ರಕ್ಷಣಾ ವೇದಿಕೆಯ ಟಿ.ಇ.ರಘುರಾಮ್,ಎಲ್.ಹೆಚ್.ಗೌಡ, ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ರಾಜಶೇಖರ್,ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಚೇತನ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಅರುಣ್ ಕುಮಾರ್,ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಜಿಲ್ಲಾಧ್ಯಕ್ಷ ಆನಂದ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ರಾಜ್ಯಾಧ್ಯಕ್ಷ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker