ಬೆಮೆಲ್ ಕಾಂತರಾಜ್ ಶೀಘ್ರದಲ್ಲೇ ಕಾಂಗ್ರೇಸ್ ಸೇರ್ಪಡೆ : ಆರ್. ರಾಜೇಂದ್ರ
ತುರುವೇಕೆರೆ : ಬೆಮೆಲ್ ಕಾಂತರಾಜ್ ಶೀಘ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ ಎಂದು ನೂತನ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಟಿ.ಎ.ಪಿ.ಸಿ.ಎಂ.ಎಸ್.ನ ಆಡಳಿತ ಕಚೇರಿ ಉದ್ಘಾಟನೆ ಹಾಗೂ ಉಗ್ರಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ಸೇರುವ ದಿನಾಂಕವನ್ನು ಬೆಮೆಲ್ ಕಾಂತರಾಜ್ ರವರೇ ನಿರ್ಧರಿಸಲಿದ್ದಾರೆ. ಬೆಮೆಲ್ ಸೇರ್ಪಡೆಯಿಂದ ಪಕ್ಷವು ಸಂಘಟನಾತ್ಮಕವಾಗಿ ಮತ್ತಷ್ಟು ಸದೃಡವಾಗಲಿದೆ. ನಾನು ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗಲು ಸಹಕಾರವಿತ್ತ ಎಲ್ಲರನ್ನೂ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಮುಂಬರುವ ದಿನಗಳಲ್ಲಿ ನನ್ನ ಕೈಲಾದ ಸೇವೆಯನ್ನು ಮಾಡುವ ಮೂಲಕ ಋಣ ತೀರಿಸುತ್ತೇನೆ ಎಂದರು
ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಮಾತನಾಡಿ ಸಹಕಾರ ಸಂಘಗಳು ರೈತರ ಶ್ರೇಯೋಭಿವೃದ್ದಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿ, ನೂತನ ವಿಧಾನಪರಿಷತ್ ಸದಸ್ಯರಾದ ರಾಜೇಂದ್ರರವರು ನಮ್ಮ ತಾಲೂಕಿನ ಅಭಿವೃದ್ದಿಗೆ ಪೂರಕವಾಗಿ ಸಹಕರಿಸಲಿ, ತಾಲೂಕಿನ ಸಹಕಾರಿ ಸಂಘಗಳನ್ನು ಮತ್ತಷ್ಟು ಸದೃಡಗಳಿಸುವತ್ತ ಸಲಹೆ ಸಹಕಾರ ನೀಡಲಿ ಎಂದರು.
ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಜಿ.ಎಂ. ಲಕ್ಷ್ಮೀಕಾಂತ್ ಮಾತನಾಡಿ ಹಿಂದಿನ ಆಡಳಿತ ಕಚೇರಿ ಜಾಗ ಕಿರಿದಾಗಿತ್ತು. ಈ ಹಿನ್ನಲೆಯಲ್ಲಿ ನೂತನ ಆಡಳಿತ ಕಚೇರಿಯನ್ನು ನಿರ್ಮಾಣ ಮಾಡಲಾಯಿತು. ನಬಾರ್ಡ್ ಸಹಕಾರದಿಂದ ಉಗ್ರಾಣ ಸಹ ನಿರ್ಮಾನ ಮಾಡಲಾಗುವುದು,ಮುಂಬರುವ ದಿನಗಳಲ್ಲಿ ನ್ಯಾಯಬೆಲೆ ಅಂಗಡಿ, ಅಡಿಕೆ ಮಂಡಿ ಎಲ್ಲವನ್ನೂ ನೂತನ ಆಡಳಿತ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗುವುದು. ಒಟ್ಟಾರೇ ಸಂಸ್ಥೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಶ್ರಮಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನೂತನ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ,ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಹಾಗೂ ಸಂಸ್ಥೆಯ ಶ್ರೇಯೋಭಿವೃದ್ದಿಗೆ ಸಹಕರಿಸಿದ ಹಲವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉಪಾದ್ಯಕ್ಷ ಚಂದ್ರಯ್ಯ, ಡಿ.ಸಿ.ಸಿ, ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಮಾಜಿ ನಿರ್ದೇಶಕರುಗಳಾದ ದಾನಿಗೌಡ, ದೇವರಾಜ್,ಪ.ಪಂ. ಮಾಜಿ ಅಧ್ಯಕ್ಷರಾದ ಶಶಿಶೇಖರ್.ಪ.ಪಂ. ಸದಸ್ಯರಾದ ನದೀಮ್, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಮುಖಂಡರಾದ ಉದಯ್‌ಕುಮಾರ್, ಕಾರ್ಯದರ್ಶಿ ಸುಂದರಮೂರ್ತಿ ಮತ್ತಿತರಿದ್ದರು.