ಹುಳಿಯಾರಿನಲ್ಲಿ ವೈಭವದಿಂದ ಜರುಗಿದ ಶ್ರೀ ಆಂಜನೇಯಸ್ವಾಮಿ ರಥೋತ್ಸವ

ಹುಳಿಯಾರು : ಹುಳಿಯಾರು ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವ ಅಪಾರ ಸಂಖ್ಯೆಯ ಭಕ್ತಸ್ತೋಮದೊಂದಿಗೆ ವಿಜೃಂಭಣೆಯಿಂದಲೂ, ಶ್ರದ್ಧಾಭಕ್ತಿಯಿಂದಲೂ ಗುರುವಾರ ಜರುಗಿತು.
ಹನುಮಜಯಂತಿ ಅಂಗವಾಗಿ ಭಕ್ತಾಧಿಗಳ ಸೇವಾರ್ಥದಲ್ಲಿ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಚಿಕ್ಕನಹಳ್ಳಿ ವೀರೇಶ್ ಕಲಾತಂಡದಿಂದ ವೀರಗಾಸೆ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.
ರಥವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಊರಿನ ಗ್ರಾಮದೇವತೆಗಳಾದ ಶ್ರೀದುರ್ಗಾಪರಮೇಶ್ವರಿ ಹಾಗೂ ಶ್ರೀಹುಳಿಯಾರಮ್ಮ ಅವರ ಸಮ್ಮುಖದಲ್ಲಿ ಕಳಸಕ್ಕೆ ಅಭಿಷೇಕ ನೆರವೇರಿಸಿ ವಿಶೇಷ ಅಲಂಕಾದಲ್ಲಿ ಕಂಗೊಳಿಸುತ್ತಿದ್ದ ಶ್ರೀ ಆಂಜನೇಯಸ್ವಾಮಿಯವರನ್ನು ಕುಳ್ಳಿರಿಸಿ ಮಂಗಳವಾದ್ಯದೊಂದಿಗೆ ವೈಭವದಿಂದ ರಥೋತ್ಸವ ನೆರವೇರಿಸಲಾಯಿತು.
ಭಕ್ತಾಧಿಗಳು ಉತ್ಸವದುದ್ದಕ್ಕೂ ಬಾಳೆಹಣ್ಣು ಎಸೆಯುತ್ತಿದ್ದರೆ ಯುವಕರು ಮಡಿವಸ್ತದೊಂದಿಗೆ ಅತೀ ಉತ್ಸಾಹದಿಂದ ತೇರು ಎಳೆಯಲು ಮುಗಿಬಿದ್ದರು. ರಥೋತ್ಸವದ ನಂತರ ಕೆಲವರು ಹಣ್ಣುಕಾಯಿ ಸೇವೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸಹ ನೆರವೇರಿಸಲಾಯಿತು.