ತುಮಕೂರಿನ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಣೆ
ತುಮಕೂರು- ಕಲ್ಪತರುನಾಡಿನ ವಿವಿಧೆಡೆ ಆಂಜನೇಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸುವ ಮೂಲಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಬಿ.ಹೆಚ್. ರಸ್ತೆಯ ಆರ್‌ಟಿಓ ಕಚೇರಿ ಮುಂಭಾಗದ ಆಂಜನೇಯ ಸ್ವಾಮಿ ದೇಗುಲ, ಬಟವಾಡಿ ಸಮೀಪದ ಆಂಜನೇಯಸ್ವಾಮಿ ದೇವಾಲಯ, ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದದವು.
ಹನುಮ ಜಯಂತಿ ಪ್ರಯುಕ್ತ ಕೋಟೆ ಶ್ರೀಆಂಜನೇಯ ಸ್ವಾಮಿ ವೃತ್ತ ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿದ್ದು, ಕೋಟೆ ಶ್ರೀ ಆಂಜನೇಯಸ್ವಾಮಿ ಯುವಕರ ಬಳಗ ಹನುಮ ಜಯಂತಿ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಸರು ಬೇಳೆ, ಪಾನಕ, ಮಜ್ಜಿಗೆಯನ್ನು ಪ್ರಸಾದವಾಗಿ ವಿನಿಯೋಗಿಸಿತು.
10ನೇ ವರ್ಷದ ವೈಭವದ ಹನುಮ ಜಯಂತಿ ಪ್ರಯುಕ್ತ ಇದೇ ಮೊದಲ ಬಾರಿಗೆ ಶ್ರೀ ಕೋಟೆ ಆಂಜನೇಯಸ್ವಾಮಿಯ ರಥೋತ್ಸವ ಅತ್ಯಂತ ವೈಭವಯುತವಾಗಿ ನಡೆಯಿತು. ಶುಕ್ರವಾರ ಬೆಳಿಗ್ಗೆ 11:30ಕ್ಕೆ ಕೋಟೆ ಶ್ರೀ ಆಂಜನೇಯ ಸ್ವಾಮಿಯ ವೈಭವದ ಮೆರವಣಿಗೆಯು ನಗರ ರಾಜಬೀದಿಗಳಲ್ಲಿ ನಡೆಯಲಿದೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ವಿಶೇಷತೆ ಎಂದರೆ ಗರ್ಭಗುಡಿಯ ಒಳಗೆ ಹನುಮನ ಎರಡು ಮೂರ್ತಿಗಳಿವೆ. ಈ ಪೈಕಿ ಒಂದು ಮೂರ್ತಿ ಪುರಾತನ ಕಾಲದ್ದಾಗಿದ್ದು, ಇನ್ನೊಂದು ಆ ಬಳಿಕ ಸ್ಥಾಪನೆ ಮಾಡಿದ ಮೂರ್ತಿಯಾಗಿದೆ.
ಬೆಳಿಗ್ಗೆಯಿಂದಲೇ ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹನುಮನ ದೇವಾಲಯಗಳಲ್ಲಿ ಶ್ರೀರಾಮ ನಾಮ ಜಪ ಹಾಗೂ ಹನುಮ ನಾಮ ಸ್ಮರಣೆಗಳು ಭಕ್ತರಿಂದ ಮೊಳಗಿದವು.
ನಗರದ ವಿವಿಧೆಡೆ ಹನುಮನ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಪೂಜಾ ವಿಧಿ ವಿಧಾನಗಳು ನೆರವೇರಿದ್ದು, ಭಕ್ತಾದಿಗಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.