ತುಮಕೂರು

ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ನೌಕರರ ಪ್ರತಿಭಟನೆ

ತುಮಕೂರು : ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಮಾಡಲು ಹೊರಟಿರುವುದನ್ನು ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ-ಕರ್ನಾಟಕ ಹಾಗೂ ಯುನೈಟೆಡ್ ಫೋರಮ್ ಆಫ್ ಯೂನಿಯನ್ (ಯುಎಫ್‌ಬಿಯು) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಚರ್ಚ್ ಸರ್ಕಲ್‌ನಲ್ಲಿರುವ ಎಸ್‌ಬಿಐ ಕೇಂದ್ರ ಕಚೇರಿಯ ಮುಂಭಾಗ ಜಮಾಯಿಸಿದ ನೂರಾರು ಮಂದಿ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ಈ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿಚಾರವನ್ನು ಕೈ ಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುಎಸ್‌ಬಿಯು ಬ್ಯಾಂಕ್‌ನ ಜಿಲ್ಲಾ ಕನ್ವೀನಿಯರ್ ವಾದಿರಾಜ್, ಇಂದು ಮತ್ತು ನಾಳೆ ಕೇಂದ್ರ ಸರ್ಕಾರದ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಮಾಡುವ ಹುನ್ನಾರ ಖಂಡಿಸಿ ದೇಶದಾದ್ಯಂತ ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಈ ಹೋರಾಟ ನಡೆಸಲಾಗುತ್ತಿದೆ ಎಂದರು.
1969 ರಲ್ಲಿ ಅಂದಿನ ಸರ್ಕಾರ 14 ಬ್ಯಾಂಕ್‌ಗಳನ್ನು ಹಾಗೂ 1980 ರಲ್ಲಿ 6 ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದವು. 1947-1969 ರ ಅವಧಿಯಲ್ಲಿ 550 ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿದ್ದವು. 1969 ರ ನಂತರವೂ ಕೂಡಾ 38 ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿದ್ದವು ಎಂದರು.
ಗ್ರಾಹಕರಿಗೆ ಸಮರ್ಪಕವಾಗಿ ಸೌಲಭ್ಯ ಒದಗಿಸುವ ಸದುದ್ದೇಶದಿಂದ ಅಂದಿನ ಕೇಂದ್ರ ಸರ್ಕಾರ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿತ್ತು. ಆದರೆ ಈಗ ಕೆಲವೇ ಬಂಡವಾಳ ಶಾಹಿಗಳಿಗೆ ಹಿತಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ನಮ್ಮ ವಿರೋಧವಿದೆ. ಇದಕ್ಕೆ ನಾವುಗಳು ಅವಕಾಶ ನೀಡುವುದಿಲ್ಲ. ಬಂಡವಾಳ ಶಾಹಿಗಳಿಗೆ ಬ್ಯಾಂಕ್‌ಗಳನ್ನು ನೀಡಿದರೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಹೇಳಿದರು.
2008 ರ ಜಾಗತಿಕ ಬ್ಯಾಂಕಿಂಗ್ ಕುಸಿತದ ಸಂದರ್ಭದಲ್ಲೂ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿತ್ತು. ಇದಕ್ಕೆ ರಾಷ್ಟ್ರೀಕರಣವೇ ಪ್ರಮುಖ ಕಾರಣ ಎಂದರು.
ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದರೆ ಬಂಡವಾಳ ಶಾಹಿಗಳಾದ ನೀರವ್ ಮೋದಿ, ವಿಜಯಮಲ್ಯ ಅಂಥವರು ಕೋಟಿ ಕೋಟಿ ಸಾಲ ಪಡೆದು ಸಾಲ ಮರುಪಾವತಿಸದೆ ವಿದೇಶಗಳಿಗೆ ತೆರಳಿ ವಂಚಿಸುವ ಕೆಲಸ ಮಾಡುತ್ತಾರೆ. ಇದರಿಂದ ಪ್ರಾಮಾಣಿಕ ಗ್ರಾಹಕರ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದರೆ ಗ್ರಾಮಾಂತರ ಭಾಗದ ಗ್ರಾಹಕರು ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಸಾಮಾನ್ಯ ಜನರು ಬ್ಯಾಂಕ್ ಸೇವೆಯಿಂದ ದೂರು ಉಳಿಯುವಂತಾಗುತ್ತದೆ ಎಂದ ಅವರು, ಬ್ಯಾಂಕ್‌ಗಳ ಖಾಸಗೀಕರಣದಿಂದ ಕೇವಲ ಬಂಡವಾಳ ಶಾಹಿಗಾರರಿಗೆ ಲಾಭಾಂಶವಾಗಲಿದೆ ಎಂದು ದೂರಿದರು.
ಬ್ಯಾಂಕ್‌ಗಳ ಖಾಸಗೀಕರಣದಿಂದ ಯುವ ಜನತೆ ಉದ್ಯೋದಿಂದ ವಂಚಿತರಾಗುತ್ತಾರೆ. ಸಾರ್ವಜನಿಕರ ಹಣಕ್ಕೆ ಭದ್ರತೆ ಇಲ್ಲದಂತಾಗುತ್ತದೆ. ಅಲ್ಲದೆ ಬ್ಯಾಂಕ್ ವ್ಯವಸ್ಥೆಯಲ್ಲಿ ಸರ್ವಾಧಿಕಾರ ಪರಮಾವಧಿ ಬೆಳೆಯುತ್ತದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದರು.
ಖಾಸಗೀಕರಣ ಮಾಡುವ ಯೋಚನೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು. ಅಲ್ಲಿಯವರೆಗೂ ಹೋರಾಟ ನಡೆಸಲಾಗುವುದು ಎಂದ ಅವರು, ಪ್ರಧಾನಮಂತ್ರಿ ಜನಧನ್ ಯೋಜನೆಯನ್ನು ಶೇ. 93 ರಷ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳು ಜಾರಿಗೊಳಿಸಿವೆ. ಆದರೆ ಶೇ. 7 ರಷ್ಟು ಖಾಸಗಿ ಬ್ಯಾಂಕ್‌ಗಳು ಮಾತ್ರ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಫ್ರೆಂಟ್ ಲೈನ್ ವಾರಿಯರ್ಸ್ಗಳಾಗಿ ಕೆಲಸ ಮಾಡಿದ್ದಾರೆ. ಇದ್ಯಾವುದನ್ನು ಪರಿಗಣಿಸದೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರಾದ ಸರ್ವಮಂಗಳ, ಶಂಕರಪ್ಪ, ರಾಮಕೃಷ್ಣ, ಮಹೇಶ್ವರ ರೆಡ್ಡಿ, ವೆಂಕಟೇಶಮೂರ್ತಿ, ನಾರಾಯಣ, ಮಹಲಿಂಗಯ್ಯ, ಜಾನಕೀರಾಂ ಬಾಬು, ರಮೇಶ್, ಅಜಯ್, ಮಂಜುಳ, ಲಕ್ಷ್ಮಯ್ಯ, ಗಜೇಂದ್ರ, ರಾವತ್ ಮತ್ತಿತರರು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker