
ಶಿರಾ : ಶಿರಾನಗರಸಭೆಗೆ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಒಟ್ಟು291 ನಾಮಪತ್ರಗಳು ಸಲ್ಲಿಕೆಯಾಗಿವೆ. ಬುಧವಾರದಿಂದ ಆರಂಭಗೊAಡ ನಾಮಪತ್ರ ಸಲ್ಲಿಕೆಯಲ್ಲಿ ಮೊದಲನೇ ದಿನ ಬುಧವಾರ ಶೂನ್ಯ, ಬುದುವಾರ 1, ಶುಕ್ರವಾರ 34, ಸೋಮವಾರ 109, ಮಂಗಳವಾರ 69 ಹಾಗೂ ಕಡೆ ದಿನವಾದ ಬುಧವಾರ 78 ನಾಮ ಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್ ಪಕ್ಷಕ್ಕೆ 62, ಜೆಡಿಎಸ್ 34, ಬಿಜೆಪಿ 40, ಅಮ್ ಆದ್ಮಿ ಪಕ್ಷದಿಂದ 9, ಸ್ವತಂತ್ರ ಅಭ್ಯರ್ಥಿಯಾಗಿ 123, ಹಾಗೂ ಇತರೆ ಪಕ್ಷಗಳಿಗೆ 23 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಳೆದ ಮೂರೂವರೆ ವರ್ಷಗಳಿಂದ ಸ್ಥಳೀಯ ಆಡಳಿತ ಸಂಸ್ಥೆ ಇಲ್ಲವಾಗಿ, ವಿವಿಧ ವಾರ್ಡ್ಗಳ ಮೀಸಲಾತಿ ವಿಚಾರಕ್ಕೆ ಕೋರ್ಟ್ ಮೆಟ್ಟಿಲು ಹತ್ತಿದ್ದ ಸಂಸ್ಥೆಯ ಚುನಾವಣೆ ಕನಸೇನೋ ಎನ್ನುವ ಸಂದರ್ಭದಲ್ಲಿಯೇ ದಿಢೀರ್ ಎಂದು ಘೋಷಣೆಯಾದ ಚುನಾವಣೆಯಿಂದ ಆಕಾಂಕ್ಷಿಗಳಲ್ಲಿ ತಳಮಳ ಉಂಟಾಗಿದ್ದು, ನಾಮಪತ್ರ ಸಲ್ಲಿಕೆಗೂ ಆಕಾಂಕ್ಷಿಗಳು ತಡಬಡಾಯಿಸುವಂತೆ ಮಾಡಿದೆ.
ಮೊದಲ ದಿನ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಎರಡನೇ ದಿನ ಒಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು,ಸೋಮವಾರದಿಂದ ನಾಮಪತ್ರಿಕೆ ಚುರುಕುಗೊಂಡಿದೆ. ಇಲ್ಲಿನ ನಗರಸಭೆ ಆವರಣದಲ್ಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಪ್ರತಿ ಐದು ವಾರ್ಡ್ಗಳಿಗೆ ಒಬ್ಬ ರಿಟರ್ನಿಂಗ್ ಹಾಗೂ ಒಬ್ಬ ಸಹಾಯಕ ರಿಟರ್ನಿಂಗ್ ಆಫೀಸರ್ ನೇಮಕ ಮಾಡುವ ಮೂಲಕ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತಿದೆ.
ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಲ್ಲಿ ಹಲವರು ತಮ್ಮ ನೂರಾರು ಬೆಂಬಲಿಗರು, ಸೂಚಕರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರೆ, ಮತ್ತೆ ಕೆಲವರು ಸೂಚಕರೊಂದಿಗೆ ಮಾತ್ರ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಕೆಲವು ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಖುಷಿಯಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.