ತುಮಕೂರು

ಜಗತ್ತು ಕಂಡ ಶ್ರೇಷ್ಠ ವಿದ್ವಾಂಸರು ಡಾ: ಬಿ.ಆರ್. ಅಂಬೇಡ್ಕರ್: ಪ್ರೊ. ಶಶಿಕುಮಾರ್

ತುಮಕೂರು: ಭಾರತ ಸಂವಿಧಾನದ ಕರ್ತೃ ಡಾ.ಬಿ.ಆರ್. ಅಂಬೇಡ್ಕರ್ ಅವರು ಜಗತ್ತು ಕಂಡ ಅತ್ಯಂತ ಶ್ರೇಷ್ಟ ವಿದ್ವಾಂಸರು ಹಾಗೂ ಜ್ಞಾನಿಗಳು ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಧ್ಯಾಪ್ಯಕ ಪ್ರೊ.ಶಶಿಕುಮಾರ್ ಅಭಿಪ್ರಾಯಪಟ್ಟರು.
75ನೇ ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಭೈರವೇಶ್ವರ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸದಾಶಿವನಗರದ ಶ್ರೀ ಭೈರವೇಶ್ವರ ಕಾಲೇಜಿನ ಆವರಣದಲ್ಲಿಂದು ಏರ್ಪಡಿಸಲಾಗಿದ್ದ ‘ಭಾರತ ರತ್ನ ಡಾ: ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅಧ್ಯಯನಶೀಲರು ಹಾಗೂ ವಿಚಾರಶೀಲರೂ ಆಗಿದ್ದರು. ದಿನವೊಂದರಲ್ಲಿ ಸುಮಾರು 18 ಗಂಟೆಗಳ ಕಾಲ ಅಧ್ಯಯನದಲ್ಲಿ ಮಗ್ನರಾಗಿರುತ್ತಿದ್ದರು ಎಂದು ತಿಳಿಸಿದರು.
ಪ್ರಪಂಚವೇ ಮೆಚ್ಚುವಂತಹ ಸಂವಿಧಾನ ರಚನೆಕಾರರಾಗಿದ್ದ ಅಂಬೇಡ್ಕರ್ ತಾವು ಸ್ವಯಂ ಅನುಭವಿಸಿದ ಅಸ್ಪೃಶ್ಯತೆಯ ಆಳ-ಅಗಲಗಳನ್ನು ಅರಿತಿದ್ದ ಕಾರಣ ಸಮಾಜದ ಎಲ್ಲಾ ವರ್ಗಗಳಲ್ಲಿ ತುಳಿತಕ್ಕೊಳಗಾದವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಮಾನತೆ ತರಲು ಅಪಾರವಾಗಿ ಶ್ರಮಿಸಿದರಲ್ಲದೆ ಸಂವಿಧಾನ ರಚನೆಯಲ್ಲಿ ಈ ಎಲ್ಲಾ ಪೂರಕ ಅಂಶಗಳನ್ನು ಸೇರಿಸಿ ಅವುಗಳನ್ನು ಜಾರಿಗೊಳಿಸುವ ಮುಖೇನ ಎಲ್ಲರನ್ನು ಸಮಸ್ತರಕ್ಕೆ ತರಲು ಶ್ರಮಿಸಿದರು ಎಂದು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಭೈರವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಶಶಿಧರ್ ಮಾತನಾಡಿ, ಭಗವಾನ್ ಬುದ್ಧ ಮತ್ತು ಬಸವಣ್ಣನವರು ಹುಟ್ಟು ಹಾಕಿದ ಕ್ರಾಂತಿಗೆ ಹೊಸ ಸ್ವರೂಪ ಕೊಟ್ಟ ಅಂಬೇಡ್ಕರರು ಭಾರತ ಮತ್ತು ಭಾರತೀಯರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ವರೂ ಸಮಬಾಳ್ವೆ ನಡೆಸಲು ಎಲ್ಲಾ ರೀತಿಯಲ್ಲೂ ಅವಕಾಶ ಕಲ್ಪಿಸುವ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ದೇಶದ ಕಟ್ಟಕಡೆಯ ವ್ಯಕ್ತಿಗೂ ಮತಾಧಿಕಾರ ನೀಡಿ ಆತನ ವೈಯುಕ್ತಿಕ ನಿರ್ಧಾರವನ್ನು ಗೌರವಿಸುವಂತೆ ಮಾಡಿದ್ದು ಅಂಬೇಡ್ಕರ್ ಅವರ ಬಹುದೊಡ್ಡ ಚಿಂತನೆಯಾಗಿದೆ. ತಳ ಸಮುದಾಯದ ಜನರು ಶಾಸನಸಭೆಗಳಲ್ಲಿ ಭಾಗವಹಿಸಿ, ಅಧಿಕಾರ ನಡೆಸಲು ಅಂಬೇಡ್ಕರ್ ಅವಕಾಶ ಕಲ್ಪಿಸಿಕೊಟ್ಟಿದ್ದು, ಪ್ರತಿಯೊಬ್ಬರೂ ಇವರ ಆದರ್ಶ ಹಾಗೂ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ, ಸುರೇಶ್ ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿ, ಇಲಾಖೆಯು ಡಾ: ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದ ಮುಖೇನ ನಿರಂತರ ಅಧ್ಯಯನಶೀಲರಾಗಿ ಬೆಳೆದು, ಸ್ಪರ್ಧಾತ್ಮಕ ಜಗತ್ತಿನೆಡೆ ನಡೆಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತಿದೆ. ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ಕುರಿತಂತೆ ಕವನ ರಚನೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ರಚನೆ, ರಸಪ್ರಶ್ನೆ ಮೊದಲಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಜ್ಜುಗೊಳ್ಳಬೇಕೆಂದು ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರೀ ಭೈರವೇಶ್ವರ ಕಾಲೇಜಿನ ವಿದ್ಯಾರ್ಥಿಗಳಾದ ಚಿ:ತಿಪ್ಪಣ್ಣ ನಾಯಕ್, ಕು: ಮಂಜುಳಾ, ಕು: ಷಾಜಿಯಾ, ಕು:ಫಿರ್ ದೋಷ್, ಕು:ಲಕ್ಷ್ಮಿ, ಕು:ಅನಿಷಾಭಾನು, ಕು:ಸ್ವಾತಿ, ಕು: ಲೋಕಮ್ಮ ಹಾಗೂ ಕು: ರಮ್ಯ ಇವರುಗಳಿಗೆ ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಭೈರವೇಶ್ವರ ಕಾಲೇಜಿನ ತಿಪ್ಪೇಸ್ವಾಮಿ, ಕನ್ನಡ ಉಪನ್ಯಾಸಕ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ದರ್ಶನ್ ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker