ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳ್ಳುತ್ತಿದೆ : ಆರ್.ರಾಮಕೃಷ್ಣ
ತುಮಕೂರು: ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ಅವರ ಗೆಲುವು, ಜಿಲ್ಲೆಯಲ್ಲಿ ಪಕ್ಷ ಬಲಗೊಳ್ಳುತ್ತಿರುವುದರ ಮುನ್ಸೂಚನೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಮಿಕ ಘಟಕದವತಿಯಿಂದ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಂಡ ಉಮಾಶಂಕರ್,ಬೆಳ್ಳಾವಿ ಬ್ಲಾಕ್ ಕಾಂಗ್ರೆಸ್‌ನ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ನವೀನ್.ಎ.ಹೆಚ್.ಅವರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡುತಿದ್ದ ಅವರು,ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಮುಖಂಡರುಗಳು ಒಗ್ಗೂಡಿ ಚುನಾವಣೆಯಲ್ಲಿ ಕೆಲಸ ಮಾಡಿದ ಪರಿಣಾಮ ಈ ಗೆಲುವು ಸಾಧ್ಯವಾಗಿದೆ.ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8-9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.ಈ ಗೆಲುವಿಗೆ ಕಾರಣರಾದ ಜಿಲ್ಲೆಯ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಅಲ್ಲದೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರ್.ರಾಜೇಂದ್ರ ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.
ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಿ.ಎಸ್.ಸೈಯದ್ ದಾದಾಪೀರ್ ಮಾತನಾಡಿ,ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕ ಘಟಕ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.ಇದರ ಫಲವಾಗಿ ಘಟಕಕ್ಕೆ ನೇಮಕಗೊಳ್ಳುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.ಈಗಾಗಲೇ ಜಿಲ್ಲಾಧ್ಯಕ್ಷರಾದ ಆರ್.ರಾಮಕೃಷ್ಣ ಅವರ ನಿರ್ದೇಶನದಂತೆ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರ ನೊಂದಣಿ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸುಣ್ಣದ ಕಲ್ಲು ಪ್ಯಾಕ್ಟರಿ, ನಾರಿನ ಫ್ಯಾಕ್ಟರಿಯ ಕಾರ್ಮಿಕರನ್ನು ನೊಂದಣಿ ಮಾಡಿಸಲು ಜಿಲ್ಲಾ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮಹಮದ್ ನದೀಂ,ಸಂಘಟನಾ ಕಾರ್ಯದರ್ಶಿಯಾದ ಆದೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.