ತುಮಕೂರು

ಶ್ರೀಸಿದ್ದಗಿರಿ ಶ್ರೀಶನೇಶ್ವರಸ್ವಾಮಿ ಲಕ್ಷದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ ಹಾಗೂ ದಿ.ಪುನೀತ್ ರಾಜ್‌ಕುಮಾರ್ ಗೆ ನುಡಿನಮನ ಸಲ್ಲಿಕೆ

ತುಮಕೂರು: ತಾಲೂಕಿನ ಬೊಮ್ಮನಹಳ್ಳಿ ಶ್ರೀಸಿದ್ದಗಿರಿ ಶ್ರೀಶನೇಶ್ವರಸ್ವಾಮಿಯ 18ನೇ ವರ್ಷದ ಕಾರ್ತಿಕ ಮಾಸದ ದೀಪೋತ್ಸವ ಮತ್ತು ದಿವಗಂತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಇತ್ತೀಚಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೆಸರುಮಡು, ಬೊಮ್ಮನಹಳ್ಳಿ ಹಾಗೂ ನೆರೆ ಹೊರೆಯ ಗ್ರಾಮಗಳ ಸಾವಿರಾರು ಭಕ್ತರು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದ ಸದಸ್ಯರುಗಳೊಂದಿಗೆ ಭಾಗವಹಿಸಿ, ದೀಪ ಹಚ್ಚುವ ಮೂಲಕ ತಮ್ಮ ಭಕ್ತಿ, ಭಾವವನ್ನು ಸಮರ್ಪಿಸಿದರು.
ಕಳೆದ 17 ವರ್ಷಗಳ ಹಿಂದೆ ಶ್ರೀಸಿದ್ದಗಿರಿಯ ಕ್ಷೇತ್ರದಲ್ಲಿ 12 ಅಡಿ ಎತ್ತರದ ಅಪರೂಪದ ಶಿಲೆಯಿಂದ ನಿರ್ಮಾಣಗೊಂಡಿರುವ ಶ್ರೀಶನೇಶ್ವರ ಮೂರ್ತಿಯ ಪ್ರತಿಷ್ಠಾನೆ ಮಾಡಿದ್ದು, ಅಂದಿನಿಂದ ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಶನಿವಾರ ಶ್ರೀಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಹಮ್ಮಿಕೊಂಡು ಸ್ವಾಮಿಯ ಮಹಿಮೆ ಮತ್ತು ಕೃಪೆಯ ಮಹತ್ವವನ್ನು ಭಕ್ತರಿಗೆ ತಿಳಿಸುತ್ತಾ ಬರಲಾಗುತ್ತಿದೆ.ಅಲ್ಲದೆ ಶ್ರಾವಣ ಮಾಸದಲ್ಲಿ ಸ್ವಾಮೀಯ ವಿಶೇಷ ಆರಾಧನೆ ಭಕ್ತರ ಕಣ್ಮನ ತಣಿಯುವ ರೀತಿಯಲ್ಲಿ ಏರ್ಪಡಿಸಿಕೊಂಡು ಬರಲಾಗುತ್ತಿದೆ.

ಈ ಎಲ್ಲಾ ಪೂಜಾ ಕೈಂಕರ್ಯಗಳ ರೂವಾರಿಗಳಾದ ಶ್ರೀಜನಾರ್ಧನರವರು ಶ್ರೀಕ್ಷೇತ್ರದ ಸದ್ಭಕ್ತರಿಂದ ಈ ಕಾರ್ಯವನ್ನು ನೆರವೇರಿಸಿಕೊಂಡು ಬರುತಿದ್ದಾರೆ.ಜೊತೆಗೆ ಜಿಲ್ಲೆಯ ಹಾಗು ರಾಜ್ಯದ ವಿವಿಧ ಹೆಸರಾಂತ ಕಲಾವಿದರಿಂದ ನಾಟಕ, ಭಜನೆ, ಹರಿಕಥೆ, ಸುಗಮ ಸಂಗೀತ ಮತ್ತಿತರರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದ ಕಡೆಯ ಶನಿವಾರ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ತುಮಕೂರಿನ ಹೆಸರಾಂತ ಶ್ರೀಭೈರವ ಕಲಾಸಂಘದ ಕಾರ್ಯದರ್ಶಿ ಪುಟ್ಟಬೋರಯ್ಯ ಅವರ ನೇತೃತ್ವದಲ್ಲಿ ಸಂಜೆ 6;30 ರಿಂದ ರಾತ್ರಿ 10 ಗಂಟೆಯವರೆಗೆ ನೃತ್ಯ, ಭಕ್ತಿಗೀತೆ, ಭಾವಗೀತೆ, ರಂಗಗೀತೆಗಳ ಗಾಯನವನ್ನು ಒಳಗೊಂಡ ಭಕ್ತಿ,ಭಾವ ರಸಸಂಜೆ ಕಾರ್ಯಕ್ರಮ ನಡೆಸುವ ಮೂಲಕ ನೆರೆದಿದ್ದ ಭಕ್ತರಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸಿದರು.
ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ನಿವೃತ್ತ ಉಪ ತಹಶೀಲ್ದಾರ್ ನರಸಿಂಹಯ್ಯ ಹಾಗೂ ಪತ್ರಕರ್ತರಾದ ಹೆಚ್.ಎಸ್.ಪರಮೇಶ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಭಕ್ತಿ ಭಾವ ರಸ ಸಂಜೆಯಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಎಸ್.ರಾಜಣ್ಣ, ಮಂಜುನಾಥ್ ಕೊತ್ತಿಹಳ್ಳಿ, ಆಶ್ವಥ್ ಹಾಲುಗೊಂಡನಹಳ್ಳಿ ಅವರುಗಳನ್ನು ಒಳಗೊಂಡಂತೆ ಹಲವು ಕಲಾವಿದರು ತಮ್ಮ ಗೀತ ಗಾಯನದ ಮೂಲಕ ಜನರನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚಗೆ ನಿಧನರಾದ ಮೇರು ನಟ ಡಾ.ರಾಜಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮವನ್ನು ಸಹ ನಡೆಸಿಕೊಡಲಾಯಿತು.ಈ ವೇಳೆ ಬೊಮ್ಮನಹಳ್ಳಿಯ ಶ್ರೀಸಿದ್ದಗಿರಿ ಶನೇಶ್ವರ ದೇವಾಲಯದ ಟ್ರಸ್ಟಿನ ಅಧ್ಯಕ್ಷರು ಹಾಗೂ ಪ್ರಧಾನ ಆರ್ಚಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker