ಪಾವಗಡ: ಕಾಂಗ್ರಸ್ ಪಕ್ಷವನ್ನು ವಿಮರ್ಶಿಸುವ ನೈತಿಕ ಹಕ್ಕು ಜೆಡಿಎಸ್ ಪಕ್ಷಕ್ಕಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಶನಿವಾರ ಪಟ್ಟಣದ ಎಸ್.ಎಸ್.ಕೆ ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಪರ ಮತಯಾಚನೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಿ ಮಾಡುವುದರಿಂದ ಹಿಡಿದು ಕುಮಾರಸ್ವಾಮಿ ರವರನ್ನು ಮುಖ್ಯಮಂತ್ರಿ ಮಾಡುವ ವರೆಗೂ ಸಹಕಾರ ನೀಡಿದೆ, ಆದರೆ ನೈತಿಕತೆ ಇಲ್ಲದವರು ಇಂದು ನಮ್ಮ ಪಕ್ಷದ ಬಗ್ಗೆ ವಿಮರ್ಶಿಸುವ ಹಕ್ಕು ಇಲ್ಲ ಎಂದು ಎಚ್ಚರಿಸಿದರು.
ಮಹಾತ್ಮ ಗಾಂಧಿಜೀ ರವರ ಅಧಿಕಾರ ವಿಕೇಂದ್ರಿಕರಣ ಮತ್ತು ಸ್ಥಳೀಯವಾಗಿ ಅಧಿಕಾರ ನೀಡಿ ಅಭಿವೃದ್ದಿಪಡಿಸುವ ಕನಸನ್ನು ಕಾಂಗ್ರೆಸ್ ಪಕ್ಷ ನನಸು ಮಾಡಿದೆ, ಆದರೆ ಬಿಜೆಪಿ ಪಕ್ಷ ಅಧಿಕಾರದ ವಿಕೇಂದ್ರಿಕರಣದ ವಿರುದ್ದ ಹೋರಾಟ ಮಾಡಿದೆ, ಈಗ ಚುನಾವಣೆಯಲ್ಲಿ ಮಾತ್ರ ಮತಗಳನ್ನು ಪಡೆಯಲು ಇಲ್ಲಸಲ್ಲದ ಭರವಸೆಗಳನ್ನು ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತು ಪುತ್ರ ಆರ್.ರಾಜೇಂದ್ರ ರವರು ಸತತವಾಗಿ ಎರಡು ದಶಕಗಳಿಂದ ಸಾಮಾನ್ಯ ಜನರ ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸಿ ಸೇವೆ ಮಾಡುತ್ತಾ ಬಂದಿರು ಅಭ್ಯರ್ಥಿ ಆರ್.ರಾಜೇಂದ್ರ ರವರನ್ನು ಕಾಂಗ್ರೆಸ್ ಪಕ್ಷ ಚುನಾವಣ ಕಣಕ್ಕಿಳಿಸಿದೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಸ್ಥಳೀಯ ಜನರಿಗೆ ಪರಿಚಯವಿಲ್ಲದಿರುವುದು ವಿಪರ್ಯಾಸ ಎಂದು ಟೀಕಿಸಿದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ ಜೆಡಿಎಸ್ ಪಕ್ಷ ಕಣ್ಣೀರನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ರಾಜ್ಯದಲ್ಲಿ ರಾಜಕೀಯ ಮಾಡುತ್ತಿದೆ, ಬದ್ದತೆ ಮತ್ತು ಶಿಸ್ತು ಕ್ರಮಗಳಿಲ್ಲದಿದ್ದರೂ ಅಧಿಕಾರದ ಆಸೆಗಾಗಿ ಅಧಿಕಾರಿಗಳನ್ನು ರಾಜಿನಾಮೆ ಕೊಡಿಸಿ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿರುವುದು ವಿಶಾದನೀಯ ಎಂದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರಮಣಪ್ಪ, ಮಾಜಿ ಸಂಸದರಾದ ಟಿ.ಬಿ.ಜಯಚಂದ್ರ, ಮುದ್ದಹನುಮೇಗೌಡ, ಬಿ.ಎನ್,ಚಂದ್ರಪ್ಪ, ಮಾಜಿ ಶಾಸಕ ಷಡಕ್ಷರಿ, ಕೆ.ಎನ್.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಅಭ್ಯರ್ಥಿ ರಾಜೇಂದ್ರ, ನರಸಿಂಹಯ್ಯ, ಕೋಟೆ ಪ್ರಭಾಕರ, ಪುರಸಭೆ ಅದ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಗ್ರಾ.ಪಂ ಸದಸ್ಯರುಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.