ಮೈದುಂಬಿ ಹರಿಯುತ್ತಿರುವ ಹುಳಿಯಾರಿನ ಅಪ್ಪಾಸಾಬಿ ಅಣೆಯ ನಯನ ಮನೋಹರ ದೃಶ್ಯಗಳು

ಹುಳಿಯಾರು: ಹತ್ತನೆರಡು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆಗೆ ಬತ್ತಿ ಬರಡಾಗಿದ್ದ ಕೆರೆಕಟ್ಟೆಗಳು ಮರುಜೀವ ಪಡೆದಿದೆ. ಹತ್ತನ್ನೆರಡು ವರ್ಷಗಳ ನಂತರ ಕೆರೆಗಳು ಕೋಡಿ ಬಿದ್ದು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿವೆ. ಅದರಲ್ಲೂ ಜಲಪಾತಗಳು ಸೃಷ್ಠಿಯಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ಹೌದು ಹುಳಿಯಾರು ಸಮೀಪದ ಅಪ್ಪಾಸಾಬಿ ಅಣೆ ಸಹ ದಶಕಗಳ ನಂತರ ಮೈದುಂಬಿ ಹರಿಯುತ್ತಿದೆ. ಅದರಲ್ಲೂ ಜಲಧಾರೆಯಂತೆ ಧುಮ್ಮಿಕ್ಕಿ ಹರಿಯುವ ಮೂಲಕ ಸುತ್ತಮುತ್ತಲ ಜನರ ಪಿಕ್ನಿಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. ಕೆರೆಯ ಕೋಡಿ ನೀರು ಬಂಡೆಗಳ ಮೇಲೆ ಹರಿದು ಹೋಗುವಾಗ ಹಾಲ್ನೊರೆಯಂತೆ ಕಾಣುವ ದೃಶ್ಯ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆವಿಗೆ ಪ್ರವಾಸಿಗಳ ತಂಡೋಪತಂಡವಾಗಿ ಆಗಮಿಸಿ ನೀರಿನಲ್ಲಿ ಆಟವಾಡಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳು, ಸ್ತ್ರೀಯರು ಜಲಪಾತದ ಬುಡದಲ್ಲಿ ಕುಳಿತು ಎಂಜಾಯ್ ಮಾಡುತ್ತಿದ್ದರೆ ಯುವಕರು ಈಜಿ ಖುಷಿ ಪಡುತ್ತಿದ್ದಾರೆ. ಅಲ್ಲದೆ ಫಾಲ್ಸ್ ಬಳಿ ಸೆಲ್ಫೆ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ.
ಕೆಲವರಂತೂ ತರಹೇವಾರಿ ತಿಂಡಿಗಳನ್ನು ಮಾಡಿಕೊಂಡು ಕುಟುಂಬ ಸಮೇತ ಆಗಮಿಸಿ ನೀರಿನಲ್ಲಿ ಕುಣಿದು ಕುಪ್ಪಳಿಸಿ ಚುಮುಚುಮು ಚಳಿಯಲ್ಲಿ ಖಾರಖಾರವಾದ ತಿಂಡಿ ತಿಂದು ಮಸ್ತ್ ಮಜಾ ಮಾಡುತ್ತಿದ್ದಾರೆ. ಮನೆಗೆ ಬರುವ ನೆಂಟರಿಷ್ಟರನ್ನು ಅಣೆಯ ಬಳಿ ಕರೆತಂದು ನಮ್ಮೂರ ಪಿಕ್ನಿಕ್ ಸ್ಪಾಟ್ ಹೇಗಿದೆ ನೋಡಿ ಎಂದು ಹೆಮ್ಮೆಯಿಂದ ತೋರಿಸುತ್ತಿದ್ದಾರೆ.
ಒಟ್ಟಾರೆ ಅಕಾಲಿಕ ಮಳೆ ಜಲಪಾತ ಸೃಷ್ಠಿಸಿ ಹುಳಿಯಾರು ಭಾಗದವರಿಗೆ ಪ್ರವಾಸಿ ತಾಣ ನಿರ್ಮಿಸಿದೆ. ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಜಲವೂ ಕಲ್ಲುಕೋರೆಗಳ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ದೃಶ್ಯ ನಯನಮನೋಹರವಾಗಿಸಿದೆ. ಕೆರೆಯ ಸೌಂದರ್ಯದ ಸೊಬಗು ಸವಿಯುವ ಜೊತೆಗೆ ಪ್ರಕೃತಿ ಮಡಿಲಲ್ಲಿ ಮಿಂದೇಳುವAತೆ ಮಾಡಿದೆ. ಈಗ ಹೇಮಾವತಿ ನೀರು ಸ್ಥಗಿತಗೊಂಡಿದ್ದು ಮಳೆ ನೀರಿನಿಂದ ಅಣೆ ಹರಿಯುತ್ತಿದೆ. ಮಳೆ ಸಂಪೂರ್ಣ ನಿಂತಾಗ ಅಣೆಯ ಸೊಬಗೂ ಮರೆಯಾಗುತ್ತದೆ.
ಜಾಲಿ ಗಿಡಗಳು ಅಡ್ಡಿ
ಅಣೆ ಒಳಗೆ ಮತ್ತು ಮುಂಭಾಗದಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಗಿಡಗಳು ಕೋಡಿಯಲ್ಲಿ ಎಂಜಾಯ್ ಮಾಡಲು ಅಡ್ಡಿಯಾಗುತ್ತಿದೆ. ಅದರಲ್ಲೂ ಈಜಾಡುವ ಯುವಕರಿಗೆ ಭಾರಿ ಕಿರಿಕಿರಿಯಾಗುತ್ತಿದೆ. ಎಚ್ಚರ ತಪ್ಪಿದರೆ ಮೈಯೆಲ್ಲಾ ಮುಳ್ಳಿನಿಂದ ತರಚಿಸಿಕೊಳ್ಳುವ ಆತಂಕ ಪ್ರವಾಸಿಗರದಾಗಿದೆ. ಅಲ್ಲದೆ ಹುಳಿಯಾರು ಪಟ್ಟಣದಿಂದ ಈ ಅಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಹ ಹದಗೆಟಿದ್ದು ವಾಹನ ಸವಾರರು ಎದ್ದುಬಿದ್ದು, ಕೆಸರು ಸಿಡಿಸಿಕೊಂಡು ಓಡಾಡಬೇಕಿದೆ. ನಾಲ್ಕು ಚಕ್ರದ ವಾಹನಗಳು ಬಂದರAತೂ ನರಕಯಾತನೆ ಅನುಭವಿಸಬೇಕಿದೆ. ಪಟ್ಟಣ ಪಂಚಾಯ್ತಿ ಅಣೆಯ ಕೋಡಿ ಬಳಿ ಹಾಗೂ ರಸ್ತೆಯಲ್ಲಿ ಜಾಲಿ ಗಿಡಗಳನ್ನು ತೆರವು ಮಾಡುವ ಜೊತೆಗೆ ರಸ್ತೆ ದುರಸ್ತಿಗೆ ಮುಂದಾಗಿ ಪ್ರವಾಸಿಗರಿಗೆ ನೆರವಾಗಬೇಕಿದೆ.
ಗುತ್ತಿಗೆದಾರನ ಹೆಸರು ಅಣೆಗೆ :-
ತಿಮ್ಲಾಪುರ ಕೆರೆ ಕೋಡಿ ಬಿದ್ದಾಗ ನೀರು ಸುವರ್ಣಮುಖಿ ಹಳ್ಳದ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹರಿಯುತ್ತದೆ. ಹೀಗೆ ಹರಿಯುವ ನೀರನ್ನು ತಡೆದು ನಿಲ್ಲಿಸಿ ಇಲ್ಲಿನ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಐದಾರು ದಶಕಗಳ ಹಿಂದೆ ಸರ್ಕಾರದಿಂದ ಅಣೆ ಕಟ್ಟಲಾಯಿತು. ಈ ಅಣೆ ನಿರ್ಮಾಣದ ಗುತ್ತಿಗೆಯನ್ನು ಅಪ್ಪಾಸಾಬಿ ಎನ್ನುವವರು ತೆಗೆದುಕೊಂಡಿದ್ದರು. ಹಾಗಾಗಿ ಈ ಅಣೆಗೆ ಅಪ್ಪಾಸಾಬಿ ಕಟ್ಟಿದ ಅಣೆ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಇದು ಅಪ್ಪಾಸಾಬಿ ಅಣೆಯಾಗಿ ಜನಜನಿತಾವಾಗಿದೆ.