ತುಮಕೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಪ್ರದೇಶಕ್ಕೆ ಬುಧವಾರ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಕುಣಿಗಲ್ ತಾಲೂಕಿನ ಜಲದಿಗೆರೆ ಹಾಗೂ ಬ್ಯಾಲದಕೆರೆ ಗ್ರಾಮಗಳಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಹಾನಿಯಾದ ಬೆಳೆಯನ್ನು ಅವರು ವೀಕ್ಷಿಸಿದರು.
ಈ ವೇಳೆ ಸ್ಥಳದಲ್ಲೇ ಇದ್ದ ರೈತರು ವರ್ಷವಿಡೀ ಬೆಳೆದ ಬೆಳೆ ಹಾಳಾಗಿದೆ. ಹಾಕಿದ ಶ್ರಮ ಮಣ್ಣು ಪಾಲಾಗಿದೆ. ನಮಗೆ ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚು ಪರಿಹಾರ ನೀಡುವ ಬಗ್ಗೆ ಸರ್ಕಾರದ ಜೊತೆಗೆ ಚರ್ಚಸಿ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಮಾತನಾಡಿದ ಸಚಿವರು, ಕಳೆದ ವಾರದಿಂದ ಸತತವಾಗಿ ಸುರಿದ ಮಳೆಯಿಂದ ಹಾನಿಗೊಳಗಾಗಿರುವ ಬೆಳೆ, ಮನೆಗಳ ವರದಿ ನೀಡುವಂತೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ಸಂಪೂರ್ಣವಾಗಿ ಹಾನಿ ವರದಿ ಬಂದ ತಕ್ಷಣವೇ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಪರಿಹಾರವನ್ನು ಹಾನಿಗೊಳಗಾದವರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದರು.
ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 679 ಕೋಟಿ ರೂ. ಹಣವಿದ್ದು, ಮಳೆಯಿಂದ ಹಾನಿಯಾಗೊಳಹಾದವರಿಗೆ ತಕ್ಷಣವೇ ಪರಿಹಾರ ಒದಗಿಸಲು ಸೂಚನೆ ನೀಡಲಾಗಿದೆ ಎಂದರು. ಹಾನಿಗೆ ಸಂಬಂಧಿಸಿದಂತೆ ಮೊದಲ ಮತ್ತು ಎರಡನೇ ಹಂತ ಸೇರಿ 750 ಕೋಟಿ ರೂ. ಪರಿಹಾರವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೂ ಪರಿಹಾರ ಶೀಘ್ರ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಭಾರಿ ಪ್ರಮಾಣದಲ್ಲಿ ಅಂದರೆ ವಾಡಿಕೆಗಿಂತ ಸುಮಾರು ಶೇ.1700ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಜಿಲ್ಲೆಯಾದ್ಯಂತ 1.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಸುಮಾರು 700 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದರು.
ಮಳೆಯಿಂದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಮುಖ್ಯವಾಗಿ 1.11 ಲಕ್ಷ ಹೆಕ್ಟೇರ್ ನಷ್ಟು ರಾಗಿ ಬೆಳೆ ಹಾನಿಯಾಗಿದೆ. ಅಲ್ಲದೇ 9 ರಿಂದ10 ಸಾವಿರ ಹೆ. ಮೆಕ್ಕೆಜೋಳದ ಬೆಳೆಯೂ ಹಾನಿಯಾನಿದೆ. ಅದೇ ರೀತಿ 1100 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ ಎಂದರು. ಬೆಳೆ ಹಾನಿ ಹೊರತುಪಡಿಸಿ ರಸ್ತೆ, ಟ್ಯಾಂಕ್, ವಿದ್ಯುತ್ ಕಂಬ, ಟಿ.ಸಿ., ಸಣ್ಣ ನೀರಾವರಿ ಕೆರೆಗಳ ಹಾನಿ ಸೇರಿದಂತೆ ಒಟ್ಟು 80ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಸುಮಾರು 800ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ವರದಿ ಪ್ರಕಾರ ಸುಮಾರು 622 ಮನೆಗಳು ಹಾನಿಗೊಳಗಾಗಿದ್ದು, ಸುಮಾರು 8 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 614 ಭಾಗಶಃ ಬಿದ್ದಿವೆ. ಇನ್ನು ಕುಣಿಗಲ್ ನಲ್ಲಿ ಓರ್ವ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ನಿಯಮಾನುಸಾರ 5ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದರು.
ಸರ್ಕಾರದ ನಿರ್ದೇಶನದ ಪ್ರಕಾರ ಸಮೀಕ್ಷೆ ನಡೆಸಲಾಗುತ್ತಿದ್ದು, ಬೆಳೆ ಮತ್ತು ಮನೆ ಹಾನಿಗಳಿಗೆ ಪರಿಹಾರ ಕಲ್ಪಿಸಲು ಪೋರ್ಟಲ್ ನಲ್ಲಿ ನೋಂದಣಿ ಮಾಡಲಾಗುತ್ತಿದೆ. ಹಾನಿಗೊಳಗಾದ ಯಾವುದೇ ಅರ್ಹ ಫಲಾನುಭವಿ ಪರಿಹಾರದಿಂದ ಕೈತಪ್ಪದಂತೆ ಕ್ರಮ ವಹಿಸಲಾಗಿದೆ. ಪರಿಹಾರವು ಅನರ್ಹರ ಪಾಲಾಗಬಾರದು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಮೀಕ್ಷೆಯನ್ನು ಹತ್ತು ದಿನಗಳಲ್ಲಿ ಮುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪರಿಸ್ಥಿತಿ ಬಂದಿಲ್ಲ. ಅವರೇ ತಾತ್ಕಾಲಿಕವಾಗಿ ತೋಟದ ಜಮೀನಿನಲ್ಲಿ ಅಥವಾ ಅಕ್ಕ ಪಕ್ಕದ ಮನೆಯಲ್ಲಿ ನೆರವು ಪಡೆದಿದ್ದಾರೆ ಎಂದು ಮಾಧ್ಯಮವರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದರು. ಪರಿಹಾರವನ್ನು ಪ್ರತಿ ಹೆಕ್ಟೇರ್ ಗೆ ಮಳೆಯಾಶ್ರಿತ ರಾಗಿ ಬೆಳೆಗೆ 6800 ರೂ., ನೀರಾವರಿ ಆಶ್ರಿತವಾದರೆ 13,500 ರೂ. ಹಾಗೂ ತೋಟಗಾರಿಕೆ ಬೆಳೆಗೆ 18 ಸಾವಿರ ರೂ. ಸಿಗಲಿದೆ ಎಂದು ಹೇಳಿದರು.
ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ಭಾಗದಲ್ಲಿ ವಾಸವಿರುವ ಬುಡಕಟ್ಟು ಜನಾಂಗದವರಿಗೆ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಆಶ್ರಯದ ವ್ಯವಸ್ಥೆ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿಯ ಬುಡಕಟ್ಟು ಜನಾಂಗದವರಿಗೆ ಈಗಾಗಲೇ ನಿವೇಶನ ಹಕ್ಕು ಪತ್ರ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನೋವು ತೋಡಿಕೊಂಡ ರೈತರು:-ರಾಗಿ ಬೆಳೆ ಬೆಳೆಯುವುದಕ್ಕೆ ಪ್ರತಿ ಹೆಕ್ಟೇರ್ ಗೆ 18 ರಿಂದ 25 ಸಾವಿರ ರೂ. ಖರ್ಚು ಬಂದಿದೆ. ಸರ್ಕಾರ ಒಂದು ಹೆಕ್ಟೇರ್ ಗೆ ಕೇವಲ ಆರು ಸಾವಿರ ಪರಿಹಾರ ನಿಗಧಿಪಡಿಸಿರುವ ಪರಿಹಾರವನ್ನು ಹೆಚ್ಚು ಮಾಡಬೇಕೆಂದು ರೈತ ರಂಗಸ್ವಾಮಿ ಒತ್ತಾಯ ಮಾಡಿದರು.
ಮಳೆಯಿಲ್ಲದೆ ಕಳೆದ ವರ್ಷ ಬೆಳೆ ಯಿರಲಿಲ್ಲ. ಈ ವರ್ಷ ಬಿತ್ತನೆ ಮಾಡಿದ್ದೆ. ಎಲ್ಲಾ ನೀರು ಪಾಲಾಗಿದೆ. ಸರ್ಕಾರ ಕೊಡುವ ದುಡ್ಡು ದನದ ಮೇವಿಗೂ ಸಾಕಾಗಲ್ಲ. ಒಂದು ಹೆಕ್ಟೇರ್ ಗೆ 50 ಸಾವಿರ ಖರ್ಚಾಗಿದೆ. ಹೆಚ್ಚು ಪರಿಹಾರ ನೀಡಬೇಕೆಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಉಪವಿಭಾಗಾಧಿಕಾರಿ ಅಜಯ್, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ. ವಿದ್ಯಾಕುಮಾರಿ, ತೋಟಗಾರಿಕೆ ಉಪನಿರ್ದೇಶಕ ಬಿ.ರಘು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ತಹಸೀಲ್ದಾರ್ ಮಹಾಬಲೇಶ್ವರ ಸೇರಿದಂತೆ ಇತರರಿದ್ದರು