ಹಂಸಲೇಖ, ಪ್ರಿಯಾಂಕ್ ಖರ್ಗೆ ತೇಜೋವಧೆಗೆ ದಲಿತ ಛಲವಾದಿ ಮಹಾಸಬಾ ಖಂಡನೆ
ಮಾಂಸಾಹಾರಿಗಳು ರಾಕ್ಷಸರು ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವುದು ಖಂಡನೀಯ
ತುಮಕೂರು : ಮಾಜಿ ಸಚಿವ ಶಾಸಕ ಪ್ರಿಯಾಂಕ ಖರ್ಗೆ ಅವರ ವಿರುದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಹಾಗೂ ನಾದಬ್ರಹ್ಮ ಹಂಸಲೇಖ ಅವರ ಮೇಲಿನ ಮಾನಸಿಕ ದಾಳಿಯನ್ನು ದಲಿತ ಛಲವಾದಿ ಮಹಾಸಭಾ(ರಿ) ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಲಿತ ಛಲವಾದಿ ಮಹಾಸಭಾದ ಅಧ್ಯಕ್ಷರಾದ ಡಾ.ಪಿ.ಚಂದ್ರಪ್ಪ, ಹೆಚ್.ಬಿ.ಪುಟ್ಟ ಬೋರಯ್ಯ,ಆನಂದಂಮೂರ್ತಿ,ಚಂದ್ರಶೇಖರ್,ರಾಜಯ್ಯ,ಶ್ರೀನಿವಾಸ್,ಸಿದ್ದನಂಜಯ್ಯ ಮತ್ತಿತರ ಮುಖಂಡರು,ದೇಶಿಯ ಸಂಗೀತ ದಲ್ಲಿಯೇ ಹೆಚ್ಚು ಕೃಷಿ ಮಾಡಿರುವ ಡಾ.ಹಂಸಲೇಖ ಅವರು, ಮೈಸೂರಿನ ಸಮಾರಂಭ ವೊಂದರಲ್ಲಿ ನೀಡಿದ ಹೇಳಿಕೆಯನ್ನು ನೆಪ ಮಾಡಿಕೊಂಡು,ಒಂದು ಸಮುದಾಯದ ಜನರು ಅವರ ಮೇಲೆ ಮಾನಸಿಕ ದಾಳಿ ನಡೆಸುವ ಮೂಲಕ ಕ್ಷೇಮೆ ಕೇಳುವಂತೆ ಮಾಡಿರುವುದೇ ಅಲ್ಲದೆ,ನ್ಯಾಯಾಲಯದ ದಾವೆಯನ್ನು ಹೂಡುವ ಮೂಲಕ ಅವರ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ ಎಂದು ದಲಿತ ಛಲವಾದಿ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳಲ್ಲಿ ಈಗಾಗಲೇ ಚಿತ್ರಿತವಾಗಿರುವಂತೆ ಯಜ್ಞ, ಯಾಗಾಧಿಗಳ ಕೊನೆಯಲ್ಲಿ ಬಲಿ ನೀಡುವುದು ವಾಡಿಕೆ.ಹೀಗೆ ಬಲಿ ನೀಡಿದ ಪ್ರಾಣಿಗಳನ್ನು ಬೇಯಿಸಿ ಪ್ರಸಾದದ ರೂಪದಲ್ಲಿ ಸೇವಿಸುವುದನ್ನು ಪುರಾಣಗಳಲ್ಲಿ ಕಾಣಬಹುದಾಗಿದೆ.ಹಾಗಾಗಿ ಭಾರತೀಯರಲ್ಲಿ ಮಾಂಸಾಹಾರ ವಾಡಿಕೆಯಲ್ಲಿತ್ತು ಎಂಬುದನ್ನು ನಿರ್ವಿವಾದದಿಂದ ಒಪ್ಪಿಕೊಳ್ಳ ಬಹುದಾಗಿದೆ. ದೇಶದ ಶೇ 90ರಷ್ಟು ಜನ ಮಾಂಸಾಹಾರಿಗಳು, ಹೀಗಿದ್ದು,ಮಾಂಸಾಹಾರಿಗಳನ್ನು ರಾಕ್ಷಸರು ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವುದು ಖಂಡನೀಯ ಮತ್ತು ಸಂವಿಧಾನಕ್ಕೆ ಮಾಡಿದ ಅಪಪ್ರಚಾರ ಎಂದಿದ್ದಾರೆ.
ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮೈಸೂರು ಸಂಸದರಾದ ಪ್ರತಾಪಸಿಂಹ ನೀಡಿರುವ ಕೀಳು ಮಟ್ಟದ ಹೇಳಿಕೆ ಖಂಡನೀಯ. ಇದು ದಲಿತರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನವಾಗಿದೆ. ಮೈಸೂರಿನ ಸಂಸದರ ಹೇಳಿಕೆ ಹೀಗೆಯೇ ಮುಂದುವರೆದರೆ ರಾಜ್ಯದ ದಲಿತರು ಒಗ್ಗೂಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.