ತುಮಕೂರುತುಮಕೂರು ನಗರರಾಜ್ಯ

ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿ, ಪರಂಪರೆ ತಲುಪಿಸುವ ಕೆಲಸ ಶ್ಲಾಘನೀಯ : ಪತ್ರಕರ್ತ ಅಜಿತ್ ಹನುಮಕ್ಕನವರ್

ವಿಜೃಂಭಣೆಯಿಂದ ನಡೆದ ತುಮಕೂರು ದಸರಾ ಉತ್ಸವ

ತುಮಕೂರು : ತುಮಕೂರು ದಸರಾ 2021ರ ಅಂಗವಾಗಿ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ದೇವಾಲಯಗಳ ಆರ್ಚಕರಿಗೆ ಗೌರವ ಸಮರ್ಪಣೆ,ತಾಲೂಕು ದಂಡಾಧಿಕಾರಿಗಳಿಂದ ಸಾಮೂಹಿಕ ಶಮಿ ಪೂಜೆ,ಸಾರ್ವಜನಿಕ ಸಮಾರಂಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಉದ್ಯಮಿ ಎಸ್.ಪಿ.ಚಿದಾನಂದ್ ಅವರ ನೇತೃತ್ವದಲ್ಲಿ ನಡೆದ 2021ನೇ ಸಾಲಿನ ದಸರಾ ಉತ್ಸವದ ಮೆರವಣಿಗೆಯಲ್ಲಿ 70ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದು,ನಗರದ ಟೌನ್‌ಹಾಲ್ ವೃತ್ತದಿಂದ ಹೊರಟ ಉತ್ಸವ ಮೂತಿಗಳ ಮೆರವಣಿಗೆ ಎಂ.ಜಿ.ರಸ್ತೆಯ ಮೂಲಕ ಗುಂಚಿಚೌಕ ತಲುಪಿ, ಅಲ್ಲಿಂದ ಜನರಲ್ ಕಾರ್ಯಪ್ಪ ರಸ್ತೆಯ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ತಲುಪಿತು.ಮೆರವಣಿಗೆಗೆ ಬೆಂಗಳೂರಿನ ವಾಸವಿ ಪೀಠದ ಶ್ರೀಶ್ರೀ ಸಿಚ್ಚಿದಾನಂದಸರಸ್ವತಿ ಸ್ವಾಮೀಜಿ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಅವರು ಚಾಲನೆ ನೀಡಿದರು.
ಸಂಜೆ ನಾಲ್ಕು ಗಂಟೆಗೆ ಸರಕಾರಿ ಜೂನಿಯರ್ ಕಾಲೇಜು ಮೈಧಾನದಲ್ಲಿ ನಡೆದ ಸಾಮೂಹಿಕ ಶಮಿ ಪೂಜೆಯಲ್ಲಿ ಪಾಲ್ಗೊಂಡು,ಬನ್ನಿ ಮರ ಕಡಿದು,ಸಂಪ್ರದಾಯ ನೆರವೇರಿಸಿದ ತುಮಕೂರು ತಾಲೂಕು ದಂಡಾಧಿಕಾರಿ ಮೋಹನ್‌ಕುಮಾರ್, ಸ್ಮಾರ್ಟ್ ಸಿಟಿಯಿಂದ ತುಮಕೂರು ನಗರ ಎಲ್ಲರನ್ನು ಆಕರ್ಷಿಸುತ್ತಿದೆ.ಎಲ್ಲ ಧರ್ಮಗಳ ಸಮನ್ವಯತೆಯ ನಾಡಾಗಿರುವ ಕಲ್ಪತರು ನಾಡು,ದಾಸೋಹಿಗಳ ಬೀಡಿನಲ್ಲಿ ಸಾಮೂಹಿಕ ಶಮೀಪೂಜೆ ಹಮ್ಮಿಕೊಳ್ಳುವ ಧಾರ್ಮಿಕ ಐಕ್ಯತೆಯನ್ನು ಸಾರುತ್ತಿರುವುದು ಗಮನಾರ್ಹ ಅಂಶವಾಗಿದೆ.ಮೂವತ್ತು ವರ್ಷಗಳ ಹಿಂದೆ ವಿಜಯದಶಮಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಒಂದೆಡೆ ನಡೆಯುತ್ತಿರಲಿಲ್ಲ.ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ನೆರವಿನೊಂದಿಗೆ ಸಮುದಾಯಗಳ ಮುಖಂಡರ ಸಹಕಾರದಿಂದ ಒಂದೆ ಕಡೆ ಆಚರಿಸುವ ಮೂಲಕ ಐಕ್ಯತೆಯ ಸಂದೇಶವನ್ನು ನಾಡಿನ ಜನತೆಗೆ ಸಾರಲಾಗುತ್ತಿದೆ.ನಾಡದೇವಿ ಚಾಮುಂಡೇಶ್ವರಿಯಲ್ಲಿ ಕೋರೋನ ದೂರವಾಗಿ, ನಾಡಿನೆಲ್ಲೆಡೆ ಸುಖಃ ಸಮೃದ್ದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಅಜಿತ್ ಹನುಮಕ್ಕನವರ್,ಪರಂಪರೆ ಇಲ್ಲದೇ ದೇಶ ಇಲ್ಲ, ದೇಶ ಇಲ್ಲದೇ ಪರಂಪರೆ ಇಲ್ಲ, ತಿಲಕರು ಸ್ವಾತಂತ್ರ‍್ಯ ಹೋರಾಟಕ್ಕಾಗಿ ಸ್ಥಾಪಿಸಿದ ಗಣೇಶೋತ್ಸವದಂತೆ,ತುಮಕೂರು ದಸರಾ ಸಮಿತಿ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಲಿದೆ, ಯುವ ಪೀಳಿಗೆ ಸಂಸ್ಕೃತಿ ಮತ್ತು ಸಂಪ್ರದಾಯದ ಒಳಗೆ ಬರದೇ ಹೋದರೆ ಪರಂಪರೆಯನ್ನು ಉಳಿಸುವುದು ಕಷ್ಟ.ದಸರ ಉತ್ಸವದ ಮೂಲಕ ತುಮಕೂರಿನ ಜನತೆ ತಲೆಮಾರಿನಿಂದ ತಲೆಮಾರಿಗೆ ತಮ್ಮ ಸಂಸ್ಕೃತಿ, ಪರಂಪರೆಯನ್ನು ತಲುಪಿಸುವ ಕೆಲಸ ಆಗುತ್ತಿರುವುದು ಶ್ಲಾಘನೀಯ ಎಂದರು.
ಪ್ರಪಂಚದಲ್ಲಿ ಅನೇಕ ನಾಗರಿಕತೆಗಳು ಆಗಿ ಹೋಗಿವೆ. ಆದರೆ ಉಳಿದಿರುವ ಏಕೈಕ ನಾಗರಿಕತೆ ಎಂದರೆ ಅದು ಸಿಂಧೂ ನಾಗರಿಕತೆ.ಇದನ್ನು ಅಳಿಸಿ ಹಾಕಲು ಅನೇಕ ರೀತಿಯ ದಾಳಿಗಳು ನಡೆದರು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಿ ರುವುದಕ್ಕೆ ಇಂತಹ ಕಾರ್ಯಕ್ರಮಗಳೇ ಕಾರಣ, ಇಂತಹ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪತ್ರಕರ್ತ ಅಜಿತ ಹನುಮಕ್ಕನವರ್ ನುಡಿದರು.
ತುಮಕೂರು ದಸರಾ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಉದ್ಯಮಿ ಎಸ್.ಪಿ.ಚಿದಾನಂದ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಸಂಸ್ಕೃತಿ ಕ್ಷೀಣಿಸುತ್ತಿರುವುದಕ್ಕೆ ಪೋಷಕರೇ ಕಾರಣ.ಮಕ್ಕಳು ಓದಿದರೆ ಸಾಕು ಎನ್ನುವುದನ್ನು,ಬಿಟ್ಟು ಮಕ್ಕಳಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸಬೇಕು.ಗುರುಹಿರಿಯರಿಗೆ ನಮಸ್ಕರಿಸುವ ಸಂಸ್ಕಾರವನ್ನು ಬೆಳೆಸಬೇಕು.ನಮ್ಮ ಧರ್ಮದಲ್ಲಿ ಶವ ಸಂಸ್ಕಾರಕ್ಕೂ ಒಂದು ಪದ್ದತಿ ಇದೆ.ಮಕ್ಕಳಿಗೆ ಆ ಬಗ್ಗೆ ಪರಿಚಯಿಸದ ಕಾರಣ ಕೋವಿಡ್ ಸಮಯದಲ್ಲಿ ಆದ ಅನಾಹುತಗಳೇ ಸಾಕ್ಷಿಯಾಗಿದೆ ಎಂದ ಅವರು, ಹಬ್ಬ, ಹರಿದಿನಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ಪರಿಚಯಿಸಬೇಕಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಬೆಂಗಳೂರಿನ ವಾಸವಿ ಪೀಠದ ಶ್ರೀಶ್ರೀಸಚ್ಚಿದಾನಂದಸರಸ್ವತಿ ಸ್ವಾಮೀಜಿ,ತಾಮಸ ಗುಣಗಳನ್ನು ನಾಶ ಮಾಡಲು ಸೃಷ್ಠಿಯಾದ ದೈವಿಶಕ್ತಿ, ಅಸುರರನ್ನು ಕೊಂದು ಶಾಂತಿ ನೆಲೆಸುವಂತೆ ಮಾಡಲು ಎಲ್ಲ ದೇವತೆಗಳು ಶಕ್ತಿಯನ್ನು ತುಂಬಿದರು.ಧರ್ಮ ಸಂರಕ್ಷಣೆ ಇಂದಿನ ಅಗತ್ಯಗಳಲ್ಲಿ ಒಂದು ಆದರೆ ಅದನ್ನು ಉಳಿಸಿಕೊಳ್ಳಲು ಹಬ್ಬಹರಿದಿನಗಳನ್ನು ವಿಜೃಂಭಣೆಯಿಂದ ಆಚರಿಸಿದರೆ ಸಾಕು,ನಮ್ಮ ಧರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ತುಮಕೂರು ದಸರಾ ಕಾರ್ಯಕ್ರಮ ಎಲ್ಲ ದೇವರನ್ನು ಒಳಗೊಳ್ಳುವ ಮೂಲಕ ಎಲ್ಲರಿಗೂ ಅವಕಾಶ ಕಲ್ಪಿಸಿ, ನಾಗರೀಕರನ್ನು ಒಳಗೊಂಡತೆ ದಸರಾ ಆಚರಿಸುತ್ತಿರುವುದು ಶ್ಲಾಘನೀಯ.ಮುಂಬರುವ ವರ್ಷಗಳಲ್ಲಿ ತುಮಕೂರು ದಸರಾ ಇನ್ನಷ್ಟು ವಿಜೃಂಭಣೆಯನ್ನು ಪಡೆದುಕೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು,ಶಾಸಕ ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ, ಕೋರಿ ಮಂಜನಾಥ್, ಆರ್.ಎಲ್.ರಮೇಶ್ ಬಾಬು, ಬಿ.ಎಸ್.ಮಂಜುನಾಥ್, ಓಂಕಾರೇಶ್ವರಿ ನಾಗರಾಜು, ತೇಜಸ್ವಿನಿ ವಿನಾಯಕ್,ದಸರ ಉತ್ಸವ ಸಮಿತಿಯ ಕಾರ್ಯದರ್ಶಿ ಬಿ.ಎಸ್.ಮಹೇಶ್,ಸಹಕಾರ್ಯದರ್ಶಿ ಚೇತನ್ ಬಿ.ಹೆಚ್.,ಹೆಚ್.ಕೆ.ಬಸವರಾಜು, ಸಂಯೋಜಕ ರಾದ ಕೆ.ಎನ್.ಗೋವಿಂದರಾವ್,ಖಜಾಂಚಿ ಜಿ.ಎಸ್.ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker