ಗುಬ್ಬಿ
ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ…?
ಗುಬ್ಬಿ : ಆರೋಪ ಹೊತ್ತ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದೆಯೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ? ತನಿಖೆ ಹೆಸರಿನಲ್ಲಿ ಪ್ರಶ್ನೆಯಾಗಿಯೇ ಉಳಿದ ಕಡಬಾ ಉಪ ತಹಶೀಲ್ದಾರ್ ಕಾರ್ಯಾಲಯದ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ.
ಕಳೆದ ಸೆಪ್ಟೆಂಬರ್ ಹತ್ತೊಂಬತ್ತರಂದು ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿಯ ಉಪ ತಹಶೀಲ್ದಾರ್ ಕಾರ್ಯಾಲಯದಲ್ಲಿ ಎಸ್.ಎಸ್.ವೈ.ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸುವರ್ಣಪ್ರಗತಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಲಾಗಿದ್ದು ತದನಂತರ ತನಿಖೆ ಹೆಸರಿನಲ್ಲಿ ಪರೀಶೀಲನೆ ನಡೆಸಿ ಕೈ ಚೆಲ್ಲಿ ಕುಳಿತಿರುವ ಜಿಲ್ಲಾಡಳಿತ ಆರೋಪ ಎಸಗಿದ ಯಾವುದೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ.
ಸುದ್ದಿ ಬಿತ್ತರವಾದ ಎರಡು ದಿನಕ್ಕೆ ತುಮಕೂರು ಉಪ ವಿಭಾಗಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ದಿನವಿಡೀ ಕಡಬಾ ಉಪ ತಹಶೀಲ್ದಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದು ಸುಮಾರು 50 ಕ್ಕೂ ಹೆಚ್ಚು ಪ್ರಮಾಣದ ಅನರ್ಹರ ದಾಖಲೆಗಳನ್ನು ವಶಪಡಿಸಿಕೊಂಡು ಹೋಗಿದ್ದಾರೆ ಎಂಬ ಖಚಿತ ಮಾಹಿತಿ ಇದ್ದರೂ ಸಹ ಇಲ್ಲಿಯವರೆಗೂ ಆರೋಪ ಹೊತ್ತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿನ ಮೌನ ತಿಳಿಯದಾಗಿದೆ.
ತನಿಖೆಯ ವಿಳಂಬಕ್ಕೆ ಕಾರಣ ತಿಳಿಯುತ್ತಿಲ್ಲ ? :- ತನಿಕೆಯು ಯಾವ ಹಂತದಲ್ಲಿ ಇದೆ ಜಿಲ್ಲಾಡಳಿತ ಯಾವ ಹಂತದಲ್ಲಿ ತನಿಖೆ ನಡೆಸುತ್ತಿದೆ ಎಂಬುದೇ ತಿಳಿದಿಲ್ಲ ಆರೋಪ ಹೊತ್ತ ಅಧಿಕಾರಿಗಳು ಯಾವುದೇ ಅಳುಕೆ ಇಲ್ಲದೆ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳ ವರ್ತನೆ ಗಮನಿಸಿದರೆ ಜಿಲ್ಲಾಡಳಿತವು ಅವರ ರಕ್ಷಣೆಗೆ ನಿಂತಿದೆಯೇ ಎಂಬುದು ತಾಲ್ಲೂಕಿನ ಸಾರ್ವಜನಿಕರ ಚರ್ಚಾ ವಿಷಯವಾಗಿದೆ.
ಕಂಡು ಕಾಣದಂತೆ ವರ್ತಿಸುತ್ತಿರುವ ಗುಬ್ಬಿ ತಾಲ್ಲೂಕು ಆಡಳಿತ:- ಕಡಬಾ ನಾಡಕಚೇರಿಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸುಮಾರು ಮೂವತ್ತು ಅನರ್ಹ ಫಲಾನುಭವಿಗಳ ಪಟ್ಟಿ ಮತ್ತು ಅದಕ್ಕೆ ಪೂರಕವಾದ ದಾಖಲೆಗಳು ಮತ್ತು ಅನರ್ಹರು ತಪ್ಪೊಪ್ಪಿಕೊಂಡು ಅಧಿಕಾರಿಗಳಿಗೆ ಹಣ ನೀಡಿ ಸುಮಾರು ಒಂದು ವರ್ಷದಿಂದ ಸರ್ಕಾರದಿಂದ ಹಣ ಪಡೆದಿದ್ದೀವಿ ಎಂಬ ಸಂಬಂಧಪಟ್ಟ ವ್ಯಕ್ತಿಗಳ ವಿಡಿಯೋಗಳು ಎಲ್ಲವನ್ನು ಸಹ ತಹಶೀಲ್ದಾರ್ ರವರಿಗೆ ನೀಡಲಾಗಿದ್ದು ಆದರೆ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳು ಲಭ್ಯವಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ತನಿಖೆ ನಡೆಸುವಲ್ಲಿ ವಿಳಂಬ ಮಾಡಿ ನೇರ ಜಿಲ್ಲಾಡಳಿತದ ಕಡೆ ಬೊಟ್ಟು ಮಾಡಿ ತೋರಿಸುತ್ತಿರುವುದನ್ನು ಗಮನಿಸಿದರೆ ಆರೋಪ ಹೊತ್ತ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ತಾಲ್ಲೂಕಿನ ಸ್ಥಳೀಯ ಗ್ರಾಮಸ್ಥರಿಂದ ದೂರುಗಳ ಸರಮಾಲೆ:- ಸುವರ್ಣಪ್ರಗತಿ ದಿನಪತ್ರಿಕೆಯಲ್ಲಿ ಸುದ್ದಿ ಬಿತ್ತರವಾದ ನಂತರ ಕಡಬಾ ಹೋಬಳಿಯ ಕೆಲವು ಗ್ರಾಮಗಳ ಸ್ಥಳೀಯರಿಂದ ಎಸ್.ಎಸ್.ವೈ.ಯೋಜನೆಗಳು ನಮ್ಮ ಗ್ರಾಮದಲ್ಲಿ ಹಲವು ಅನರ್ಹರಿಗೆ ತಲುಪಿದೆ ಎಂಬ ದೂರುಗಳ ಸರಮಾಲೆ ಕೇಳಿಬರುತ್ತಿದ್ದು ಬಹುತೇಕ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಇಂತಹ ಅಕ್ರಮಗಳು ನಡೆದಿದ್ದು ಸೂಕ್ತ ತನಿಖೆ ನಡೆದರಷ್ಟೇ ಇದಕ್ಕೆಲ್ಲ ಉತ್ತರ ಸಿಗುವಂತಿದೆ.
ತಹಶೀಲ್ದಾರ್ ಆರತಿ.ಬಿ ಪತ್ರಿಕೆಗೆ ಮಾಹಿತಿ :- ನಮ್ಮ ತಾಲ್ಲೂಕು ಆಡಳಿತ ಇದರಲ್ಲಿ ಭಾಗಿಯಾಗಿಲ್ಲ ಏಕೆಂದರೆ ಆರೋಪ ಹೊತ್ತ ಅಧಿಕಾರಿಗಳು ನಮ್ಮವರೇ ಆಗಿರುವುದರಿಂದ ನಾವು ಅವರನ್ನು ರಕ್ಷಣೆ ಮಾಡುತ್ತೇವೆಂದು ತಿಳಿದು ನಮ್ಮನ್ನು ಏನು ಕೇಳಿಲ್ಲ.ತುಮಕೂರು ಉಪ ವಿಭಾಗದ ಅಧಿಕಾರಿಗಳಿಂದ ಅದಕ್ಕಾಗಿಯೇ ಕಮಿಟಿ ರಚನೆ ಮಾಡಿಕೊಂಡು ಖುದ್ದು ಭೇಟಿ ನೀಡಿ ಸಂಬಂದಪಟ್ಟ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಲಾಗಿದೆ.ನಮ್ಮವರು ಕೂಡ ಪರಿಶೀಲನೆ ಸಂದರ್ಭದಲ್ಲಿ ಹೋಗಿ ಬಂದಿದ್ದು ನಮಗೆ ಮೇಲಾಧಿಕಾರಿಗಳಿಂದ ಯಾವುದೇ ವರದಿಯಾಗಲೀ ಮಾಹಿತಿಯಾಗಲಿ ಬಂದಿಲ್ಲ ಎಂದಿದ್ದಾರೆ.
ವರದಿ: ದೇವರಾಜು.ಎಂ.ಎಸ್