ಗಾಂಧೀ ಜಯಂತಿ ಅಂಗವಾಗಿ ಸರಕಾರಿ ಶಾಲೆ ದತ್ತು ಪಡೆದ ಶ್ರೀ ಹಳ್ಳಿಕಾರ್ ಮಠ
ತುರುವೇಕೆರೆ : ಜಾಗತಿಕ ಬದಲಾವಣೆಗೆತಕ್ಕಂತೆ ಗ್ರಾಮೀಣ ಪ್ರದೇಶದ ಮಕ್ಕಳು ಅಣಿಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹಳ್ಳೀಕಾರ್ ಟ್ರಸ್ಟ್ ಅಧ್ಯಕ್ಷ ನಾಗಯ್ಯನವರು ಅಭಿಪ್ರಾಯಪಟ್ಟರು.
ತಾಲೂಕಿನ ಶೇಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ಗಾಂಧೀಜಯಂತಿ ಅಂಗವಾಗಿ ಸರಕಾರಿ ಶಾಲೆಯನ್ನು ಶ್ರೀ ಹಳ್ಳೀಕಾರ್ ಮಠ ದತ್ತು ಪಡದುಕೊಂಡ ವೇಳೆ ಮಾತನಾಡಿದ ಅವರು ಶ್ರೀ ಹಳ್ಳಿಕಾರ್ ಮಠಕ್ಕೆ ಸಮೀಪವಿರುವ ಶೆಟ್ಟಿಗೊಂಡನಹಳ್ಳಿ ಸರಕಾರಿ ಶಾಲೆಯನ್ನು ಶ್ರೀ ಮಠದ ವತಿಯಿಂದ ಗಾಂಧೀ ಜಯಂತಿಯಂದು ದತ್ತು ತೆಗೆದುಕೊಳ್ಳುವ ಮೂಲಕ ಮಹಾತ್ಮರನ್ನು ಸ್ಮರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ನೈತಿಕ, ಸಾಮಾಜಿಕ ಶಿಕ್ಷಣ ನೀಡುವ ಮೂಲಕ ಮಾದರಿ ಶಾಲೆಯನ್ನಾಗಿ ರೂಪುಗೊಳಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಗೌರವಾದ್ಯಕ್ಷ ಡಾ.ಬಿ.ಎಂ. ಪಟೇಲ್ ಪಾಂಡು ರಾಷ್ಟ್ರಪಿತ ಗಾಂಧೀಜೀಯವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅವರ ಜನುಮದಿನವನ್ನು ದೇಶವಾಸಿಗಳೆಲ್ಲರೂ ಹಬ್ಬದಂತೆ ಆಚರಿಸುವಂತಾಗಬೇಕು, ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಸ್ಮರಿಸಬೇಕು ಎಂದರು.
ಬಿ.ಇ.ಓ. ರಂಗಧಾಮಯ್ಯನವರು ಮಾತನಾಡಿ ಶೆಟ್ಟಿಗೊಂಡನಹಳ್ಳಿ ಸರಕಾರಿ ಶಾಲೆಯನ್ನು ಶ್ರೀ ಹಳ್ಳೀಕಾರ್ ಮಠ ಹತ್ತು ವರ್ಷಗಳ ಕಾಲ ದತ್ತು ತೆಗೆದುಕೊಂಡಿದೆ. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ ಉತ್ತಮ ಶಿಕ್ಷಣ ನೀಡಬೇಕೆಂಬ ಶ್ರೀ ಮಠದ ಆಶಯ ಈಡೇರಲಿ ಎಂದು ಆಶಿಸಿದರು.
ಇದೇ ವೇಳೆ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಹಾಗೂ ಕ್ರೀಡಾಪರಿಕರಗಳನ್ನು ಶ್ರೀ ಮಠದ ವತಿಯಿಂದ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯನವರು ಶೆಟ್ಟಿಗೊಂಡನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯನ್ನು ಶ್ರೀ ಹಳ್ಳಿಕಾರ್ ಮಠಕ್ಕೆ 10 ವರ್ಷಗಳ ಕಾಲ ದತ್ತು ನೀಡುತ್ತಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ಟ್ರಸ್ಟ್ ಗೌರವಾದ್ಯಕ್ಷ ಡಾ.ಬಿ.ಎಂ.ಪಟೇಲ್ ಪಾಂಡು, ಹಾಗೂ ಅಧ್ಯಕ್ಷ ನಾಗಯ್ಯನವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪುಟ್ಟೇಗೌಡ, ಟ್ರಸ್ಟ್ ಪದಾದಿಕಾರಿಗಳಾದ ರಂಗಶ್ರೀ, ಸೋಮಣ್ಣ, ದೊಡ್ಡೇಗೌಡ, ವಕೀಲರಾದ ರಮೇಶ್, ದಯಾನಂದ್,ಜಿನ್ನೇಹಳ್ಳಿ ಪುಟ್ಟಣ್ಣ, ಎ.ಪಿ.ಎಂ.ಸಿ. ಸದಸ್ಯ ತಿಮ್ಮರಾಜ್, ತಾ.ಪಂ. ಮಾಜಿ ಸದಸ್ಯ ಸಣ್ಣಯ್ಯ, ಮುಖಂಡರಾದ ಪುಟ್ಟಯ್ಯ, ಬಿ.ಆರ್.ಸಿ.ವಸಂತಕುಮಾರ್, ಮುಖ್ಯಶಿಕ್ಷಕಿ ಶಾಂತಾಮಣಿ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.