ತುಮಕೂರು : ಮಹಾತ್ಮ ಗಾಂಧಿ ಅವರ ಹೋರಾಟವನ್ನು ಹೀನಾಯವಾಗಿ ಜನರ ಮುಂದೆ ಬಿಂಬಿಸುವ ಮೂಲಕ ಬಿಜೆಪಿ ಪಕ್ಷ,ರಾಷ್ಟ್ರಪಿತನಿಗೆ ಹಾಗೂ ದೇಶದ ಜನರಿಗೆ ಅಪಮಾನವೆಸಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 152 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರುಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಮಹಾತ್ಮಗಾಂಧಿ ಅವರು ಸ್ವಾತಂತ್ರ ಚಳವಳಿಯಲ್ಲಿಯೇ ನೇತಾರರೇ ಆಗಿರಲಿಲ್ಲ.ಓರ್ವ ಸಾಮಾನ್ಯ ಕಾರ್ಯಕರ್ತ ನಿಗೂ, ಮಹಾತ್ಮಗಾಂಧಿಯ ಹೋರಾಟದಲ್ಲಿ ಯಾವುದೇ ವೆತ್ಯಾಸವಿಲ್ಲ ಎಂದು ಹೇಳುವ ಮೂಲಕ ಇಡೀ ಸ್ವಾತಂತ್ರ ಚಳುವಳಿ ಯನ್ನೇ ಅಪಮಾನಿಸುತ್ತಿದೆ ಎಂದರು.
ಇಡೀ ಪ್ರಪಂಚವೇ ಇಂದು ಮಹಾತ್ಮಗಾಂಧಿಯವರನ್ನು ಶಾಂತಿಯ ಧೂತ ಎಂದು ಕರೆಯುತ್ತಿದೆ.ವಿಶ್ವದಲ್ಲಿಯೇ ಅವರ ಪ್ರತಿಮೆಗಳನ್ನು ಆನಾವರಣ ಮಾಡಿದ್ದಾರೆ.ವಿಶ್ವಸಂಸ್ಥೆಯೇ ಮಹಾತ್ಮಗಾಂಧಿಯವರ ಹುಟ್ಟಿದ ದಿನವನ್ನು ಶಾಂತಿಯ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.ಇಷ್ಟಿದ್ದರೂ ಭಾರತೀಯ ಜನತಾಪಾರ್ಟಿ ಮಹಾತ್ಮಗಾಂಧಿಯವರ ತತ್ವಾದರ್ಶಗಳನ್ನು ಕಡೆಗಣಿಸಿರುವುದಲ್ಲದೆ,ಅಪಪ್ರಚಾರ ನಡೆಸುವ ಮೂಲಕ ಜನಮಾನಸದಲ್ಲಿ ಅವರ ಬಗ್ಗೆ ಕೆಟ್ಟ ಭಾವನೆ ಬರುವಂತೆ ಬಿಂಬಿಸಲು ಹೊರಟಿದೆ.ಇದಕ್ಕೆ ಎಂದಿಗೂ ಅವಕಾಶ ನೀಡಬಾರದು.ಗಾಂಧಿ ಎಂದರೆ ಕಾಂಗ್ರೆಸ್,ಪ್ರತಿಯೊಬ್ಬ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು,ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಮಹಾತ್ಮಗಾಂಧಿ ಅವರು 1921ರಲ್ಲಿ ಭಾರತದ ಸ್ವಾತಂತ್ರ ಚಳವಳಿ ನಾಯಕತ್ವ ವಹಿಸಿಕೊಂಡ ನಂತರ, ಇಡೀ ಚಳವಳಿಯ ದಿಕ್ಕೆ ಬದಲಾಗಿದ್ದು,ಅವರು ಅನುಸರಿದ ಅಹಿಂಸೆ ಮಾರ್ಗ ವಿಶ್ವದಲ್ಲಿಯೇ ಮಹತ್ವ ಪಡೆದುಕೊಂಡಿತ್ತು.ದೇಶದ ಬಡ ಜನರು, ದೀನದಲಿತರು, ಗ್ರಾಮೀಣ ಜನರ ಅಭಿವೃದ್ದಿಯ ಬಗ್ಗೆ ಅಪಾರ ಕನಸು ಹೊಂದಿದ್ದ ಮಹಾತ್ಮಗಾಂಧಿಯ ರಾಮರಾಜ್ಯದ ಕನಸನ್ನು ನನಸಾಗಿಸುವತ್ತ ಎಲ್ಲಾ ಕಾಂಗ್ರೆಸ್ ಮುಖಂಡರು ದುಡಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳ ಕಾಲ ಇಡೀ ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಗಾಂಧಿಜೀ ಅವರ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ 54 ವರ್ಷಗಳ ಆಡಳಿತ ನಡೆಸಿ,ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು, ಸ್ವಾವ ಲಂಬನೆಯ ಜೀವನ ದೇಶದ ಜನರದ್ದಾಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿತ್ತು.ಮೇಲು,ಕೀಳು, ಬಡತನ, ಸಿರಿತನ ಎಲ್ಲವನ್ನು ಸಹಿಸಿಕೊಂಡು ಮುನ್ನಡೆಸಲಾಗಿದೆ.ಆದರೆ ಕೇವಲ ಏಳು ವರ್ಷದಲ್ಲಿ ಭಾರತವನ್ನು ಮತ್ತೆ ಕಾರ್ಪೋ ರೇಟ್ ಕಂಪನಿಗಳ ದಾಸ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಭಾರತೀಯ ಜನತಾಪಾರ್ಟಿ ಮಾಡುತ್ತಿದೆ.ಧರ್ಮ, ಜಾತಿ ಹೆಸರಿನಲ್ಲಿ ಸಂಘರ್ಷ ಹೆಚ್ಚಾಗಿದೆ.ಜನರು ನಿಮ್ಮನ್ನು ಕ್ಷಮಿಸಲ್ಲ.ಇದು ಬಹಳ ದಿನ ನಡೆಯುವುದಿಲ್ಲ. ಭಾರತೀಯರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನು ಬಿಜೆಪಿ ಮುಖಂಡರು ಅರಿಯಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,ದೇಶದ ಯುವಜನತೆ ಗಾಂಧಿಜೀಯ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ದೇಶಕ್ಕೆ ಉಳಿಗಾಲ. ಬಿಜೆಪಿಯ ಕೋಮುವಾದಿ ನೀತಿಗಳು ಹಿಮ್ಮೆಟ್ಟಿಸಲು ಗಾಂಧಿಜೀಯವರ ಸರ್ವಧರ್ಮ ಸಮನ್ವಯತೆ ಎಂಬ ಮಂತ್ರವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ವಹಿಸಿದ್ದರು.ಈ ವೇಳೆ ಮಾಜಿ ಶಾಸಕ ಎಸ್.ಷಪಿಅಹಮದ್,ಸುಮುಖಕೊಂಡವಾಡಿ,ಆಟೋ ರಾಜು,ಸಿಮೆಂಟ್ ಮಂಜುನಾಥ್,ಮಹಿಳಾ ಘಟಕದ ಗೀತಾ ರುದ್ರೇಶ್, ಸುಜಾತ,ಗೀತಮ್ಮ,ಸಂಜೀವ್ ಕುಮಾರ್,ಜಾರ್ಜ್, ನಟರಾಜು, ಪ್ರಕಾಶ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.