ಲಕ್ಷಾಂತರ ರೂ ಬೆಲೆ ಬಾಳುವ ಕಪ್ಪು ಕಲ್ಲುಗಳ ಸಾಗಿಸುತ್ತಿದ್ದ ಲಾರಿ ವಶ
ಕುಣಿಗಲ್ : ಸುಮಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಅಲಂಕಾರಿಕ ಕಾಮಗಾರಿಗಳಿಗೆ ಬಳಸುವ ಕಪ್ಪು ಕಲ್ಲುಗಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ ಬೆಂಗಳೂರು ಮೂಲದ ಲಾರಿಯೊಂದನ್ನು ತಹಸೀಲ್ದಾರ್ ಮಹಾಬಲೇಶ್ ರವರು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ತಾಲ್ಲೂಕಿನ ಯಡಿಯೂರು ಹೋಬಳಿ ಕೆಂಕೆರೆ ಗ್ರಾಮದ ಸರ್ಕಾರಿ ಸರ್ವೆ ನಂಬರ್ 7/1 ರಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ ಅನಧಿಕೃತವಾಗಿ ಕಪ್ಪು ಕಲ್ಲುಗಳನ್ನು ತುಂಬುತ್ತಿದ್ದ ಲಾರಿಯನ್ನು ಕುಣಿಗಲ್ ತಹಸೀಲ್ದಾರ್ ಮಹಾಬಲೇಶ್ ರವರು ಖಚಿತ ಮಾಹಿತಿಯನ್ನು ಆಧರಿಸಿ ತಮ್ಮ ಸಿಬ್ಬಂದಿಗಳಾದ ರಾಜಸ್ವ ನಿರೀಕ್ಷಕ ಮಲ್ಲಿಕಾರ್ಜುನ್ ಹಾಗೂ ಗ್ರಾಮ ಲೆಕ್ಕಿಗ ಯಮನೂರು ಅವರನ್ನು ಸ್ಥಳಕ್ಕೆ ಕಳುಹಿಸಿ ಲಾರಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಲ್ಲು ತುಂಬಿದ್ದ ಲಾರಿಗೆ ಎಷ್ಟು ದಂಡವನ್ನು ವಿಧಿಸಬಹುದು ಎಂದು ಮಾಹಿತಿ ಕೇಳಿದ್ದಾರೆ. ಈ ಕೃತ್ಯವು ಸುಮಾರು ವರ್ಷಗಳಿಂದ ನಡೆಯುತ್ತಿದ್ದು ಲಕ್ಷಾಂತರ ಬೆಲೆ ಬಾಳುವ ಕಲ್ಲುಗಳನ್ನು ಈ ಸ್ಥಳದಿಂದ ಮತ್ತು ರಂಗಸ್ವಾಮಿ ಗುಡ್ಡದ ಅರಣ್ಯ ಪ್ರದೇಶದಿಂದ ಕರಿ ಕಲ್ಲು ಬೆಂಗಳೂರು ಮೂಲದ ಲಾರಿಗಳು ಅನಧಿಕೃತವಾಗಿ ಸಾಗಣೆ ಮಾಡುತ್ತಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಇದಕ್ಕೆ ಬಿಳಿದೇವಾಲಯ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮೆನ್ ಆಗಿ ಕೆಂಕೆರೆ ಗ್ರಾಮದಲ್ಲಿ ಕೆಲಸ ನಿರ್ವಹಿಸುವ ರಾಜಣ್ಣನವರ ಕುಮ್ಮಕ್ಕು ಇದೆ ಮತ್ತು ಈ ಕೃತ್ಯದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ವಿಚಾರಣೆ ಮಾಡಲು ಕುಣಿಗಲ್ ಪೊಲೀಸರು ರಾಜಣ್ಣನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ವಿಚಾರ ಕಂದಾಯ,ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಈ ಸಂಬಂಧ ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಈ ಹಿಂದೆ ಈ ವಿಚಾರವನ್ನು ತಹಸೀಲ್ದಾರ್ ರವರ ಗಮನಕ್ಕೆ ತಂದಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕೃತ್ಯ ಎಸಗಿರುವ ವ್ಯಕ್ತಿಗಳ ಹಾಗೂ ಲಾರಿ ಮಾಲೀಕರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ?