ತುಮಕೂರು : ಮಾಜಿ ಶಾಸಕ ಬಿ ಸುರೇಶಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ವಾತಾವರಣ ಗರಿಗೆದರಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಲು ಅನೇಕ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಈ ಬಾರಿ ಅಳೆದು-ತೂಗಿ ಆಯ್ಕೆ ಮಾಡಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ತಿಳಿಸಿದ್ದಾರೆ. ಪಕ್ಷ ನಿಷ್ಠ ಕಾರ್ಯಕರ್ತನೋರ್ವ ಈ ಬಾರಿ ಜಿಲ್ಲಾ ಅಧ್ಯಕ್ಷರಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ತಿಳಿಸಿದರು.
ಸಂಘ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಆಯ್ಕೆ ಮಾಡುವುದಾದರೆ ಅದರಲ್ಲೂ ಹಿಂದುಳಿದ ವರ್ಗದವರಿಗೆ ಮಣೆ ಹಾಕುವುದಾದರೆ ಮೊದಲ ಸಾಲಿನಲ್ಲಿ ಊರ್ಡಿಗೆರೆಯ ಲಕ್ಷ್ಮೀಶ, ಬಿ ಕೆ ಮಂಜುನಾಥ್, ಲಿಂಗಾಯಿತರು ಎಂದು ನೋಡುವುದಾದರೆ ಹೆಬ್ಬಾಕ ರವಿಶಂಕರ್, ದಲಿತರು ಹಾಗೂ ನಾಯಕರ ಮತಗಳನ್ನು ಸೆಳೆಯಲು ಪಕ್ಷ ಹಾಗೂ ಸಂಘ ನಿಷ್ಠ ವ್ಯಕ್ತಿಯಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್ ಸೇರಿದಂತೆ ಸಿದ್ದಗಂಗಾ ಆಸ್ಪತ್ರೆ ಡಾ.ಪರಮೇಶ್ ಅವರ ಹೆಸರುಗಳು ಚಾಲ್ತಿಯಲ್ಲಿದೆ ಒಟ್ಟಾರೆ ಪಕ್ಷದ ವರಿಷ್ಠರ ನಿರ್ಣಯವೇ ಅಂತಿಮ ಎಂದು ಹೇಳಲಾಗುತ್ತಿದೆ.ಈಗಾಗಲೇ ಊರ್ಡಿಗೆರೆ ಲಕ್ಷ್ಮಿಶ್ ಅವರ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಹೆಬ್ಬಾಕ ರವಿಶಂಕರ್ ಅವರನ್ನು ಸೊಗಡು ಶಿವಣ್ಣ ಮತ್ತು ಅವರ ಬೆಂಬಲಿಗರು ಬಲವಾಗಿ ವಿರೋಧ ಮಾಡಬಹುದು ಎಂಬುದನ್ನು ವರಿಷ್ಟರು ಗಂಭೀರವಾಗಿ ಚಿಂತನೆ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಪಕ್ಷ, ಸಂಘ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಸಂಸದ ಬಸವರಾಜು ಅವರೆಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ವ್ಯಕ್ತಿಗಾಗಿ ಹುಡುಕಾಟ ನಡೆದಿದ್ದು ಅಚ್ಚರಿಯ ಆಯ್ಕೆ ಆಗುತ್ತದೆ ಎಂದು ಹೇಳಲಾಗುತ್ತಿದೆ.
ಪ್ರಭಾಕರ ಕೂಡ ಸಂಘದ ಹಿರಿಯರ ಮೂಲಕ ಪ್ರಯತ್ನ ಮಾಡುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ ಎನ್ನಲಾಗಿದೆ. ಇದಕ್ಕೆ ಗುರುಗಳಾದ ಸೊಗಡು ಶಿವಣ್ಣ ಮತ್ತು ಬಿ ಸುರೇಶ ಗೌಡರ ಆಶೀರ್ವಾದ ಕೂಡ ಇದೆ ಎನ್ನಲಾಗುತ್ತಿದೆ.