ಶ್ರೀ ಸಿದ್ದಿವಿನಾಯಕ ಗಣಪತಿ ವಿಸರ್ಜನಾ ಮಹೋತ್ಸವ
ತುಮಕೂರು– ಇಲ್ಲಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 46ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಇಂದು ಅತ್ಯಂತ ಸರಳವಾಗಿ ಜರುಗಿತು.
ಇಲ್ಲಿನ ವಿನಾಯಕ ನಗರದ ಸಿದ್ದಿವಿನಾಯಕ ಸೇವಾ ಮಂಡಳಿಯ ಆವರಣದಲ್ಲಿ ಗಣೇಶಮೂರ್ತಿಯ ವಿಸರ್ಜನೋತ್ಸವಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಗಣೇಶೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ 46ನೇ ವರ್ಷದ ಗಣೇಶೋತ್ಸವ ಇದಾಗಿದ್ದು, ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯ ಆರ್ಭಟದಿಂದಾಗಿ ಬಹಳ ಸರಳವಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಕೋವಿಡ್ ಆರ್ಭಟಕ್ಕೂ ಮುನ್ನ ಸಿದ್ದಿವಿನಾಯಕ ಸೇವಾ ಮಂಡಳಿಯವರು ಗಣೇಶೋತ್ಸವವನ್ನು 1 ತಿಂಗಳ ಪರ್ಯಂತ ವಿವಿಧ ಸಾಂಸ್ಕ್ರತಿಕ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅತ್ಯಂತ ವೈಭವೋಪೇತವಾಗಿ ಆಚರಿಸುತ್ತಿದ್ದರು. ನಗರದಲ್ಲಿ ಒಂದು ರೀತಿಯ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತಿತ್ತು. ಅಲ್ಲದೆ ಗಣಪತಿ ಮೂರ್ತಿ ವಿಸರ್ಜನೆ ಮಾಡುವ ಕೊನೆ ದಿನವೂ ಸಹ ಅಷ್ಟೇ ವೈಭವಯುತವಾಗಿ ಕಾರ್ಯಕ್ರಮಗಳು ಜರುಗುತ್ತಿದ್ದವು ಎಂದರು.
ಈ ಬಾರಿ ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ವಯ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ವಿನಾಯಕ ನಗರದಿಂದ ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗಿದ್ದ ಟ್ರಾ÷್ಯಕ್ಟರ್ನಲ್ಲಿ ಸಿದ್ದಿವಿನಾಯಕ ಮೂರ್ತಿಯನ್ನು ಕೂರಿಸಿ ಯಾವುದೇ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳಿಲ್ಲದೆ ಅತ್ಯಂತ ಸರಳವಾಗಿ ಬಿ.ಹೆಚ್. ರಸ್ತೆ ಮುಖೇನ ಮೆರವಣಿಗೆ ಸಾಗಿತು. ಮೆರವಣಿಗೆಯುದ್ದಕ್ಕೂ ನಾದಸ್ವರ ನಡೆದು, ಸಾರ್ವಜನಿಕರು ಪೂಜೆ ನೆರವೇರಿಸಿದರು. ಮಧ್ಯಾಹ್ನ 1 ಗಂಟೆಗೆ ವಿದ್ಯಾನಗರದ ವಾಟರ್ ಟ್ಯಾಂಕ್ನಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ರೆಡ್ಕ್ರಾಸ್ನ ಎಸ್. ನಾಗಣ್ಣ, ಮಂಡಳಿಯ ಅಧ್ಯಕ್ಷರಾದ ಜಿ.ಹೆಚ್. ಪರಮಶಿವಯ್ಯ, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಾಘವೇಂದ್ರರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಪ್ರಭು, ನಿರ್ದೇಶಕರುಗಳಾಗ ನಿಂಗಪ್ಪ, ಮಹದೇವಪ್ಪ, ಪ್ರಸನ್ನಕುಮಾರ್, ಸಿದ್ದರಾಜು, ನರಸಿಂಹಮೂರ್ತಿ, ನಾಗರಾಜು, ನಟರಾಜು, ಮಹೇಶ್, ವಿರೂಪಾಕ್ಷ, ವೆಂಕಟೇಶ್, ಹೇಮರಾಜು ಸಿಂಚ, ವಿಜಯಕುಮಾರ್, ವೆಂಕಟೇಶಬಾಬು, ಪದ್ಮರಾಜು, ಉಮಾಶಂಕರ್, ರಮೇಶ್ಬಾಬು, ಅನುಸೂಯ, ರೇಣುಕಾಪರಮೇಶ್, ಇಂದ್ರಾಣಿ ಮತ್ತಿತರರು ಭಾಗವಹಿಸಿದ್ದರು.