
ತುಮಕೂರು : ಜಿಲ್ಲೆಯಲ್ಲಿ ಸೆಪ್ಟೆಂಬರ್ 17ರಂದು ಕೋವಿಡ್ ಲಸಿಕೆ ಮೆಗಾ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮೇಳದಲ್ಲಿ 1.25ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅಧಿಕಾರಿಗಳು ತಮ್ಮ ಇತರೆ ಎಲ್ಲಾ ಕಾರ್ಯಗಳನ್ನು ಬದಿಗೊತ್ತಿ ನಿಗಧಿತ ಗುರಿಯನ್ನು ಸಾಧಿಸುವ ಮೂಲಕ ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಲಸಿಕಾ ಮೇಳದಲ್ಲಿ ತುಮಕೂರು ತಾಲ್ಲೂಕಿಗೆ 25000, ಶಿರಾ- 15000, ಮಧುಗಿರಿ-12000, ಪಾವಗಡ-10000, ಚಿ.ನಾ.ಹಳ್ಳಿ-12000, ತುರುವೇಕೆರೆ-10000, ಕುಣಿಗಲ್-10000, ಕೊರಟಗೆರೆ-10000 ಸೇರಿದಂತೆ ಜಿಲ್ಲೆಯಲ್ಲಿ 1,25,000 ಲಸಿಕೆ ನೀಡುವ ಗುರಿ ನಿಗಧಿಪಡಿಸಲಾಗಿದ್ದು, ತಾಲೂಕುವಾರು ನಿಗಧಿಪಡಿಸಿರುವ ಗುರಿಯನ್ನು ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳ ಸೂಚನೆಯಂತೆ ಲಸಿಕೆ ನೀಡುವ ನಿಗಧಿತ ಗುರಿಯನ್ನು ಸಾಧಿಸದೆ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಯಾ ತಾಲೂಕು ಕಾರ್ಯಪಡೆಯು ಜವಾಬ್ದಾರಿ ಹೊತ್ತು ಲಸಿಕಾ ಮೇಳದಲ್ಲಿ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು. ಲಸಿಕಾ ಮೇಳದ ದಿನದಂದು ಬೆಳಿಗ್ಗೆ 7 ಗಂಟೆಯೊಳಗೆ ನಿಗಧಿತ ಸ್ಥಳದಲ್ಲಿ ಹಾಜರಿದ್ದು, ಕಾರ್ಯೋನ್ಮುಖರಾಗಬೇಕು. ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಎಷ್ಟು ಲಸಿಕೆ ಹಾಗೂ ಕೇಂದ್ರಗಳಿವೆ ಎಂಬುದನ್ನು ನಿಖರ ಮಾಹಿತಿ ಒದಗಿಸಿ, ವಿಶ್ವವಿದ್ಯಾಲಯದಲ್ಲಿ ಬಾಕಿ ಉಳಿದಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಅವರ ಕುಟುಂಬದವರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಹಾಕಿಸಬೇಕು. ಇದಕ್ಕೆ ಪೂರಕವಾದ ಲಸಿಕಾ ಕೇಂದ್ರ ತೆರೆಯಬೇಕು ಎಂದು ವಿಶ್ವವಿದ್ಯಾನಿಲಯದ ಮುಖ್ಯಸ್ಥರಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಿಗೂ ಲಸಿಕಾ ಮೇಳ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ಒದಗಿಸಬೇಕು. ಪೋಷಕರು ಲಸಿಕೆ ಹಾಕಿಸಿಕೊಳ್ಳುವಂತೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಬೇಕು ಹಾಗೂ ಶಾಲಾ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿವರ್ಗದವರಿಗು ಕಡ್ಡಾಯವಾಗಿ ಲಸಿಕೆ ನೀಡಲು ಕ್ರಮವಹಿಸಬೇಕೆಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶಿಸಿದರು.
ಚುನಾವಣಾ ಮಾದರಿಯಲ್ಲಿಯೇ ಲಸಿಕಾ ಮೇಳ:-
ಚುನಾವಣಾ ಮಾದರಿಯಲ್ಲಿಯೇ ಲಸಿಕಾ ಮೇಳ ನಡೆಸಬೇಕು. ನಿಯೋಜಿತ ನೋಡಲ್ ಅಧಿಕಾರಿಗಳು ಮೇಳದಂದು ಬೆಳಿಗ್ಗೆ 6-30 ರಿಂದ ಲಸಿಕಾಕರಣ ಆರಂಭಿಸಿ ಸಂಜೆ 7 ಗಂಟೆಯವರೆಗೂ ನಡೆಸಬೇಕು. ಈ ಮೇಳದಲ್ಲಿ ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ನೂರರಷ್ಟು ಸಿಬ್ಬಂದಿ ಬಳಕೆ:-
ಲಸಿಕಾ ಮೆಗಾ ಮೇಳ ಯಶಸ್ವಿಗೊಳಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಸಿಬ್ಬಂದಿಗಳನ್ನು ಬಳಸಿಕೊಂಡು ಅಭಿಯಾನ ಯಶಸ್ವಿಗೊಳಿಸಬೇಕು. ಕೊಳಚೆ ಪ್ರದೇಶ, ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂದರು.
ಮೈಕ್ರೋ ಪ್ಲಾನ್:-
ತಾಲೂಕು ಕಾರ್ಯಪಡೆಯು ಯೋಜನೆಯನ್ನು ರೂಪಿಸಿಕೊಂಡು ಮೇಳವನ್ನು ಯಶಸ್ವಿಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಶಾ/ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ಲಸಿಕೆ ಪಡೆಯದಿವರುವವರ ಮಾಹಿತಿ ಪಡೆದುಕೊಂಡು ಅವರಿಗೆ ಲಸಿಕೆ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಟಾಂಟಾಂ ಹೊಡೆಸಿ:-
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಹೋಬಳಿವಾರು ನೋಡಲ್ ಅಧಿಕಾರಿಗಳು ಗ್ರಾಮ ಪಂಚಾಯತಿಗಳ ಮಾಹಿತಿ ಆಧರಿಸಿ ಯೋಜನೆ ರೂಪಿಸಬೇಕು. ಲಸಿಕಾ ಮೇಳ ಪೂರ್ಣಗೊಳ್ಳುವವರೆಗೂ ಪಿಡಿಒಗಳು ಲಸಿಕಾ ತಂಡದ ಜೊತೆಯಲ್ಲಿರಬೇಕು. ಎಲ್ಲಾ ಅಧಿಕಾರಿಗಳು ಮೇಳದಲ್ಲಿ ಸಮನ್ವಯ ಸಾಧಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಇಂದಿನಿಂದಲೇ ಪಿಡಿಒಗಳು ಗ್ರಾಮಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಟಾಂಟಾಂ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಗ್ರಾಮ ಪಂಚಾಯತಿಯಲ್ಲಿ ರೂಟ್ ಮ್ಯಾಪ್ ಹಾಕಿಕೊಂಡು ಲಸಿಕಾ ಅಭಿಯಾನ ಕೈಗೊಳ್ಳಬೇಕು.
ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳೊAದಿಗೆ ಪಿಡಿಒಗಳು ಹಾಗೂ ಮುಖ್ಯ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಲಸಿಕಾಕರಣ ಯಶಸ್ವಿಗೊಳಿಸಬೇಕು.
ಹೋಬಳಿವಾರು ನೋಡಲ್ ಅಧಿಕಾರಿಗಳು ಮೇಳದ ಮುನ್ನಾ ದಿನವೇ ಲಸಿಕಾ ಮೇಳದಲ್ಲಿ ಭಾಗವಹಿಸುವವರ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು. ಅಧಿಕಾರಿಗಳೆಲ್ಲರೂ ಲಸಿಕಾ ಅಭಿಯಾನಕ್ಕಾಗಿ ಎರಡು ದಿನ ಮೀಸಲಿಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್ ಮಾತನಾಡಿ, ಲಸಿಕಾ ಮೇಳಕ್ಕೆ ಅಗತ್ಯವಿರುವ ಸಹಕಾರವನ್ನು ಇಲಾಖೆಯಿಂದ ನೀಡಲಾಗುವುದು. ಅವಶ್ಯವಿದ್ದಲ್ಲಿ ವಾಹನ ವ್ಯವಸ್ಥೆ, ಬೀಟ್ ಪೊಲೀಸರ ನಿಯೋಜನೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಜಿಲ್ಲಾ ಶಸ್ತçಚಿಕಿತ್ಸಕ ಡಾ: ವೀರಭದ್ರಯ್ಯ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.