ಜಿಲ್ಲೆತುಮಕೂರುತುಮಕೂರು ನಗರ

ಹಿಂದಿ ದಿವಸ್ ಆಚರಣೆಗೆ ಜಯಕರ್ನಾಟಕ ಸಂಘಟನೆ ವಿರೋಧ : ಜಿಲ್ಲಾಧಿಕಾರಿಗೆ ಮನವಿ

ತುಮಕೂರು: ಕೇಂದ್ರ ಸರಕಾರ ಸೆಪ್ಟಂಬರ್ 14ನ್ನು ಹಿಂದಿ ದಿವಸ್ ಆಗಿ ಆಚರಿಸಲು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ,ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಯಕರ್ನಾಟಕ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್,ಒಕ್ಕೂಟ ಸರಕಾರ ಪ್ರಾದೇಶಿಕಗಳ ಮೇಲೆ ಹಿಂದಿ ಹೇರುವ ಮೂಲಕ ದಕ್ಷಿಣ ಭಾರತರ ದ್ರಾವಿಡ ಭಾಷೆಗಳ ಮೇಲೆ ಗಧಾಪ್ರಹಾರ ನಡೆಸಲು ಹೊರಟಿದೆ. ಇದಕ್ಕೆ ಎಂದಿಗೂ ರಾಜ್ಯ ಸರಕಾರ ಅವಕಾಶ ಮಾಡಿಕೊಡಬಾರದು.ಕೂಡಲೇ ಹಿಂದಿ ದಿವಸ್ ಆಚರಣೆ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಸಂವಿಧಾನದ ಅರ್ಟಿಕಲ್ 343(1)ರ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಕಲಂ 344(1)ರ ಪ್ರಕಾರ ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆ.ಇದರಲ್ಲಿ ಹಿಂದಿ, ಕನ್ನಡ ಸೇರಿದಂತೆ ಬಹುತೇಕ ಪ್ರಾದೇಶಿಕ ಭಾಷೆಗಳಿವೆ.ಅಲ್ಲದೆ ಕಲಂ 344(1) ಮತ್ತು 351 ರಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಕನ್ನಡವೇ ಅತ್ಯಂತ ಉತ್ಕೃಷ್ಟ ಭಾಷೆ ಎಂದು ಉಲ್ಲೇಖಿಸಲಾಗಿದೆ. ಕಲಂ 350ಎ ಪ್ರಕಾರ ಪ್ರತಿ ರಾಜ್ಯ ಸರಕಾರವೂ ತನ್ನ ಆಡಳಿತ ಭಾಷೆಯಾಗಿ ಮಾತೃಭಾಷೆಯನ್ನೇ ಬಳಸಬೇಕು ಹಾಗೂ ಕಡ್ಡಾಯವಾಗಿ ಅಲ್ಲಿನ ಮಕ್ಕಳಿಗೆ ಮತ್ತು ನಾಗರಿಕರಿಗೆ ಶಿಕ್ಷಣವನ್ನು ಮಾತೃಭಾಷೆ ಯಲ್ಲಿಯೇ ನೀಡಿ,ಪ್ರೋತ್ಸಾಹಿಸಬೇಕೆಂದು ಉಲ್ಲೇಖಿಸಲಾಗಿದೆ.ಆದರೂ ಸಹ ಕೇಂದ್ರ ಸರಕಾರ ಸುತ್ತೊಲೆಯ ಮೂಲಕ ಹಿಂದಿ ಭಾಷೆ ಉತ್ತೇಜನಕ್ಕೆ ಒತ್ತು ನೀಡಲು ಹಿಂದಿ ದಿವಸ್ ಆಚರಿಸಲು ಒತ್ತಡ ಹೇರುತ್ತಿರುವುದು ಸರಿಯಲ್ಲ.ಇದು ರಾಜ್ಯಗಳ ಸಾರ್ವಭೌಮತೆಯನ್ನು ಪ್ರಶ್ನೆ ಮಾಡುವಂತಹ ಪ್ರಕ್ರಿಯೆಯಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ತನ್ನ ಸರ್ವಾಧಿಕಾರಿ ಧೋರಣೆಯ ಮೂಲಕ ಇತರೆ ರಾಜ್ಯಗಳ ಮೇಲೆ ಹೇರಲು ಹೊರಟಿರುವುದು ಭವಿಷ್ಯದಲ್ಲಿ ಅಂತರಿಕ ಕಲಹ ಮತ್ತು ಆಶಾಂತಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಿಂದಿ ದಿವಸ್ ಆಚರಣೆಯನ್ನು ಬದಿಗಿಟ್ಟು, ಕನ್ನಡಿಗರ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕೆಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸುತ್ತದೆ.ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಯಕರ್ನಾಟಕ ಸಂಘಟನೆ ರಾಜ್ಯ ಪ್ರತಿಹಳ್ಳಿಗಳಲ್ಲಿಯೂ ಸರಕಾರದ ಈ ನೀತಿಯ ವಿರುದ್ದ ಹೋರಾಟ ರೂಪಿಸಲಿದೆ ಎಂದು ಅರುಣ್ ಕುಮಾರ್ ತಿಳಿಸಿದರು.
ಈ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ, ಸಂಘಟನಾ ಕಾರ್ಯದರ್ಶಿ ಹರೀಶ್, ಸುನೀಲ್, ರಘು ದೀಕ್ಷಿತ್, ಸೋಮಶೇಖರಗೌಡ, ವಾಹನ ಚಾಲಕರ ವಿಭಾಗದ ಅಧ್ಯಕ್ಷ ಪ್ರತಾಪ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker