ಸೆ.20ರಂದು ಮುಖ್ಯಮಂತ್ರಿ ಮನೆ ಚಲೋ ಚಳವಳಿ
ಕಾರ್ಮಿಕ ಸಂಘಟನೆಗಳ ಬೇಡಿಕೆ ಈಡೇರಿಕೆಗೆ ಆಗ್ರಹ
ತುಮಕೂರು: ಕಾರ್ಮಿಕ ಮಂಡಳಿಯ ಸೆಸ್ ಹಣದಲ್ಲಿ ಖರೀದಿಸಿರುವ ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಸದರಿ ಖರೀದಿಯ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೆಪ್ಟಂಬರ್ 20 ರಂದು ಕಟ್ಟಡ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಿಐಟಿಯುನ ಕೆ.ಮಹಾಂತೇಶ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಸುಮಾರು 2600 ಕೋಟಿ ರೂಗಳನ್ನು ಖರ್ಚು ಮಾಡಿ, ಕಾರ್ಮಿಕರ ಹೆಸರಿನಲ್ಲಿ ಟೆಂಡರ್ ಕರೆಯದೆ, ಘಟನೋತ್ತರ ಮಂಜೂರಾತಿ ಪಡೆದು,ಇವುಗಳನ್ನು ಖರೀದಿಸಲಾಗಿದೆ.ಸದರಿ ವಸ್ತುಗಳ ಖರೀದಿಯಲ್ಲಿ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಹಣ ನೀಡಲಾಗಿದೆ.ಇದರ ಹಿಂದೆ ಬಾರಿ ಅವ್ಯವಹಾರವೇ ನಡೆದಿರುವ ಅನುಮಾನ ಇದ್ದು,ಕೂಡಲೇ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆ ನಡೆಸಿ,ತಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂಬುದು ನಮ್ಮ ಹೋರಾಟದ ಮೂಲ ಉದ್ದೇಶವಾಗಿದೆ ಎಂದರು.
ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕಾರ್ಮಿಕ ಕುಟುಂಬಗಳಿಗೆ ಕನಿಷ್ಠ 10 ಸಾವಿರ ರೂ ಪರಿಹಾರ ಹಣವನ್ನು ವರ್ಗಾವಣೆ ಮಾಡಬೇಕು. ಬೋಗಸ್ ಕಾರ್ಡುಗಳಿಗೆ ಕಡಿವಾಣ ಹಾಕಬೇಕು,ಕಲ್ಯಾಣ ಮಂಡಳಿಯಲ್ಲಿ ಸವಲತ್ತುಗಳಿಗಾಗಿ ಬಂದಿರುವ ಬಾಕಿ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಹಾಗೂ ಮದುವೆ, ಅಪಘಾತ ಪರಿಹಾರದ ಹಣವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಹಲವಾರು ದಿನಗಳಿಂದ ಕಲ್ಯಾಣ ಮಂಡಳಿಯ ಮುಂದೆ ಇದೆ.ಆದರೆ ಸರಕಾರವಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ.ಈ ಎಲ್ಲಾ ಅಂಶಗಳು ಸಹ ಸೆಪ್ಟಂಬರ್ 20 ರ ಮುಖ್ಯಮಂತ್ರಿ ಚಲೋ ಕಾರ್ಯಕ್ರಮದ ಭಾಗವಾಗಿವೆ ಎಂದು ಕೆ.ಮಹಾಂತೇಶ್ ತಿಳಿಸಿದರು.
ಐಎನ್‌ಟಿಯುಸಿಯ ಶಾಮಣ್ಣರೆಡ್ಡಿ ಮಾತನಾಡಿ,1996ರಲ್ಲಿ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಕಲ್ಯಾಣ ಮಂಡಳಿ ಜಾರಿಗೆ ಬಂದಿದೆ. ಇದುವರೆಗೂ 2000ಕೋಟಿ ಬಡ್ಡಿಯೂ ಸೇರಿದಂತೆ 10400 ಕೋಟಿ ರೂ ನಿಧಿ ಇದೆ. ಕಲ್ಯಾಣ ಮಂಡಳಿಯ ನಿಯಮದ ಪ್ರಕಾರವೇ ಈ ಹಣವನ್ನು ಕಾರ್ಮಿಕರ ಕಲ್ಯಾಣ ಖರ್ಚು ಮಾಡಬೇಕಿದೆ. ಆದರೆ ನೇರವಾಗಿ ಹಣವನ್ನು ಖಾತೆಗೆ ಹಾಕದೆ ಖರೀದಿ ಮಾಡಿ ಕಾರ್ಮಿಕರಿಗೆ ಹಂಚುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡಿದೆ.ಕಾರು,ಅಂಬುಲೆನ್ಸ್ಗಳನ್ನು ಖರೀದಿ ಮಾಡಲಾಗುತ್ತಿದೆ. ಇದರ ವಿರುದ್ದ ತನಿಖೆ ನಡೆಸಬೇಕೆಂಬುದು ನಮ್ಮ ಹೋರಾಟವಾಗಿದೆ. ಈಗಾಗಲೇ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಈ ಹೋರಾಟಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿದ್ದು, 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸೆಪ್ಟಂಬರ್ 20 ರಂದು ಬೆಂಗಳೂರಿನಲ್ಲಿ ಸೇರಿ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಎಐಟಿಯುಸಿಯ ಗಿರೀಶ್ ಮಾತನಾಡಿ,ರಾಜ್ಯದಲ್ಲಿ ಕಾರ್ಮಿಕ ಇಲಾಖೆವತಿಯಿಂದ ಹಂಚಿರುವ ಸುಮಾರು 21 ಲಕ್ಷ ದಿನಸಿ ಕಿಟ್‌ಗಳಲ್ಲಿ ಬಹುತೇಕ ಕಳಪೆಯಿಂದ ಕೂಡಿವೆ.ಅಲ್ಲದೆ ಕಾರ್ಮಿಕ ಸಚಿವರ ಕ್ಷೇತ್ರದಲ್ಲಿಯೇ ಸುಮಾರು 65 ಸಾವಿರ ಕಾರ್ಮಿಕರ ಕಿಟ್ ಹಂಚಿಕ ಮಾಡಲಾಗಿದೆ.ಇಷ್ಟೊಂದು ಜನ ಕಾರ್ಮಿಕರು ಇದ್ದಾರೆ ಎಂಬ ಅನುಮಾನ ಮೂಡುತ್ತಿದೆ.ಅಲ್ಲದೆ ಖರೀದಿ ಮಾಡಿರುವ ಎಲ್ಲಾ ಅಂಬ್ಯುಲೆನ್ಸ್ಗಳು ಅವರ ಕ್ಷೇತ್ರದಲ್ಲಿಯೇ ಕಾರ್ಯಾಚರಣೆ ಮಾಡುತ್ತಿವೆ.ಕಾರ್ಮಿಕರ ಮಕ್ಕಳ ಮದುವೆ, ಮನೆ ನಿರ್ಮಾಣ, ವಿದ್ಯಾರ್ಥಿ ವೇತನ ಸೇರಿದಂತೆ ಹಲವಾರು ಸವಲತ್ತುಗಳಿಗೆ ಮಂಡಳಿಗೆ ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಇವೆ. ಹೀಗಿದ್ದರೂ ಇನೋವ ಕಾರುಗಳನ್ನು ಲಕ್ಷಾಂತರ ರೂ ವೆಚ್ಚದಲ್ಲಿ ಕೊಳ್ಳುವ ಅಗತ್ಯವಿದೆ ಎಂದು ಪ್ರಶ್ನಿಸಿದರು.
ಎಐಯುಟಿಯುಸಿಯ ಷಣ್ಮುಗಂ ಮಾತನಾಡಿ, ಕಾರ್ಮಿಕರ ಸವಲತ್ತು ಕೇಳಿದಾಗ ನೂರಾರು ಸಬೂಬು ಹೇಳುವ ಸರಕಾರ, ಟೂಲ್‌ಕಿಟ್, ರೇಷನ್ ಕಿಟ್ ಖರೀದಿಗೆ ಯಾವುದೇ ಮಾನದಂಡ ಅನುಸರಿಸದೆ ಹಣ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಕ್ರಮವನ್ನು ಖಂಡಿಸಿ,ಖರೀದಿಯಲ್ಲಿ ಆಗಿರುವ ಅವ್ಯವಹಾರ ತನಿಖೆಗೆ ಒತ್ತಾಯಿಸಿ, ಒಂಭತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು ಸೇರಿ ಈ ಹೋರಾಟ ರೂಪಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಕಾರ್ಮಿಕರು ಪಾಲ್ಗೊಳ್ಳಲಿದ್ದು, ಇದು ಕಾರ್ಮಿಕರ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ ಎಂದರು.