ಮಧುಗಿರಿ : ಮೀನಗೊಂದಿ ಶ್ರೀಮಲೆರಂಗನಾಥಸ್ವಾಮಿ ದೇವಸ್ಥಾನದ ಸಮುದಾಯ ಭವನವನ್ನು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಹಾಗೂ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜುರವರ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ರಾಷ್ಟ್ರೀಯ ಕ್ರೀಬ್ಕೋ ನಿರ್ದೇಶಕ ಆರ್.ರಾಜೇಂದ್ರ ಭರವಸೆ ನೀಡಿದರು.
ತಾಲ್ಲೂಕಿನ ಮರುವೇಕೆರೆ – ಬಂದ್ರೆಹಳ್ಳಿ ತೇರಿನ ಬೀದಿಯಲ್ಲಿರುವ ಮಲೆ ರಂಗನಾಥಸ್ವಾಮಿ ದೇವಸ್ಥಾನದ ಬೆಟ್ಟದ ಮೇಲೆ ಮರುವೇಕೆರೆ- ಗಂಜಲಗುಂಟೆ ಗ್ರಾಮ ಪಂಚಾಯಿತಿಗಳ ವತಿಯಿಂದ 35ಕ್ಕೂ ಹೆಚ್ಚು ವಿವಿಧ ಪ್ರಭೇದದ ಹಣ್ಣಿನ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪ್ರಾಣಿ ಪಕ್ಷಿಗಳಿಗೆ ಅಹಾರ ದೊರೆಯಲಿ ಎಂಬ ಉದ್ದೇಶದಿಂದ ಮತ್ತು ಪರಿಸರ ಸಂರಕ್ಷಣೆಗೆ ಅಧ್ಯತೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂತಹ ಸಂತ್ಕಾರ್ಯಕ್ಕೆ ಹೆಚ್ಚು ಯುವಕರು ಪಾಲ್ಗೊಂಡಿರುವುದು ಸಂತಸ ತಂದಿದೆ. ಬೆಟ್ಟದ ಮೇಲೆ ನೀರಿನ ವ್ಯವಸ್ಥೆ ಕಲ್ಪಿಸಲು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಶಾಸಕರಾಗಿದ್ದ ಅವಧಿಯಲ್ಲಿ 45 ಲಕ್ಷ ರೂ ಹಣ ಅನುಧಾನ ನೀಡಲಾಗಿತ್ತು ಎಂದ ಅವರು ದೇವಸ್ಥಾನಕ್ಕೆ ವೈಯಕ್ತಿಕವಾಗಿಯೂ ಯುಪಿಎಸ್, ಫ್ಯಾನ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲಾಗುವುದೆಂದರು.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣನವರನ್ನು ಶಾಸಕರನ್ನಾಗಿಸಲು ಈ ಭಾಗದಲ್ಲಿ ಅತಿ ಹೆಚ್ಚು ಮತ ನೀಡುವಂತೆ ಮನವಿ ಮಾಡಿದ ಅವರು, ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೆನೆಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯ. ಆರ್.ರಾಜೇಂದ್ರ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿದ್ದು, ಯಶಸ್ವಿಯಾಗಲು ಸಹಕರಿಸಿದ ಕೆ.ಎನ್.ರಾಜಣ್ಣ ಹಾಗೂ ಹಾಗೂ ಆರ್.ರಾಜೇಂದ್ರ ಅವರ ಅಭಿಮಾನಿಗಳಿಗೆ ಅಭಿನಂದನೆ ತಿಳಿಸಲಾಗುವುದು ಎಂದರು.
ಡಿವೈಎಸ್‌ಪಿ ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಮಾಜಿ ನಿರ್ಧೆಶಕ ತಿಮ್ಮರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ವಿಎಸ್‌ಎಸ್‌ಎನ್ ಅಧ್ಯಕ್ಷ ಫಾಜಿಲ್ ಖಾನ್, ಮರುವೆಕೆರೆ ಗ್ರಾಪಂ ಅಧ್ಯಕ್ಷ ಭವ್ಯಕೇಶವಮೂರ್ತಿ, ಐ.ಡಿ.ಹಳ್ಳಿ ಗ್ರಾ,ಪಂ ಅಧ್ಯಕ್ಷ ನರಸಿಂಹರೆಡ್ಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ವಿ.ಆರ್.ಭಾಸ್ಕರ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಹಲಿಂಗೇಶ್, ಮುಖಂಡರುಗಳಾದ ಡಿ.ಎಚ್.ನಾಗರಾಜು, ಕೇಶವಮೂರ್ತಿ, ಎಚ್.ಎಸ್.ನಾಗರಾಜು, ಟಿವಿಎಸ್ ಮಂಜು, ಬಂದ್ರೇಹಳ್ಳಿ ನಾಗಾರ್ಜುನ, ಹೊನ್ನಾಪುರ ದೀಪು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ.ಆಶಾ, ಗ್ರಾಪಂ ಸದಸ್ಯರಾದ ಮಂಜುನಾಥ್, ದಾಸೇಗೌಡ ಮಹೇಶ್, ಚಂದ್ರಶೇಖರ್, ರವಿಕುಮಾರ್, ಪಾಪಯ್ಯ, ವೀರೇಶ್, ಚಿಕ್ಕರಂಗಯ್ಯ, ಬಸವರಾಜು ಹಾಗೂ ಇತರರು ಹಾಜರಿದ್ದರು.